Electric vehicles: 2 ನಿಮಿಷದಲ್ಲಿ ಬ್ಯಾಟರಿ ಬದಲಾವಣೆ, ಕೇವಲ 50 ರೂ. ಶುಲ್ಕ! ಸಿಲಿಕಾನ್‌ ಸಿಟಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಒತ್ತು!

Electric vehicles: ಬೆಂಗಳೂರಿನಲ್ಲಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಹಾಗೂ ಕಿರಾಣಿ ಅಥವಾ ಇನ್ನಾವುದೇ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲುಗಳವರೆಗೂ ತಲುಪಿಸಲು ಹೆಚ್ಚಾಗಿ ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರಗಳ ವಾಹನಗಳು ಬಳಕೆಯಾಗುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಳೆದ ಬಾರಿ ನಡೆದಿದ್ದ ಕಾಪ್-26 ಸಮ್ಮೇಳನದಲ್ಲಿ ವಿಶ್ವದ ಪ್ರಮುಖ ನಾಯಕರು ಒಟ್ಟಾಗಿ ಸೇರಿಕೊಂಡು ಜಗತ್ತಿನಲ್ಲಿ ಇಂಗಾಲದ ಫುಟ್ ಪ್ರಿಂಟನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಅದರಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಹ ಭಾರತವು 2070ರ ವರೆಗೆ ನೆಟ್ ಕಾರ್ಬನ್ ಇಮಿಷನ್ (Net Carbon emission) ಶೂನ್ಯವಾಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ.ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರತದಲ್ಲಿ (India) ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ಅವುಗಳ ಪ್ರಾರಂಭಿಕ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಇವುಗಳಲ್ಲಿ ಮುಖ್ಯವಾಗಿದೆ ವಿದ್ಯುತ್ ಚಾಲಿತ ವಾಹನಗಳ (Electric Vehicles) ಸಂಖ್ಯೆ ಸರ್ವವ್ಯಾಪಿಯಾಗುವಂತೆ ಮಾಡುವುದು. ಈಗಾಗಲೇ ಈ ತಂತ್ರಜ್ಞಾನವನ್ನು ವೃದ್ಧಿಸಿ ಬಲಪಡಿಸುವ ನಿಟ್ಟಿನಲ್ಲಿ ಹಲವು ಸ್ಟಾರ್ಟಪ್‌ಗಳು (Startup) ಕಾರ್ಯಾರಂಭ ಮಾಡಿವೆ. ಬೆಂಗಳೂರಿನಲ್ಲೂ ಸಹ ವಿದ್ಯುತ್ ಚಾಲಿತ ದ್ವಿಚಕ್ರ (Two wheeler) ಹಾಗೂ ತ್ರಿಚಕ್ರ ವಾಹನಗಳ (Three wheeler) ಓಡಾಟ ನಿಧಾನವಾಗಿ ಏರುತ್ತಿದೆ.

    ಆದರೆ, ಈ ಮಾರ್ಗ ಅಂದುಕೊಂಡಷ್ಟು ಸುಲಭವಿಲ್ಲ. ವಿಶೇಷವಾಗಿ ದ್ವಿಚಕ್ರ ಹಾಗೂ ತ್ರಿಚಕ್ರ ವಿದ್ಯುತ್ ಚಾಲಿತ ವಾಹನಗಳನ್ನು ವಿವಿಧ ಸೇವೆಗಳಿಗೆಂದು ಬಾಡಿಗೆ ಪಡೆದು ಅಥವಾ ಬಾಡಿಗೆಯ ರೂಪದಲ್ಲಿ ಕಾರ್ಯಾಚರಣೆ ನಡೆಸುತ್ತಿರುವಾಗ ಮೊದಲು ಎದುರಾಗುವ ಸವಾಲು ಎಂದರೆ ಚಾರ್ಜಿಂಗ್ ನಿಲ್ದಾಣಗಳು. ಹೌದು, ಹೇಗೆ ಇತರೆ ವಾಹನಗಳಿಗೆ ಇಂಧನ ಬೇಕಾಗುವುದೋ ಈ ವಿದ್ಯುತ್ ಚಾಲಿತ ವಾಹನಗಳ ಓಡಾಟಕ್ಕೂ ವಿದ್ಯುತ್ ಅವಶ್ಯಕವಾಗಿದ್ದು ಇದನ್ನು ತ್ವರಿತವಾಗಿ ಚಾರ್ಜಿಂಗ್ ನಿಲ್ದಾಣಗಳಿಂದ ಪಡೆಯಬಹುದಾಗಿದೆ.

    ನಗರದಲ್ಲಿ ಹೆಚ್ಚಾಗಿದೆ ವಿದ್ಯುತ್ ಚಾಲಿತ ವಾಹನಗಳ ಅವಶ್ಯಕತೆ!

    ಸದ್ಯ ಬೆಂಗಳೂರಿನಲ್ಲಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಹಾಗೂ ಕಿರಾಣಿ ಅಥವಾ ಇನ್ನಾವುದೇ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲುಗಳವರೆಗೂ ತಲುಪಿಸಲು ಹೆಚ್ಚಾಗಿ ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರಗಳ ವಾಹನಗಳು ಬಳಕೆಯಾಗುತ್ತಿವೆ. ಈ ರೀತಿ ವಿದ್ಯುತ್ ಚಾಲಿತ ವಾಹನಗಳ ಮೂಲಕ ಸೇವೆ ಒದಗಿಸುವ ಕೆಲಸಗಾರರಿಗೆ ನಿತ್ಯ ತಮ್ಮ ವಾಹನಗಳಿಗೆ ಬೇಕಾಗುವ ವಿದ್ಯುತ್ ಅನ್ನು ಪೂರೈಸಿಕೊಳ್ಳಲು ಚಾರ್ಜಿಂಗ್ ನಿಲ್ದಾಣಗಳ ಮೊರೆ ಹೋಗಬೇಕಾಗಿದ್ದು ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ.

    ಹಾಗಾಗಿ, ಇದೀಗ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ವಿನೂತನ ತಂತ್ರವೊಂದನ್ನು ರೂಪಿಸಲಾಗಿದ್ದು ಆ ಮೂಲಕ ಆರೆಂಜ್ ಮತ್ತು ಕಪ್ಪು ಬಣ್ಣದ ಬೂತ್‌ಗೆ ತೆರಳಿ ಅಲ್ಲಿ ಇರಿಸಲಾಗಿರುವ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದು ಈಗಾಗಲೇ ಖಾಲಿಯಾಗಿರುವ ಬ್ಯಾಟರಿಯನ್ನು ಆ ಬೂತ್‌ನಲ್ಲಿ ಇರಿಸಿದರೆ ಸಾಕು. ಹೌದು, ಇದು ನಿಮ್ಮ ದೈನಂದಿನ ಜೀವನದಲ್ಲಿ ಹೇಗೆ ಒಂದು ಅಡುಗೆ ಅನಿಲದ ಸಿಲಿಂಡರ್ ಖಾಲಿಯಾದ ಮೇಲೆ ಅದನ್ನು ಮರಳಿಸಿ ಮತ್ತೊಂದು ಅನಿಲದಿಂದ ತುಂಬಿದ ಸಿಲಿಂಡರ್ ಪಡೆಯುವಿರೋ ಅದೇ ರೀತಿಯ ಸ್ವ್ಯಾಪ್ ಮಾಡಬಹುದಾದ ಹೊಸ ವಿಧಾನ ಇದಾಗಿದೆ.

    ಬ್ಯಾಟರಿ ಸ್ವ್ಯಾಪಿಂಗ್ ಟೆಕ್ನಾಲಜಿ

    ಮೆಟ್ರೋ ರೈಡ್‌ಗಾಗಿ ಇ-ಶಟಲ್ ವಾಹನ ಓಡಿಸುವ ಮೂಲಕ ಸೇವೆ ಒದಗಿಸುವ 38ರ ಪ್ರಾಯದ ಸಾಗ್ಯಾರಾಣಿ ಈಗ ಮುಂಚಿನಂತೆ ಅವಸ್ಥೆ ಪಡಬೇಕಾಗಿಲ್ಲ. ತನ್ನ ವಾಹನದ ಬ್ಯಾಟರಿ ಖಾಲಿ ಆಗಿ ಚಾರ್ಜ್ ಆಗಿರುವ ಬ್ಯಾಟರಿ ಬೇಕಾದಾಗ ಸನ್ ಮೊಬಿಲಿಟಿ ಅವರ ಬೂತ್‌ನತ್ತ ತೆರಳಿ ತನಗೆ ಈಗಾಗಲೇ ನೀಡಲಾಗಿರುವ ಕೀ ಕೋಡ್ ಬಳಸಿ ಅಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗಿರುವ ಚಾರ್ಜ್ ಆದ ಬ್ಯಾಟರಿ ಅನ್ನು ಹೊರತೆಗೆದು ತನ್ನ ಬಳಿ ಇರುವ ಖಾಲಿ ಬ್ಯಾಟರಿಯನ್ನು ಅದರಲ್ಲಿ ಸೇರಿಸುತ್ತಾರೆ. ಈ ಪ್ರಕ್ರಿಯೆಗಾಗಿ ಆಕೆ ವ್ಯಯಿಸುವ ಸಮಯ ಕೇವಲ ಎರಡು-ಮೂರು ನಿಮಿಷಗಳು ಮಾತ್ರ, ಅಲ್ಲದೆ ಅದಕ್ಕಾಗಿ ಅವಳು ನೀಡುವ ವೆಚ್ಚ ಕೇವಲ 50 ರೂಪಾಯಿ ಮಾತ್ರ.

    ಇದನ್ನೂ ಓದಿ: ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ Oppo K10 ಮತ್ತು Enco Air 2; ಇವುಗಳ ಬೆಲೆ, ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

    ಇದನ್ನೇ ಬ್ಯಾಟರಿ ಸ್ವ್ಯಾಪಿಂಗ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ. ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಈ ವಿಧಾನವು ಅದರಲ್ಲೂ ವಿಶೇಷವಾಗಿ ಜನನಿಬಿಡ ಮಹಾನಗರಗಳು ಹಾಗೂ ಜನರು ಹೆಚ್ಚಾಗಿ ವಸತಿ ಸಮುಚ್ಚಯಗಳಲ್ಲಿ ವಾಸಿಸುತ್ತಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ನಮ್ಮ ಭಾರತದಲ್ಲಿ ಇನ್ನೂ ಸಾಕಷ್ಟು ವಿಸ್ತರಿಸಬೇಕಾಗಿದೆ.

    ಈಗಾಗಲೇ ಬೆಂಗಳೂರು ಸೇರಿದಂತೆ ಭಾರತದ ಹಲವು ಮಹಾನಗರಗಳಲ್ಲಿ ವಿದ್ಯುತ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆಯಾದರೂ ಅದಕ್ಕೆ ಪೂರಕವಾದ ಸಂಖ್ಯೆಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳಿಲ್ಲ. ಹಾಗೂ, ಚಾರ್ಜ್ ಮಾಡಿಕೊಳ್ಳಲು ಸಾಕಷ್ಟು ಸಮಯ ವ್ಯಯವೂ ಆಗುತ್ತದೆ.

    ಇದನ್ನೂ ಓದಿ: Apple Watch Series 3 ಈ ವರ್ಷ ಸ್ಥಗಿತಗೊಳ್ಳುವ ಸಾಧ್ಯತೆ!

    ಅರ್ಬನ್ ನಗರಗಳಲ್ಲಿ ಹೆಚ್ಚು ವೇಗದ ಹಾಗೂ ಶಕ್ತಿಶಾಲಿಯಾದ ವಾಹನಗಳ ಅವಶ್ಯಕತೆ ಇಲ್ಲದೆ ಇರುವುದರಿಂದ ಕಡಿಮೆ ಶಕ್ತಿಶಾಲಿ ಬ್ಯಾಟರಿ ಬಳಸಿ ಕಡಿಮೆ ವೇಗದ ವಿದ್ಯುತ್ ವಾಹನಗಳನ್ನು ಬಳಸಬಹುದಾಗಿದ್ದು, ಈ ನಿಟ್ಟಿನಲ್ಲಿ ಈ ರೀತಿಯ ನೂತನ ವಿಧಾನದಿಂದ ಚಾರ್ಜಿಂಗ್ ನಿಲ್ದಾಣದಲ್ಲಿ ಹೆಚ್ಚು ಸಮಯ ವ್ಯಯಿಸದೆ ತ್ವರಿತವಾಗಿ ಬೂತ್ ಬಳಿ ತೆರಳಿ ಬ್ಯಾಟರಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮತ್ತೆ ರಸ್ತೆಗಿಳಿದು ಸೇವೆಗಳಲ್ಲಿ ನಿರತವಾಗಲು ಡೆಲಿವರಿ ಕಾರ್ಮಿಕರಿಗೆ ಇದೊಂದು ಅದ್ಭುತ ಮಾರ್ಗವೇ ಆಗಿದೆ.

    ಹಾಗೆ ನೋಡಿದರೆ ಚೀನಾದಲ್ಲಿ ಈ ವಿಧಾನವು ಸಾಕಷ್ಟು ಜನಪ್ರಿಯ ಹಾಗೂ ಪ್ರಬಲ ಉಪಸ್ಥಿತಿ ಹೊಂದಿದೆ. ಭಾರತದ ಮಟ್ಟಿಗೆ ಇದು ಇನ್ನು ಬೆಳೆಯಬೇಕಾಗಿದೆ. ಆದರೂ ಬೆಂಗಳೂರಿನಲ್ಲಿ ಈ ನೂತನ ವಿಧಾನ ಈಗ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬೆಳೆಯಲಿದೆ ಎಂಬ ಭರವಸೆ ಮೂಡಿಸುತ್ತಿದೆ ಎಂದರೆ ತಪ್ಪಾಗಲಾರದು.
    First published: