ಇನ್ನು ಮುಂದೆ ಏರ್​ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕಾಯಬೇಕಿಲ್ಲ, ಮುಖ ತೋರಿಸಿ ನೇರವಾಗಿ ವಿಮಾನ ಏರಬಹುದು!

news18
Updated:September 7, 2018, 9:43 AM IST
ಇನ್ನು ಮುಂದೆ ಏರ್​ಪೋರ್ಟ್​ನಲ್ಲಿ ಗಂಟೆಗಟ್ಟಲೇ ಕಾಯಬೇಕಿಲ್ಲ, ಮುಖ ತೋರಿಸಿ ನೇರವಾಗಿ ವಿಮಾನ ಏರಬಹುದು!
news18
Updated: September 7, 2018, 9:43 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.7): ವಿಮಾನ ಪ್ರಯಾಣ ಸಮಯವನ್ನು ಉಳಿಸುತ್ತದೆಯಾದರೂ ವಿಮಾನ ನಿಲ್ದಾಣ ಒಳಪ್ರವೇಶಿಸಿ, ತಪಾಸಣೆ ಮುಗಿಸಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಇನ್ನು ಮುಂದೆ ಕಂಪ್ಯೂಟರ್ ಮುಂದೆ ನಿಮ್ಮ ಮುಖ ತೋರಿಸಿ ನೇರವಾಗಿ ವಿಮಾನ ಏರಬಹುದು. ಆದರೆ, ಇದು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಅಲ್ಲ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಮಾತ್ರ.

ದೇಶದಲ್ಲಿಯೇ ಮೊದಲ ಬಾರಿಗೆ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನವನ್ನು ಕೆಐಎನಲ್ಲಿ ಅಳವಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಸಂಬಂಧ ಪೋರ್ಚುಗಲ್​ನ ವಿಷನ್ ಬಾಕ್ಸ್ ಕಂಪನಿಯೊಂದಿಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ. ಕೆಐಎನ ಸಿಇಒ ಹರಿ ಮಾರರ್ ಹಾಗೂ ವಿಷನ್ ಬಾಕ್ಸ್​ ಕಂಪನಿಯ ಸಿಇಒ ಮಿಗೆಲ್ ಲೀಟ್​ಮನ್ ಈ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದ್ದಾರೆ. ಮುಂದಿನ ಮಾರ್ಚ್​ ವೇಳೆಗೆ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೋರ್ಡಿಂಗ್ ಪ್ರಕ್ರಿಯೆ ತಡವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಅದಕ್ಕೆ ಪರಿಹಾರವಾಗಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ಧೇವೆ. 'ನಿಮ್ಮ ಮುಖವೇ ಬೋರ್ಡಿಂಗ್ ಪಾಸ್​' ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ಡಿಜಿಯಂತ್ರಾ ಯೋಜನೆಗೆ ಬೆಂಬಲವಾಗಿ ಬಯೋಮೆಟ್ರಿಕ್ ಸೆಲ್ಫ್​ ಬೋರ್ಡಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇದರಿಂದಾಗಿ ವಿಮಾನ ಪ್ರಯಾಣದ ಆರಂಭದಿಂದ ಅಂತ್ಯದವರೆಗಿನ ಎಲ್ಲ ಪ್ರಕ್ರಿಯೆಗಳು ಕಾಗದರಹಿತವಾಗಿ ಡಿಜಿಟಲೀಕರಣ ಆಗಲಿವೆ. ನಿಲ್ದಾಣದಲ್ಲಿ ಪ್ರಯಾಣಿಕರು ಚಲಿಸುವಾಗಲೇ ಅವರ ಮುಖಚಹರೆಯ ಮೂಲಕ ಗುರುತಿಸಲಾಗುತ್ತದೆ. ಪದೇಪದೇ ದಾಖಲೆಗಳ ಪರಿಶೀಲನೆ ಇರುವುದಿಲ್ಲ ಎಂದು ಕೆಐಎ ಸಿಇಒ ಹರಿ ಮಾರರ್ ಹೇಳಿದರು.

ನೂತನ ತಂತ್ರಜ್ಞಾನದ ಸೌಲಭ್ಯವನ್ನು ಆರಂಭದಲ್ಲಿ ಜೆಟ್​ ಏರ್​ವೇಸ್, ಏರ್​ ಏಷ್ಯಾ ಹಾಗೂ ಸ್ಪೈಸ್​ ಜೆಟ್​ ಕಂಪನಿ ವಿಮಾನಗಳ ಪ್ರಯಾಣಿಕರು ಪಡೆಯಲಿದ್ದಾರೆ. ಸದ್ಯ ನಿಲ್ದಾಣದ ಮೂರು ಕಡೆ ಬೋರ್ಡಿಂಗ್ ಪಾಸ್ ತಪಾಸಣೆ ಮಾಡಲಾಗುತ್ತದೆ. ಅದರ ಜೊತೆಗೆ ಭದ್ರತಾ ಸಿಬ್ಬಂದಿಯಿಂದಲೂ ಒಂದು ಬಾರಿ ತಪಾಸಣೆ ನಡೆಯುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ನೂತನ ತಂತ್ರಜ್ಞಾನ ಜಾರಿಗೆ ಬಂದರೆ ಸಮಯ ಉಳಿತಾಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ನೂತನ ತಂತ್ರಜ್ಞಾನ ಹೇಗೆ ಕೆಲಸ ನಿರ್ವಹಿಸಲಿದೆ?
Loading...


  • ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್​ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.

  • ಪ್ರಯಾಣಿಕರು ಮೊದಲು ದ್ವಾರದ ಬಳಿ ಇರುವ ಕಿಯೋಸ್ಕ್ ಯಂತ್ರದಲ್ಲಿ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನು ಯಂತ್ರದಲ್ಲಿ ದಾಖಲಿಸಬೇಕು. ನಂತರ ನಿಲ್ದಾಣದ ಒಳಗೆ ಇರುವ ಕಿಯೋಸ್ಕ್​ ಯಂತ್ರಗಳಲ್ಲಿ ಮುಖವನ್ನಷ್ಟೇ ತೋರಿಸಿ, ಸರಾಗವಾಗಿ ಮುಂದೆ ಹೋಗಬಹುದು.

  • ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ ಜೀವನ ಪರ್ಯಂತ ಬೋರ್ಡಿಂಗ್ ಪಾಸ್ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು.

  • ನೂತನ ತಂತ್ರಜ್ಞಾನದ ಸೌಲಭ್ಯ ದೇಶೀಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಸಿಗಲಿದೆ ಹಾಗೂ ವಿದೇಶಿ ಪ್ರಜೆಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ.

First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...