ರಾಯಚೂರು: ಮೂಗಿನ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ರಾಯಚೂರು (Raichur) ನಗರದ ರಿಮ್ಸ್ ಆಸ್ಪತ್ರೆಯಲ್ಲಿ (RIMS Hospital) ನಡೆದಿದೆ. ರಾಯಚೂರು ನಗರದ ರಾಜೇಶ್ವರಿ (18 ) ಮೃತ ದುರ್ದೈವಿಯಾಗಿದ್ದು, ಮೃತಳ ಕುಟುಂಬಸ್ಥರು ಹಾಗೂ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮೃತ ಯುವತಿ ಜನವರಿ 10ಕ್ಕೆ ನರ್ಸಿಂಗ್ ಶಿಕ್ಷಣಕ್ಕಾಗಿ ಅಡ್ಮಿಷನ್ ಮಾಡಿಸಬೇಕಿತ್ತು. ಆದರೆ ನಾಲ್ಕು ದಿನ ಮೊದಲು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯ ಡಾ.ರಾಜಶೇಖರ್ ಪಾಟೀಲ್ ಅವರ ವಿರುದ್ಧ ಮೃತ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಮ್ಸ್ ನಲ್ಲಿ ಆಸ್ಪತ್ರೆಯಲ್ಲೇ ಸೀಟ್ ಸಿಕ್ಕಿದ್ದ ಕಾರಣ ಯುವತಿ ಇದೇ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರಂತೆ. ರಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಸ್ಪತ್ರೆ ಗಾಜು ಪುಡಿ ಪುಡಿ ಮಾಡಿ ಯುವತಿಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ಕುಸಿದು ಬಿದ್ದ ರಾಮನಗರದ ಹರಿಸಂದ್ರ ಸೇತುವೆ; ಕಾರು ಜಖಂ
ರಾಮನಗರ ತಾಲೂಕಿನ ಹರಿಸಂದ್ರ ಗ್ರಾಮದ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಸ್ಥಳೀಯ ಗ್ರಾಮಸ್ಥರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಮಂಚನಬೆಲೆ ಜಲಾಶಯದಿಂದ ಹೊರಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಹರಿಸಂದ್ರ ತಿಮ್ಮೇಗೌಡನದೊಡ್ಡಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹರಿಸಂದ್ರ ಸುತ್ತಮುತ್ತಲಿನ ಹಳ್ಳಿಗಳ ಓಡಾಟಕ್ಕೆ ತೊಂದರೆಯಾಗಿದ್ದು, ಸುತ್ತಿಬಳಸಿ ಬದಲಿ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಗುಡಿಸಲಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ
ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಲುಗಿ ಪರಿಣಾಮ ವ್ಯಕ್ತಿಯೋರ್ವ ಸಜೀವ ದಹನ ಆಗಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ. 60 ವರ್ಷ ಜಗನಾಥ ಹಲಗೆ ಮೃತ ದುರ್ದೈವಿಯಾಗಿದೆ. ಘಟನೆ ಸಂದರ್ಭದಲ್ಲಿ ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬವರು ಗುಡಿಸಲಿನಲ್ಲಿ ತಡ ರಾತ್ರಿ ಪಾರ್ಟಿ ಮಾಡಿ ಅಲ್ಲಿಯೇ ಮಲಗಿದ್ದಾರೆ. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಮಾರುತಿ ಗುಡಿಸಲಿನಿಂದ ಹೊರ ಬಂದು ಜೀವ ರಕ್ಷಿಸಿಕೊಂಡಿದ್ದಾರೆ.
ಇದನ್ನೂ ಓದಿ: Amit Shah: 'ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ, ಯಾರೊಂದಿಗೂ ಹೊಂದಾಣಿಕೆ ಇಲ್ಲ'; ಅಮಿತ್ ಶಾ ಸ್ಪಷ್ಟನೆ
ಇನ್ನು ಗುಡಿಸಲಿನಲ್ಲಿ ಸಿಲುಕಿದ್ದ ಜಗನಾಥ ಹಲಗೆ ರಕ್ಷಿಸಲು ಮುಂದಾಗಿ ಅವರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಜೋಳಕ್ಕೆ ಕಾವಲು ಕಾಯಲು ಸಣ್ಣ ಗುಡಿಸಲು ನಿರ್ಮಾಣ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಭಾಲ್ಕಿ ತಾಲೂಕಿನ ಗ್ರಾಮಿಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತ
ಜೆಡಿಎಸ್ ಮುಖಂಡ, ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಬೆಳಗಾವಿಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ವಿಜಯಪುರದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ದುರ್ಘಟನೆ ನಡೆದಿದೆ.
ಮಾಂಜರಿ ಗ್ರಾಮ ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಸ್ವಗ್ರಾಮ, ಮುಂದೆ ಬರುತ್ತಿದ್ದ ಲಾರಿ ಟೈರ್ ಬ್ಲಾಸ್ಟ್ ಆಗಿ ಕಾರಿನ ಮೇಲೆ ಬಿದ್ದಿದ್ದು, ಪರಿಣಾಮ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಗೆಣ್ಣವರ ಸೇರಿದಂತೆ ಇನ್ನುಳಿದ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ