ಬುದ್ಧಿಭ್ರಮಣೆ ಆಗಿರುವ ಬಿಜೆಪಿ ನಾಯಕರಿಗೆ ಮೆಂಟಲ್ ಕೌನ್ಸಿಲಿಂಗ್ ಮಾಡಿಸಿ: ಶ್ರೀನಿವಾಸ್ ಬಿವಿ ಮನವಿ

ಬಿಜೆಪಿ ನಾಯಕರಾದ ಸಿ.ಟಿ. ರವಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಬೇಕೆಂದು ಬಟ್ಟೆ ಹೊಲೆಸಿಕೊಂಡಿದ್ದರು. ಆದರೀಗ ಮುಖ್ಯಮಂತ್ರಿ ಸ್ಥಾನ ಸಿಗದೆ ಅವರಿಗೆ ಬುದ್ಧಿ ಭ್ರಮಣೆ ಆಗಿದೆ. ಅವರಿಗೆ ಕೌನ್ಸಿಲಿಂಗ್ ಅಗತ್ಯ ಇದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿದ್ಧಾರೆ.

ಬಿ ವಿ ಶ್ರೀನಿವಾಸ್

ಬಿ ವಿ ಶ್ರೀನಿವಾಸ್

  • Share this:
ನವದೆಹಲಿ, ಆ. 25: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒಬ್ಬ ಹುಚ್ಚ ಎನ್ನುವ ಬಗ್ಗೆ ನಾವು ಸರ್ಟಿಫಿಕೇಟ್ ಕೊಡಬೇಕಾದ ಅಗತ್ಯ ಇಲ್ಲ. ಬಿಜೆಪಿ ನಾಯಕರೇ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚ ಎಂದು ಹೇಳುತ್ತಾರೆ. ಅದೇ ರೀತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (C T Ravi) ಮಾನಸಿಕ ಅಸ್ವಸ್ತರಾದಂತೆ ಮಾತನಾಡುತ್ತಾರೆ. ಆದುದರಿಂದ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಬುದ್ಧಿ ಭ್ರಮಣೆ (Mentally Unstable) ಆಗಿರುವ ಬಿಜೆಪಿ ನಾಯಕರಿಗೆ ಮೆಂಟಲ್ ಕೌನ್ಸಿಲಿಂಗ್ (Counselling) ಮಾಡಿಸಲೆಂದು ಮನವಿ ಮಾಡುತ್ತೇನೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (B V Srinivas) ಹೇಳಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಬಿ.ವಿ. ಅವರು ಬಿಜೆಪಿ ನಾಯಕರಾದ ಸಿ.ಟಿ. ರವಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಬೇಕೆಂದು ಬಟ್ಟೆ‌ ಹೊಲೆಸಿಕೊಂಡಿದ್ದರು. ಆದರೀಗ ಮುಖ್ಯಮಂತ್ರಿ ಸ್ಥಾನ ಸಿಗದೆ ಅವರಿಗೆ ಬುದ್ಧಿ ಭ್ರಮಣೆ ಆಗಿದೆ. ಹಾಗಾಗಿ ಹತಾಶರಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ಆ ಮೂಲಕ ಪದವಿ ಗಳಿಸಲು ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಲ್ಲವಿ ರವಿ ನೇಮಕ ಕುಟುಂಬ ರಾಜಕಾರಣವಲ್ಲವೇ?

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ  ಚಿಕ್ಕಮಗಳೂರು ಮಹಿಳಾ ಮೋರ್ಚಾ ಉಪಾಧ್ಯಕ್ಷರನ್ನಾಗಿ ಸಿ.ಟಿ. ರವಿ ಅವರ ಮಡದಿ ಪಲ್ಲವಿ ಸಿ.ಟಿ. ರವಿ ಅವರನ್ನು ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯಲ್ಲಿ ಸಮರ್ಥ ಮಹಿಳಾ ಕಾರ್ಯಕರ್ತರು ಇರಲಿಲ್ಲವೇ? ಸಿ.ಟಿ. ರವಿ ಪತ್ನಿ ನೇಮಕ ಕುಟುಂಬ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್ಸಿಗರ ಫ್ಯೂಸ್ ಎಚ್​ಡಿಕೆ ಕಿತ್ತುಹಾಕುವ ಅಗತ್ಯವಿಲ್ಲ; ಅವರವರೇ ಕಿತ್ತುಹಾಕೊಳ್ತಿದಾರೆ: ಈಶ್ವರಪ್ಪ

ಸಿ.ಟಿ. ರವಿ ಕಾಂಗ್ರೆಸ್ ಪಕ್ಷ ದೇಶದಲ್ಲಿ 70 ವರ್ಷದಿಂದ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಇದೇ ವೇಳೆ 217 ಯೋಜನೆಗಳಿಗೆ ಕಾಂಗ್ರೆಸ್ ನಾಯಕರ ಹೆಸರನ್ನು ಇಡಲಾಗಿದೆ ಎಂದು ಕೂಡ ಹೇಳುತ್ತಾರೆ. ಕಾಂಗ್ರೆಸ್ ಯೋಜನೆಗಳನ್ನು ನೆನಪಿಸಿಕೊಂಡ ಸಿಟಿ ರವಿ ಅವರಿಗೆ ಧನ್ಯವಾದಗಳು.‌ ಆದರೆ ಸಿ.ಟಿ. ರವಿ ಅವರು ಸೇರಿದಂತೆ ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇಂದಿರಾ ಗಾಂಧಿ ಅವರು 'ಉಳುವವನೇ ಒಡೆಯ' ಎಂಬ ಯೋಜನೆ ತಂದರು. ಉಳುವವನೇ ಒಡೆಯ ಯೋಜನೆಯ ಫಲಾನುಭವಿಗಳಲ್ಲಿ ಬಿಜೆಪಿಯವರೂ ಇದ್ದಾರೆ. ಇದು ಇಂದಿರಾ ಗಾಂಧಿ ಅವರು ನೀಡಿದ ಕೊಡುಗೆ ಎಂದು ಹೇಳಿದರು.

ಬಿಜೆಪಿ ಎಂದರೆ ಬೆಲೆ ಏರಿಕೆ, ಈ ಬಗ್ಗೆ ಮಾತನಾಡದ ಬಿಜೆಪಿ ಸಂಸದರು:

ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ಆದರೆ ಅವರು ಎಂದಾದರೂ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರಾ? ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಜಿಎಸ್ ಟಿ ದುಡ್ಡು ಬಂದಿಲ್ಲದಿರುವ ಬಗ್ಗೆ ಧ್ವನಿ ಎತ್ತಿದ್ದಾರಾ? ಕೇಂದ್ರ ಸರ್ಕಾರದ ಕಳಪೆ ನಿರ್ವಹಣೆಯಿಂದ ಕೊರೋನಾ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿದ್ದಾರಾ? ಅಲ್ಲದೆ ದೇಶಾದ್ಯಂತ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಗಳ ಗಡಿ ದಾಟಿದೆ. ಅಡುಗೆ ಅನಿಲದ ಬೆಲೆ ಏರಿಕೆ ಆಗಿದೆ. ಬಿಜೆಪಿ ಎಂದರೆ ಬೆಲೆ ಏರಿಕೆ ಎನ್ನುವಂತಾಗಿದೆ. ಬಿಜೆಪಿ ನಾಯಕರು ಈ ವಿಷಯಗಳ ಬಗ್ಗೆ‌ಚರ್ಚೆ ಮಾಡಲಿ ಎಂದು ಶ್ರೀನಿವಾಸ್ ಬಿ.ವಿ. ತಾಖೀತು ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಮಾಧ್ಯಮ ವಿಭಾಗದ ಉಸ್ತುವಾರಿ ರಾಹುಲ್ ರಾವ್ ಉಪಸ್ಥಿತರಿದ್ದರು.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: