ರಾಯಚೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ (Zika Virus) ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಮಕ್ಕಳ ಆಸ್ಪತ್ರೆಗಳು (Children Hospitals) ತುಂಬಿ ತುಳುಕುತ್ತಿದ್ದು, ವೈರಸ್ ಪತ್ತೆಯ ಕಾರಣ ಸಹಜವಾಗಿಯೇ ಆತಂಕಗೊಂಡಿರೋ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆ ತರುತ್ತಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆ (Health Department) 57 ಗರ್ಭಿಣಿಯರ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ. ಕಳೆದ ವಾರವಷ್ಟೇ ರಾಜ್ಯದಲ್ಲೇ ಮೊದಲ ಬಾರಿಗೆ 5 ವರ್ಷದ ಬಾಲಕಿಗೆ ಝೀಕಾ ವೈರಸ್ (First Zika Case) ಸೋಂಕು ಇರುವುದು ಟೆಸ್ಟ್ನಲ್ಲಿ ದೃಢವಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು (Health Department Guidelines) ಬಿಡುಗಡೆ ಮಾಡಿತ್ತು.
ಸೈಕ್ಲೋನ್ ಎಫೆಕ್ಟ್ ನಡುವೆ ಚಳಿಗಾಲದ ಕಾರಣ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಳ್ಳುತ್ತಿದೆ. ಈ ನಡುವೆಯೇ ಜಿಲ್ಲೆಯಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಅನಾರೋಗದಿಂದ ಬಳಲುತ್ತಿರೋ ಮಕ್ಕಳನ್ನು ಹೊತ್ತು ಪೋಷಕರು ಆಸ್ಪತ್ರೆಯತ್ತ ಮುಖ ಮಾಡ್ತಿದ್ದಾರೆ.
ಝೀಕಾ ವೈರಸ್ ಮತ್ತೆ ಬಳಿಕ ಆಸ್ಪತ್ರೆಗೆ ಬಂದಿದ್ದೇವೆ
ಈ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಪೋಷಕರೊಬ್ಬರು, ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾದ ಬಳಿಕ ಭಯಗೊಂಡು ಆಸ್ಪತ್ರೆಗೆ ಬಂದಿರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಝೀಕಾ ವೈರಸ್ ಪತ್ರೆ ಬೆನ್ನಲ್ಲೆ ಅಲರ್ಟ್ ಆಗಿರೋ ಆರೋಗ್ಯ ಇಲಾಖೆ, ಜಿಲ್ಲೆ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್ ಸುತ್ತ ಮುತ್ತ ಸರ್ವೇ ಕಾರ್ಯ ನಡೆಸಿದ್ದಾರೆ. ಅಲ್ಲದೇ ಫೀವರ್ ಕ್ಲಿನಿಕ್ ಗಳನ್ನು ತೆರೆದು ತಪಾಸಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Zika Virus: ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪತ್ತೆ ಖಚಿತಪಡಿಸಿದ ಸಚಿವ ಸುಧಾಕರ್
ವಿಶೇಷವಾಗಿ ಫೀವರ್ ಕ್ಲಿನಿಕ್ಗಳಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಗರ್ಭಿಣಿಯರೇ ಹೆಚ್ಚಾಗಿ ಝೀಕಾ ವೈರಸ್ಗೆ ತುತ್ತಾಗುವ ಸಂಭವ ಹಿನ್ನೆಲೆಯಲ್ಲಿ ಸರ್ವೆ ಮತ್ತು ತಪಾಸಣೆ ಕಾರ್ಯವನ್ನು ಮಾಡುತ್ತಿದ್ದು, 57ಕ್ಕೂ ಹೆಚ್ಚು ಗರ್ಭಿಣಿಯರ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಿದ್ದಾರೆ.
ಮನೆ ಮನೆಗೂ ತೆರಳಿ ಸರ್ವೆ ಕಾರ್ಯ
ಮನೆ ಮನೆಗೂ ತೆರಳಿ ಸರ್ವೆ ಕಾರ್ಯ ಮಾಡುತ್ತಿರೋ ಆಶಾ ಕಾರ್ಯಕರ್ತೆಯರು, ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ಗಳು ಮುನ್ನೆಚ್ಚರಿಕೆ ಕ್ರಮವಾಗಿ ಕಾಂಡೋಮ್ ಬಳಸುವಂತೆ ಮಾಹಿತಿ ನೀಡಿ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿಯರಲ್ಲಿ ಝೀಕಾ ವೈರಸ್ ಕಾಣಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಎದುರಾಗುವ ಸಂಭವವಿರುವ ಕಾರಣ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿವಂತೆ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ, ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವಂತೆ ಮಾಹಿತಿ ನೀಡುತ್ತಿದ್ದಾರೆ.
ಇದನ್ನೂ ಓದಿ: Explained: ಜಿಕಾ ವೈರಸ್ ಎಂದರೇನು? ಮುನ್ನೆಚ್ಚರಿಕೆ, ಲಕ್ಷಣ, ಲಸಿಕೆ, ಚಿಕಿತ್ಸೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ
ಕಳೆದ ವಾರ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್ನಲ್ಲಿ ಐದು ವರ್ಷದ ಮಗುವಿನಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು. ಸದ್ಯ ಮಗು ಚೇತರಿಕೆಯಾಗಿದ್ದರೂ ಸೋಂಕು ಬೇರೆಯವರಿಗೆ ಹರಡಿರುವ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಅಗತ್ಯ ಕಮ್ರ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಆರೋಗ್ಯ ಕಾರ್ಯಕರ್ತೆಯರು ಕಾಂಡೋಮ್ ವಿತರಣೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಝೀಕಾ ವೈರಸ್ನಿಂದ ಸಾವು ಸಂಭವಿಸಿಲ್ಲ
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕ ಡಾ.ಮಹಮೂದ್ ಷರೀಫ್, ರಾಯಚೂರು ಝೀಕಾ ಪ್ರಕರಣವು ಕರ್ನಾಟಕದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ.
ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಝೀಕಾ ಪ್ರಕರಣಗಳು ವರದಿಯಾಗಿವೆ. ಈ ಜೂನ್‌ನಲ್ಲಿ ಪ್ರಕಟವಾದ ICMR ವರದಿಯಲ್ಲಿ, 2021ರಲ್ಲಿ ಎಂಟು ರಾಜ್ಯಗಳಲ್ಲಿ ಝೀಕಾ ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ನಿಗಾ ವಹಿಸಲಾಗಿದೆ. ಆದರೆ ಭಾರತದಲ್ಲಿ ಝೀಕಾ ವೈರಸ್ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ