ರಾಯಚೂರು(ಮಾ.08) : ಆಕೆ ಬಡತನದ ಬೇಗುದಿಯಲ್ಲಿ ಬೆಂದರು ದೇಶದ ರಕ್ಷಣೆಯತ್ತ ಚಿಂತಿಸುತ್ತಿದ್ದಳು. ಕನಸು ನನಸು ಮಾಡಿಕೊಳ್ಳಲು ಹಗಲಿರುಳು ಶ್ರಮಿಸಿದಳು. ಆಕೆಯ ಕನಸಿನಂತೆ ಕೊನೆಗೆ ಬ್ಲ್ಯಾಕ್ ಕಮಾಂಡೋದಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ ರಾಯಚೂರು ಜಿಲ್ಲೆಯ ರೇಣುಕಾ.
ಗಡಿ ಕಾಯಲು ಯುವಕರೇ ಹಿಂಜರಿಯುವ ಈ ಕಾಲದಲ್ಲಿ ಬಿಸಿಲನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಎಂಬ ಕುಗ್ರಾಮದ ರೇಣುಕಾ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ನ (ಎನ್ಎಸ್ಜಿ) ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ರಾಷ್ಟ್ರದಲ್ಲಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ. ದೇಶದ ಶ್ರೇಷ್ಠ ರಕ್ಷಣಾ ಪಡೆ ಎನಿಸಿಕೊಂಡಿರುವ ಎನ್ಎಸ್ಜಿಯ ಬ್ಲ್ಯಾಕ್ಕ್ಯಾಟ್ ಕಮಾಂಡೋ ಮಹಿಳಾ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಇಡೀ ದೇಶದಿಂದ ಆಯ್ಕೆಯಾದ 21 ಜನರಲ್ಲಿ ಇಬ್ಬರು ಮಹಿಳೆಯರೆನ್ನುವುದು ಗಮನಾರ್ಹ.
ಬಡತನದ ನಡುವೆಯೂ ಚೆನ್ನಾಗಿ ಓದುತ್ತಿದ್ದ ರೇಣುಕಾ, ತನ್ನ ಚಿತ್ತವನ್ನು ದೇಶದ ರಕ್ಷಣೆಯತ್ತ ಹಾರಿಸಿದರು. ನಮ್ಮ ದೇಶದ ರಕ್ಷಣೆ ನಾವಲ್ಲದೇ ಮತ್ಯಾರೂ ಮಾಡುವುದಿಲ್ಲ. ಸೈನ್ಯಕ್ಕೆ ಸೇರಲು ಹಿಂಜರಿಕೆ ಏಕೆ? ಗಟ್ಟಿತನದಲ್ಲೇ ಸೇನೆಗೆ ಸೇರಿ ದಿಟ್ಟ ಮಹಿಳೆ ಎನ್ನಿಸಿಕೊಂಡಿದ್ದಾರೆ. ನಾಗಪ್ಪ ಮತ್ತು ನಾಗಮ್ಮ ದಂಪತಿಗೆ ರೇಣುಕಾ ಸುಪುತ್ರಿಯಾಗಿದ್ದು, ಇರೋದು ಇಬ್ಬರೇ ಹೆಣ್ಣುಕ್ಕಳಾದರೂ ಮಗಳಾಸೆಯಂತೆ ಸೈನ್ಯಕ್ಕೆ ಸೇರಲು ತಂದೆ-ತಾಯಿ ಒಪ್ಪಿ, ಅರಸಿ ಕಳಿಸಿದ್ದಾರೆ.
ರೇಣುಕಾಳ ತಾಯಿ ನಾಗಮ್ಮ ಅಂಗನವಾಡಿ ಕಾರ್ಯಕರ್ತೆ, ತಂದೆ ನಾಗಪ್ಪ ದಿನಗೂಲಿ ಕೆಲಸ ಮಾಡುತ್ತಿದ್ದು, ಮಗಳ ಆಸೆ ಈಡೇರಿಸಿದ್ದು ಜನರ ಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗಾಗಲೇ ರೇಣುಕಾರಿಗೆ ವಿವಾಹವಾಗಿದ್ದರೂ ಪತಿ ದುರ್ಗಪ್ಪ ಅವರ ಪ್ರೋತ್ಸಾಹವೂ ಸಹ ಗುರಿಗೆ ಸಹಕಾರಿಯಾಗಿದೆ.
ಬಳ್ಳಾರಿಯಲ್ಲಿ ರೇಣುಕಾ ಡಿಫ್ಲೋಮಾ ಓದುವಾಗ ಎನ್ಸಿಸಿ ಸೇರಿದ ಅವರು ಅದನ್ನು ಬಲು ಶಿಸ್ತುಬದ್ಧವಾಗಿ ಮಾಡುತ್ತಿದ್ದರು. ಖಾಕಿ ಧಿರಿಸಿನಲ್ಲಿ ರೇಣುಕಾರನ್ನು ನೋಡಿದವರಿಗೆ ಅವರಲ್ಲೊಬ್ಬ ದಕ್ಷ ಭದ್ರತಾ ಸಿಬ್ಬಂದಿ ಕಾಣುತ್ತಿದ್ದರಂತೆ. ಇದರಿಂದ ಪ್ರೇರಿತರಾದ ಅವರು 2014ರಲ್ಲಿ ಸೈನ್ಯದ ಪರೀಕ್ಷೆಗೆ ಹಾಜರಾದರು. ಅದರ ಜತೆಗೆ ರಾಜ್ಯದ ಪೊಲೀಸ್ ಪರೀಕ್ಷೆಯನ್ನೂ ಬರೆದರು. ಎರಡರಲ್ಲೂ ಆಯ್ಕೆಯಾದ ಅವರನ್ನು ಸೆಳೆದಿದ್ದು ಮಾತ್ರ ಗಡಿ ಕಾಯುವ ಸೈನ್ಯ.
ಎಲ್ಲ ಪರೀಕ್ಷೆ ಪಾಸ್ :
2014ರಲ್ಲಿ ಸೈನ್ಯಕ್ಕೆ ಸೇರಿದ ರೇಣುಕಾ ಪಂಜಾಬ್ ನಲ್ಲಿ ಒಂದು ವರ್ಷದ ತರಬೇತಿ ಪಡೆದರು. ಬಳಿಕ ಪಶ್ಚಿಮ ಬಂಗಾಳದ ಮಾಲ್ಡಾದ ಬಿಎಸ್ಎಫ್ನ 31ನೇ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿ ಸುಮಾರು 4 ವರ್ಷ ಸೇವೆ ಬಳಿಕ 2018ರಲ್ಲಿ 60ನೇ ಬೆಟಾಲಿಯನ್ನಲ್ಲಿ ವರ್ಗಾವಣೆ ಮಾಡಲಾಯಿತು. ದೈ ಹಿಕ ಪರೀಕ್ಷೆಗಳಲ್ಲದೇ, ಕಂಪ್ಯೂಟರ್ನಲ್ಲೂ ಜ್ಞಾನ ಹೊಂದಿದ್ದ ಅವರಿಗೆ ಅಲ್ಲಿ ಆಲ್ರೌಂಡರ್ ಪ್ರಶಸ್ತಿ ಕೂಡ ಲಭಿಸಿತ್ತು. ಇದು ಅವರು ಎನ್ಎಸ್ಜಿ ಸೇರಲು ನೆರವಾಯಿತು.
ಇದನ್ನೂ ಓದಿ : ಅಕ್ಕ-ತಂಗಿಯ ಪುಷ್ಪ ಕೃಷಿ ಕಮಾಲ್; ಗುಲಾಬಿಯಿಂದ ಗುಲ್ಕಂದ್ವರೆಗೂ ಉಪ ಉತ್ಪನ್ನ ತಯಾರಿಸಿ ಯಶಸ್ವಿ ಉದ್ಯಮ
ಬಿಸಿಲುನಾಡಿನ ಯುವತಿ ರೇಣುಕಾ ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಜಕ್ಕೂ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ