ಬೆಂಗಳೂರು: ಆಟೋ ಡ್ರೈವರ್ (Auto Driver) ಜೊತೆಗೆ ಪ್ರೀತಿಗೆ ಬಿದ್ದಿದ್ದ ಮಗಳಿಗೆ ಪೋಷಕರು ಬುದ್ಧಿಮಾತು ಹೇಳಲು ಮುಂದಾಗಿದ್ದರು. ಆದರೆ ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ (Bengaluru) ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (HAL Police Station) ನಡೆದಿದೆ. ಮೃತ ಯುವತಿಯನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ತನ್ನ ಪ್ರೀತಿಯನ್ನು (Love) ಸಾಬೀತು ಪಡಿಸಲು ಮುಂದಾಗಿ ವಿಷ ಸೇವನೆ ಮಾಡಿದ್ದ ಯುವತಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾಳೆ.
ಏನಿದು ಪ್ರಕರಣ?
ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಚಂದ್ರಮ್ಮ ಎಂಬಾಕೆಗೆ ಸಹಾಯ ಮಾಡುವ ನೆಪದಲ್ಲಿ ಆಟೋ ಡ್ರೈವರ್ ನವೀನ್ ಪರಿಚಯವಾಗಿದ್ದನಂತೆ. ಆ ಬಳಿಕ ಮಹಿಳೆಯನ್ನು ಕೆಲಸದ ಸ್ಥಳದಿಂದ ಮನೆಗೆ ಪಿಕ್ಅಪ್ ಮತ್ತು ಡ್ರಾಪ್ ಮಾಡುವ ಕೆಲಸ ಮಾಡುತ್ತಿದ್ದನಂತೆ. ಈ ನಡುವೆ ಚಂದ್ರಮ್ಮ ಪುತ್ರಿಯಾದ ಲಾವಣ್ಯ ಪರಿಚಯ ನವೀನ್ಗೆ ಆಗಿತ್ತು. ಕೆಲಸ ಸಮಯದ ಬಳಿಕ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: Car Accident: ಮೊನ್ನೆ ಬೈಕ್, ಇಂದು ಕಾರು! ಬಾನೆಟ್ ಮೇಲೆ ಹತ್ತಿದ ಯುವಕನನ್ನು 1 ಕಿಮೀ ಎಳೆದೊಯ್ದ ಮಹಿಳೆ!
ಯಾರು ಇಲ್ಲದ ವೇಳೆ ಯುವತಿಯನ್ನ ಕರೆದುಕೊಂಡು ಹೋಗಿದ್ದ ಆರೋಪಿ
ಇತ್ತ ಪ್ರತಿದಿನ ಆಟೋ ಹತ್ತುತ್ತಿದ್ದ ಮಹಿಳೆಯ ಮಗಳನ್ನೇ ಪಟಾಯಿಸಿದ ನವೀನ್, ಜನವರಿ 12ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಲಾವಣ್ಯನನ್ನ ಹೊರಗಡೆ ಕರೆದುಕೊಂಡು ಹೋಗಿದ್ದನಂತೆ. ಈ ಮಾಹಿತಿ ಕುಟುಂಬಸ್ಥರಿಗೆ ಸಿಕ್ಕಿ ಯುವತಿಗೆ ಬುದ್ಧಿ ಮಾತು ಹೇಳಿದ್ದರಂತೆ. ಅಲ್ಲದೇ ನವೀನ್ಗೆ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಡ್ತೀನಿ ಎಂದು ಎಚ್ಚರಿಕೆ ನೀಡಿದ್ದರಂತೆ.
ಆದರೆ, ಪೊಲೀಸರಿಗೆ ದೂರು ನೀಡುತ್ತೀನಿ ಎಂದ ಕೂಡಲೇ ತನ್ನ ಪ್ರೀತಿಯನ್ನು ಸಾಬೀತು ಪಡಿಸಿಕೊಳ್ಳಲು ಮುಂದಾದ ಯುವತಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೋಷಕರನ್ನು ಹೆದರಿಸಲು ಮುಂದಾಗಿ ಮಾತ್ರೆಯೊಂದನ್ನು ಸೇವನೆ ಮಾಡಿದ್ದಳಂತೆ. ಸ್ವತಃ ನವೀನ್ ಈ ಮಾತ್ರೆಯನ್ನು ಯುವತಿಗೆ ನೀಡಿ ನಿಮ್ಮ ಮನೆಯವರು ಏನಾದರೂ ಮಾತನಾಡಿದರೆ ವಿಷ ತಿಂತೀನಿ ಅಂತ ಹೆದರಿಸಲು ಮಾತ್ರೆ ನೀಡಿದ್ದನಂತೆ.
ಸಾವು ಬದುಕಿನ ಹೋರಾಟದಲ್ಲಿ ಕೊನೆಯುಸಿರೆಳೆದ ಯುವತಿ
ನವೀನ್ ಕೊಟ್ಟ ಮಾತ್ರೆ ಸೇವಿಸಿದ್ದ ಯುವತಿ ಕೆಲ ಸಮಯದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: Vijayapura: ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ಗೆ ಭಾರೀ ಆಘಾತ; ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಸಾವು
ಯುವತಿ ಸಾವನ್ನಪ್ಪುತ್ತಿದ್ದಂತೆ ಆರೋಪಿ ನವೀನ್ ನಾಪತ್ತೆ
ಸದ್ಯ ಆಟೋ ಡ್ರೈವರ್ ನವೀನ್ ವಿರುದ್ಧ ಯುವತಿ ಪೋಷಕರು ದೂರು ನೀಡಿದ್ದು, ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ದೂರು ದಾಖಲಿಸಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನವೀನ್ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದ ಪೊಲೀಸರು, ಮತ್ತೆ ಹೇಳಿದಾಗ ಬರಬೇಕು ಎಂದು ಸೂಚನೆ ನೀಡಿ ಕಳುಹಿಸಿದ್ದರಂತೆ.
ಆದರೆ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಿದ್ದಂತೆ ಆರೋಪಿ ನವೀನ್ ನಾಪತ್ತೆಯಾಗಿದ್ದಾನೆ. ಮೃತ ಲಾವಣ್ಯ ತಾಯಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಚ್ಎಎಲ್ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ