ಈಗ ತಾಂತ್ರಿಕತೆ (Technology) ಎಷ್ಟೆಲ್ಲ ಬೆಳೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಟೆಕ್ ಜಗತ್ತು ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳನ್ನು (Invention) ಮಾಡುತ್ತಾ, ಜನರ ದಿನನಿತ್ಯದ ಕೆಲಸಗಳನ್ನು ಮತ್ತಷ್ಟು ಸುಲಭ ಮಾಡುತ್ತಲೇ ಇದೆ. ಪ್ರತಿ ಕ್ಷೇತ್ರದಲ್ಲಿಯೂ ಡಿಜಿಟಲ್ (Digital) ಸೇವೆ (Service) ಮುಂಚೂಣಿಯಲ್ಲಿದೆ. ಹಿಂದಿನ ಕಾಲದಲ್ಲಿ ಅಕ್ಷರ ಕಲಿಯದವರು ಅನಕ್ಷರಸ್ಥರು ಆಗಿದ್ದರು. ಆದ್ರೆ ಈಗ ಕಂಪ್ಯೂಟರ್ (Computer) ಬಗ್ಗೆ ಗೊತ್ತಿಲ್ಲದೇ ಇರೋರನ್ನು ಅನಕ್ಷರಸ್ಥರು ಅಂತ ಕರಿತಾರೆ. ಇಲ್ಲೇ ನೋಡಿ ತಾಂತ್ರಿಕತೆಗೆ ಎಷ್ಟೊಂದು ಬೆಲೆ ಇದೆ ಅಂತ.
ಈಗ ನೀವು ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಪ್ರವೇಶಾತಿ ಪ್ರಕ್ರಿಯೆಗಳನ್ನು ಭೌತಿಕವಾಗಿ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯವೂ ತೆಗೆದುಕೊಳ್ಳುತ್ತದೆ. ಅದನ್ನೆಲ್ಲ ಪರಿಹರಿಸುವ ಡಿಜಿ-ಯಾತ್ರಾ ಎಂಬ ಡಿಜಿಟಲ್ ಸೇವೆಯನ್ನು ಪ್ರಸ್ತುತಪಡಿಸಲಾಗುತ್ತಿದೆ.
ಡಿಜಿ -ಯಾತ್ರಾ ಸೇವೆಯನ್ನು ಆರಂಭಿಸಿದ ಭಾರತ ವಿಮಾನಯಾನ ಪ್ರಾಧಿಕಾರ
ಗುರುವಾರದಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಡಿಜಿ-ಯಾತ್ರಾ ಎಂಬ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಿದ್ದು, ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಪರ್ಕರಹಿತ ಪ್ರವೇಶವನ್ನು ಒದಗಿಸುತ್ತದೆ.
ಹೊಸ ಸೇವೆಯು ಬೋರ್ಡಿಂಗ್ ಪಾಸ್ಗೆ ಲಿಂಕ್ ಮಾಡಬಹುದಾದ ಅವರ ಗುರುತನ್ನು ಸ್ಥಾಪಿಸಲು ಮುಖದ ವೈಶಿಷ್ಟ್ಯಗಳನ್ನು ಬಳಸಿಕೊಂಡು ವಿಮಾನ ನಿಲ್ದಾಣಗಳಲ್ಲಿನ ವಿವಿಧ ಚೆಕ್ಪಾಯಿಂಟ್ಗಳ ಮೂಲಕ ಪ್ರಯಾಣಿಕರ "ಸಂಪರ್ಕರಹಿತ ಮತ್ತು ತಡೆರಹಿತ" ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.
ಎಲ್ಲೆಲ್ಲಾ ಲಭ್ಯವಿದೆ
ಈ ಸೌಲಭ್ಯವು ಈಗ ದೆಹಲಿಯ ಐಜಿಐ ವಿಮಾನ ನಿಲ್ದಾಣ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ.
ಜಿಎಂಆರ್-ಮಾಲೀಕತ್ವದ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ನಿರ್ವಹಿಸುತ್ತಿರುವ ಕೇಂದ್ರದ ಡಿಜಿ-ಯಾತ್ರಾ ಕಾರ್ಯಕ್ರಮವು Android ಸಾಧನಗಳಿಗಾಗಿ ಅಪ್ಲಿಕೇಶನ್ನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ, ಮುಖ ಗುರುತಿಸುವಿಕೆ ಆಧಾರಿತ ಪ್ರಯಾಣಿಕರ ಸಂಸ್ಕರಣಾ ವ್ಯವಸ್ಥೆ ಡಿಜಿ-ಯಾತ್ರವನ್ನು ಪರೀಕ್ಷಿಸಲಾಗಿದೆ ಮತ್ತು ಟರ್ಮಿನಲ್ 3 ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಳವಡಿಸಲಾಗಿದೆ.
ಡಿಜಿಯಾತ್ರವನ್ನು ಹೇಗೆ ಬಳಸುವುದು?
ಈ ವೈಶಿಷ್ಟ್ಯವನ್ನು ಬಳಸುವ ಮೊದಲು ಪ್ರಯಾಣಿಕರು ಡಿಜಿಯಾತ್ರಾ (DigiYatra) ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಅಪ್ಲಿಕೇಶನ್ನ iOS ಆವೃತ್ತಿಯನ್ನು ಮುಂಬರುವ ವಾರಗಳಲ್ಲಿ ಪ್ರಕಟಿಸಲಾಗುವುದು, ಆದರೆ Android ಆವೃತ್ತಿಯು ಈಗಾಗಲೇ ಲಭ್ಯವಿದೆ.
ಪ್ರಯಾಣಿಕರು ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಬಳಕೆದಾರರು ಆಪ್ನಲ್ಲಿ ನೋಂದಾಯಿಸಲು ಆಧಾರ್ ಕಾರ್ಡ್ ಮತ್ತು ಆಧಾರ್ ಲಾಗಿನ್ ರುಜುವಾತುಗಳೊಂದಿಗೆ ಸೆಲ್ಫಿ ಅಗತ್ಯವೂ ಇದೆ. ಅದರ ನಂತರ, CoWIN ರುಜುವಾತುಗಳನ್ನು ಬಳಸಿಕೊಂಡು ವ್ಯಾಕ್ಸಿನೇಷನ್ ಮಾಹಿತಿಯೊಂದಿಗೆ ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ.
ಒಮ್ಮೆ ವ್ಯಕ್ತಿಯು ತಮ್ಮ ಬೋರ್ಡಿಂಗ್ ಕಾರ್ಡ್ ಅನ್ನು QR ಕೋಡ್ ಅಥವಾ ಬಾರ್ ಕೋಡ್ನೊಂದಿಗೆ ಸ್ಕ್ಯಾನ್ ಮಾಡಿದ ನಂತರ ರುಜುವಾತುಗಳನ್ನು ವಿಮಾನ ನಿಲ್ದಾಣದೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಡಿಜಿ ಯಾತ್ರಾ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದು ಇಲ್ಲಿದೆ..
ಪ್ರಯಾಣಿಕರು ಆಧಾರ್ ಬಳಸಿ ಪ್ರಯಾಣಕ್ಕೆ ಬೇಕಾದ ಮುಖ್ಯ ಆಧಾರಗಳನ್ನು ರಚಿಸಲು ಮತ್ತು ತಮ್ಮ ಚಿತ್ರವನ್ನು ಅಪ್ಲೋಡ್ ಮಾಡಲು ಮೊಬೈಲ್ ಡಿಜಿ-ಯಾತ್ರಿ ಅಪ್ಲಿಕೇಶನ್ನೊಂದಿಗೆ ಬೋರ್ಡಿಂಗ್ ಪಾಸ್ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ.
ವಿಮಾನ ನಿಲ್ದಾಣದಲ್ಲಿ, ಅವರು ತಮ್ಮ ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡಬಹುದು. ಇ-ಗೇಟ್ ಅವರ ಮುಖವನ್ನು ಸೆರೆಹಿಡಿಯುತ್ತದೆ ಮತ್ತು ಅವರು ಅಪ್ಲೋಡ್ ಮಾಡಿದ ಮಾಹಿತಿ ಸರಿ ಇದಿಯೋ ಇಲ್ಲವೋ ಎಂಬುದನ್ನು ಹೋಲಿಕೆ ಮಾಡುತ್ತದೆ.
ಬೋರ್ಡಿಂಗ್ ಗೇಟ್ಗೆ ಹೋಗಬೇಕಾದರೆ ಇವೆಲ್ಲಾ ಇರಲೇಬೇಕು
ವೈಯಕ್ತಿಕ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿದ ನಂತರ, ಗೇಟ್ಗಳು ತೆರೆದುಕೊಳ್ಳುತ್ತವೆ. ಪ್ರಯಾಣಿಕರು ಭದ್ರತಾ ತಪಾಸಣೆ ಪ್ರದೇಶ ಮತ್ತು ಬೋರ್ಡಿಂಗ್ ಗೇಟ್ಗೆ ಹೋಗಬಹುದು.
ಅಲ್ಲಿ ಅವರ ಮುಖವನ್ನು ಮತ್ತೆ ಸೆರೆಹಿಡಿಯಲಾಗುತ್ತದೆ. ಪರಿಶೀಲನೆಯ ನಂತರ, ಪ್ರಯಾಣಿಕರು ಮುಂದೆ ಸಾಗಬಹುದು ಮತ್ತು ಅವರು ತಾವು ಪ್ರಯಾಣಿಸುತ್ತಿರುವ ವಿಮಾನದಲ್ಲಿ ಪ್ರಯಾಣ ಮಾಡಬಹುದು.
ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಕೇಂದ್ರೀಯ ಸಂಗ್ರಹಣೆಯನ್ನು ಭಾರತ ವಿಮಾನ ಪ್ರಾಧಿಕಾರ ಮಾಡುವುದಿಲ್ಲ. ಅದರ ಬದಲಾಗಿ ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ರುಜುವಾತುಗಳನ್ನು ಪ್ರಯಾಣಿಕರ ಸ್ಮಾರ್ಟ್ಫೋನ್ನಲ್ಲಿಯೇ ಸುರಕ್ಷಿತ ವ್ಯಾಲೆಟ್ನಲ್ಲಿ ಸಂಗ್ರಹಿಸಲಾಗುತ್ತದೆ.
ಮಾರ್ಚ್ 2023 ರ ವೇಳೆಗೆ ಹೈದರಾಬಾದ್, ಕೋಲ್ಕತ್ತಾ, ಪುಣೆ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳಲ್ಲಿ ಈ ಡಿಜಿ-ಯಾತ್ರಾ ಸೇವೆಯನ್ನು ಪ್ರಾರಂಭಿಸಲಾಗುವುದು. ಕ್ರಮೇಣವಾಗಿ ದೇಶದ ಎಲ್ಲೆಡೆ ಈ ತಂತ್ರಜ್ಞಾನವನ್ನು ಅಳವಡಿಸುವ ಯೋಜನೆಯನ್ನು ವಿಮಾನ ಪ್ರಾಧಿಕಾರ ಹಾಕಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ