• Home
 • »
 • News
 • »
 • tech
 • »
 • Social Media: ಸೋಷಿಯಲ್ ಮೀಡಿಯಾದಲ್ಲಿ ಬರುವ ಮಾಹಿತಿಯನ್ನು ನಂಬುವ ಮುನ್ನ ಎಚ್ಚರ!

Social Media: ಸೋಷಿಯಲ್ ಮೀಡಿಯಾದಲ್ಲಿ ಬರುವ ಮಾಹಿತಿಯನ್ನು ನಂಬುವ ಮುನ್ನ ಎಚ್ಚರ!

ಸೋಷಿಯಲ್ ಮೀಡಿಯಾ

ಸೋಷಿಯಲ್ ಮೀಡಿಯಾ

ಎಲ್ಲದಕ್ಕೂ ಸಾಮಾಜಿಕ ಜಾಲತಾಣಗಳನ್ನು ಸುದ್ದಿಮೂಲವಾಗಿ ನಂಬಿರುವ ಅಮೆರಿಕನ್ನರು ಸುಳ್ಳು ಸುದ್ದಿಗಳನ್ನೇ ನಂಬುವ ಸಾಧ್ಯತೆ ಹೆಚ್ಚಿದೆ ಎನ್ನುವ ಸಮೀಕ್ಷೆಯೊಂದು ಹೊರಬಿದ್ದಿದೆ.

 • Share this:

  ಸಾಮಾಜಿಕ ಜಾಲತಾಣಗಳಲ್ಲಿ ಬರುವುದೆಲ್ಲವೂ ನಿಜವೇ ಆಗಿರೋದಿಲ್ಲ. ಇಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಅನೇಕರು ಸಾಮಾಜಿಕ ಜಾಲತಾಣದ ಸುದ್ದಿಗಳನ್ನೇ ನಿಜವೆಂದು ನಂಬಿಕೊಂಡು ಮೋಸ ಹೋದವರೂ ಇದ್ದಾರೆ. ಆ ಸಾಲಿಗೆ ಇದೀಗ ಅಮೆರಿಕದವರೂ ಸೇರುತ್ತಿದ್ದಾರೆ ಎನ್ನುತ್ತಿದೆ ಸಮೀಕ್ಷೆ.


  ಹೌದು, ಅಮೆರಿಕನ್ನರು ಸುದ್ದಿ ಮೂಲವಾಗಿ ನಂಬಿರುವುದು ಇದೇ ಸಾಮಾಜಿಕ ಜಾಲತಾಣಗಳನ್ನು. ರಾಜಕೀಯ ಇರಲಿ, ಕೋವಿಡ್ 19 ಅಂಕಿ ಅಂಶ ಇರಲಿ, ಎಲ್ಲದಕ್ಕೂ ಸಾಮಾಜಿಕ ಜಾಲತಾಣಗಳನ್ನು ಸುದ್ದಿಮೂಲವಾಗಿ ನಂಬಿರುವ ಅಮೆರಿಕನ್ನರು ಸುಳ್ಳು ಸುದ್ದಿಗಳನ್ನೇ ನಂಬುವ ಸಾಧ್ಯತೆ ಹೆಚ್ಚಿದೆ ಎನ್ನುವ ಸಮೀಕ್ಷೆಯೊಂದು ಹೊರಬಿದ್ದಿದೆ.


  ಈ ಸಮೀಕ್ಷೆ ಹೇಳೋದೇನು?:


  ಸುದ್ದಿಗಾಗಿ ಕೇವಲ ಸಾಮಾಜಿಕ ಜಾಲತಾಣಗಳನ್ನೇ ಅವಲಂಬಿಸಿರುವವರು ಗಾಳಿ ಸುದ್ದಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬುವ ಸಾಧ್ಯತೆ ಹೆಚ್ಚಿದೆ. ಅವರಿಗೆ ನಿಖರವಾದಂತಹ ಸುದ್ದಿಗಳ ಕೊರತೆ ಇರುತ್ತದೆ ಎಂದು ಪ್ಯೂ ರಿಸರ್ಚ್ ಮಾಡಿರುವ ಸಮೀಕ್ಷೆ ಹೇಳುತ್ತದೆ.


  ಸುದ್ದಿ ಸಂಸ್ಥೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ಇದೀಗ ಸಂಘರ್ಷ ಏರ್ಪಡುತ್ತಿದೆ. ಸುದ್ದಿಗಳನ್ನು ಹಂಚಲು ಎಲ್ಲ ಮಾಧ್ಯಮಗಳೂ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಕೂಡ ಇದರಿಂದ ಆರ್ಥಿಕ ಲಾಭ ಪಡೆಯುತ್ತಿವೆ. ಆದರೆ ಸುಳ್ಳು ಸುದ್ದಿ ಹರಡುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವರದಿ ಹೇಳುತ್ತದೆ.


  ಇದನ್ನೂ ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ


  ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.18ರಷ್ಟು ಜನರು ತಮ್ಮ ರಾಜಕೀಯ ಹಾಗೂ ಚುನಾವಣಾ ಸಂಬಂಧಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಿಂದಲೇ ಪಡೆದುಕೊಂಡಿದ್ದಾರಂತೆ. ಆದರೆ ಈ ಜನರಿಗೆ ನಿಖರವಾದ ಮಾಹಿತಿಯ ಕೊರತೆ ಇರುತ್ತದೆ. ಯಾರು ಪತ್ರಿಕೆ, ಟಿವಿ ಹಾಗೂ ನ್ಯೂಸ್ ಅಪ್ಲಿಕೇಷನ್​ಗಳನ್ನು ಬಳಸುತ್ತಾರೋ ಅವರಿಗೆ ಹೋಲಿಸಿದರೆ, ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿರುವ ಜನರ ಜ್ಞಾನಮಟ್ಟ ಕಡಿಮೆ ಎಂದು ಸಮೀಕ್ಷೆ ತಿಳಿಸಿದೆ.


  ಕೊರೊನಾ ವೈರಸ್ ಹರಡುವಾಗ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರಲ್ಲಿ ವಿಟಮಿನ್ ಸಿ ಕೊರೊನಾ
  ತಡೆಗಟ್ಟುತ್ತದೆ ಎನ್ನುವುದೂ ಒಂದು. ಇದನ್ನೇ ಸಾಮಾಜಿಕ ಜಾಲತಾಣದ ಅನೇಕ ಬಳಕೆದಾರರು ನಂಬಿದ್ದರು ಎನ್ನಲಾಗಿದೆ.


  ಅಲ್ಲದೆ, ಅಮೆರಿಕದ ಚುನಾವಣಾ ಸಮಯದಲ್ಲಿಯೂ ಅನೇಕ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಯಾರು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತಾರೆ? ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಎಷ್ಟಿದೆ? ಹೀಗೆ ಅನೇಕ ವಿಷಯಗಳ ಕುರಿತು ಹರಡಿದ ಸುದ್ದಿಗಳನ್ನು ಸಾಮಾಜಿಕ ಜಾಲತಾಣದ ಓದುಗರು ನಂಬಿದ್ದರು ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.


  ಈ ಸಮೀಕ್ಷೆಯನ್ನು ಒಂದು ವರ್ಷಗಳ ಕಾಲ ನಡೆಸಲಾಗಿದೆ. ನವೆಂಬರ್ 2019ರಿಂದ 2020ರ ಡಿಸೆಂಬರ್​ವರೆಗೆ ಈ ಸಮೀಕ್ಷೆ ನಡೆದಿದೆ. ಇದರಲ್ಲಿ 9,000 ಅಮೆರಿಕನ್ನರು ಭಾಗವಹಿಸಿದ್ದರು. ಯಾರು ಸಾಂಪ್ರದಾಯಿಕ ಸುದ್ದಿಮಾದ್ಯಮಗಳನ್ನೇ ತಮ್ಮ ಸುದ್ದಿಮೂಲವಾಗಿ ನಂಬಿದ್ದರೋ ಅವರು ಮಾತ್ರ ಯಾವುದೇ ಪಕ್ಷಪಾತವಿಲ್ಲದ ಹಾಗೂ ಸತ್ಯವಾದ ಸುದ್ದಿಯನ್ನು ಪಡೆದಿದ್ದರು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.


  ಒಟ್ಟಾರೆಯಾಗಿ ಸುದ್ದಿಗಳಿಗಾಗಿ ಕೇವಲ ಸಾಮಾಜಿಕ ಜಾಲತಾಣಗಳನ್ನೇ ನಂಬುವುದು ಸರಿಯಲ್ಲ, ಬದಲಾಗಿ ಸುದ್ದಿಮಾದ್ಯಮಗಳಿಂದಲೇ ನೇರವಾಗಿ ಸುದ್ದಿ ಪಡೆಯುವುದು ಉತ್ತಮ, ಇದು ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

  Published by:Sushma Chakre
  First published: