ಬೆಂಗಳೂರು (ಆ.1): ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡುವ ಉದ್ದೇಶದಿಂದ ಗದಗದಲ್ಲಿ ತಾಯಿಯೊಬ್ಬಳು ತಾಳಿ ಮಾರಿದ್ದರು. ಈ ಬಗ್ಗೆ ನ್ಯೂಸ್18 ಕನ್ನಡ ವಿಶೇಷ ವರದಿ ಪ್ರಕಟಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಕರುಣಾಜನಕ ಘಟನೆಯ ಕುರಿತಂತೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ಅಷ್ಟೇ ಅಲ್ಲ, ಮಹಿಳೆ ಸಹಾಯಕ್ಕೆ ಸಾಕಷ್ಟು ಜನರು ಮುಂದೆ ಬಂದಿದ್ದರು. ಈಗ ಶಾಸಕ ಜಮೀರ್ ಅಹ್ನದ್ ಮಹಿಳೆಗೆ 50 ಸಾವಿರ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಸ್ತೂರಿ ಅನ್ನೋ ಮಹಿಳೆಯ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ ಎಂಟನೇ ತರಗತಿಯಲ್ಲಿ, ಇನ್ನೋರ್ವ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಈ ಮಕ್ಕಳಿಗೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಾಠ ಕೇಳುವುದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು. ಬೇರೆಯವರ ಮನೆಗೆ ಹೋದ್ರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ತಾಯಿ ತನ್ನ ತಾಳಿಯನು ಅಡವಿಟ್ಟು ಟಿವಿ ಕೊಡಿಸಿದ್ದರು.
ಇದನ್ನೂ ಓದಿ: ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ತರಲು ತಾಳಿಯನ್ನೇ ಅಡವಿಟ್ಟ ತಾಯಿ
ನ್ಯೂಸ್18 ಕನ್ನಡದ ವರದಿ ಭಾರೀ ಇಂಪ್ಯಾಕ್ಟ್ ನೀಡಿದೆ. ಘಟನೆ ಬಗ್ಗೆ ಮಾತನಾಡಿರುವ ಶಾಸಕ ಜಮೀರ್ ಅಹ್ಮದ್, “ಆನ್ಲೈನ್ ಶಿಕ್ಷಣ ನೀಡುವ ಉದ್ದೇಶದಿಂದ ಗದಗದಲ್ಲಿ ಮಹಿಳೆಯೊಬ್ಬರು ತಾಳಿ ಅಡವಿಟ್ಟು ಮಕ್ಕಳಿಗೆ ಟಿವಿ ತಂದುಕೊಟ್ಟ ವಿಚಾರ ನನಗೆ ನೋವು ತಂದಿದೆ. ಸ್ನೇಹಿತನ ಮೂಲಕ ಐವತ್ತು ಸಾವಿರ ರೂಪಾಯಿ ಹಣವನ್ನು ಅವರ ಮನೆಗೆ ತಲುಪಿಸಿದ್ದೇನೆ, ಎಂದಿದ್ದಾರೆ ಜಮೀರ್ ಅಹ್ಮದ್.
“ಇವತ್ತು ಬಕ್ರಿದ್ ಹಬ್ಬ ಜೊತೆಗೆ ನನ್ನ ಹುಟ್ಟಿದ ಹಬ್ಬ. ಎರಡು ದಿನದ ಹಿಂದೆಯೇ ಯಾರೂ ಮನೆ ಬಳಿ ಬರಬೇಡಿ. ನೀವು ಖರ್ಚು ಮಾಡುವ ಹಣವನ್ನ ಬಡವರಿಗೆ ನೀಡಿ ಎಂದು ನಾನು ಕಾರ್ಯಕರ್ತರಿಗೆ ಸೂಚಿಸಿದ್ದೆ,” ಎಂದಿದ್ದಾರೆ ಜಮೀರ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ