ತರಕಾರಿ ಬೆಳೆಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ ಪುತ್ತೂರಿನ ಯುವ ಕೃಷಿಕರು

ಬಲ್ನಾಡು ಗ್ರಾಮದ  ಸತೀಶ್ ಹಾಗೂ ತಿಮ್ಮಪ್ಪ ಗೌಡ  ಕೂಡಾ ತರಕಾರಿಯಲ್ಲಿಯೇ ಲಾಭಾಗಳಿಸಿ, ಬದುಕು ಹಸನಾಗಿಸಿಕೊಂಡಿದ್ದಾರೆ

 ಸತೀಶ್ ಹಾಗೂ ತಿಮ್ಮಪ್ಪ ಗೌಡ 

ಸತೀಶ್ ಹಾಗೂ ತಿಮ್ಮಪ್ಪ ಗೌಡ 

  • Share this:
ಪುತ್ತೂರು (ಜ. 27): ಭೂಮಿಯನ್ನೇ ನಂಬಿ ಬದುಕುವ ಕಾಯಕ ನಡೆಸುತ್ತಿರುವ ರೈತವರ್ಗ  ಯಾವುದೇ ಸಮಸ್ಯೆ ಬಂದರೂ ತಮ್ಮ ಕಾಯಕದಿಂದ ಹಿಂದೆ ಸರಿಯುವುದಿಲ್ಲ. ಅಡೆತಡೆಗಳನ್ನು ಎದುರಿಸಿ ಪ್ರಕೃತಿ ಹಾಕುವ ಸವಾಲುಗಳಿಗೆ ಎದೆಯೊಡ್ಡಿ ಕೃಷಿ ಕಾರ್ಯ ನಡೆಸುತ್ತಲೇ ಬರುತ್ತಾರೆ. ಇದೇ ಕೃಷಿ ಕಾಯಯದಲ್ಲಿ ಉತ್ತಮ ಆದಾಯಗಳಿಸಿ, ಆದರ್ಶರಾದ ಅನೇಕರಿದ್ದಾರೆ. ಅದೇ ರೀತಿ  ತಾಲೂಕಿನ ಬಲ್ನಾಡು ಗ್ರಾಮದ  ಸತೀಶ್ ಹಾಗೂ ತಿಮ್ಮಪ್ಪ ಗೌಡ  ಕೂಡಾ ತರಕಾರಿಯಲ್ಲಿಯೇ ಲಾಭಾಗಳಿಸಿ, ಬದುಕು ಹಸನಾಗಿಸಿಕೊಂಡಿದ್ದಾರೆ. ಬಸಳೆ, ಬೆಂಡೆ. ಸೌತೆ, ಮುಳ್ಳುಸೌತೆ, ಅಲಸಂಡೆ, ಪೀರೆ ಹೀಗೆ ಹಲವು ರೀತಿಯ ತರಕಾರಿಗಳನ್ನು ಬೆಳೆದು ನಾಡಿಗೆ ನೀಡುವ ಈ ಯುವ ಕೃಷಿಕರು ತಮ್ಮ ಕುಟುಂಬವನ್ನು ಈ ತರಕಾರಿ ಬೆಳೆಯಿಂದಲೇ ಪೋಷಿಸುತ್ತಿದ್ದಾರೆ.

ಮೊದಲು ತಮ್ಮ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದ ಅವರು ಇದೀಗ ಓಜಾಲ ಎಂಬಲ್ಲಿ ಹಡೀಲು ಬಿದ್ದ ಗದ್ದೆಯನ್ನು ಲೀಸ್ ಗೆ ಪಡೆದುಕೊಂಡು ಅಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಯಲ್ಲಿ ಲಾಭಾವಿಲ್ಲ ಎನ್ನುವರ ಮಧ್ಯೆ ಈ ಯುವಕರು ಹಚ್ಚ ಹಸಿರಿನ ಬೆಳೆ ಬೆಳೆದು ಗಮನ ಸೆಳೆದಿದ್ದಾರೆ. ಕಳೆದ 15 ವರ್ಷಗಳಿಂದ ತರಕಾರಿ ಕೃಷಿ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡ ಸತೀಶ್ ಜತೆ ಬಲ್ನಾಡಿನ ತಿಮ್ಮಪ್ಪ ಗೌಡ ಅವರು ಸೇರಿಕೊಂಡಿದ್ದಾರೆ. ಈ ಬಾರಿ ಲೀಸ್ ಪಡೆದುಕೊಂಡ 2 ಎಕರೆ ಸ್ಥಳದಲ್ಲಿ ತೊಂಡೆಕಾಯಿ, ಸೌತೆ, ಹರಿವೆ, ಮುಳ್ಳು ಸೌತೆ, ಬದನೆ, ಬಸಳೆ ಸಹಿತ ಸುಮಾರು 9 ಬಗೆಯ ತರಕಾರಿ ಬೆಳೆಸಿರುವ ಅವರು ರೂ.10 ಲಕ್ಷ ಆದಾಯ ಗಳಿಸಿದ್ದಾರೆ.

ಆಸಕ್ತಿ ಶ್ರಮ ಮುಖ್ಯ

ಕೆಲವೊಂದು ಬಾರಿ ನಾವು ತರಕಾರಿ ಬೆಳೆಯುವ ಕಾಯಕಕ್ಕೆ ಇಳಿದಾಗ ತೊಂದರೆಗಳಾಗುವುದು ಸಹಜ. ಬೆಳೆಯನ್ನು ಬೆಳೆಸುವ ರೀತಿಯಲ್ಲಿ ಇರುವ  `ಅನನುಭವ' ಇದಕ್ಕೆ ಕಾರಣವಾಗುತ್ತದೆ. ಕೆಲ ಸಲ ಪ್ರಕೃತಿಯ ವೈಪರೀತ್ಯಗಳೂ ನಮ್ಮ ಬೆಳೆಗೆ ಹಾನಿ ಉಂಟು ಮಾಡುತ್ತವೆ. ಆದರೆ ಶ್ರಮ ಹಾಗೂ ಆಸಕ್ತಿ ಇದ್ದರೆ ಆಗಿರುವ ಹಾನಿಯನ್ನು ಮತ್ತೆ ಲಾಭದಾಯಕ ಮಾಡಿಕೊಳ್ಳಬಹುದು. ಭೂಮಿ ತಾಯಿಯನ್ನು ನಂಬಿದ ಯಾರಿಗೂ ತೊಂದರೆ ಯಾಗುವುದಿಲ್ಲ. ಕೇವಲ ಬೀಜ ಹಾಕಿ ಬಿಟ್ಟರೆ ನಮ್ಮ ಕೆಲಸ ಮುಗಿಯೋದಿಲ್ಲ. ನಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ರೋಗಗಳು ಬಂದಾಗ ಸರಿಯಾದ ರೀತಿಯಲ್ಲಿ ಅದನ್ನು ತಡೆಯುವ ಕೆಲಸ ಮಾಡಬೇಕು. ಹಾಗಾದಾಗ ನಮ್ಮ ಬೆಳೆ ಸಮೃದ್ಧಿಯಾಗುತ್ತದೆ. ಬದುಕಿಗೂ ಒಂದು ದಾರಿ ಸಿಗುತ್ತದೆ ಎನ್ನುವುದು ಯುವ ರೈತ ಸತೀಶ್ ಅವರು ಮಾತು.

ಇದನ್ನು ಓದಿ: ಬೆಳಗಾವಿ ಗಡಿ ವಿವಾದಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ತುಪ್ಪ; ವಿವಾದಿತ ಪುಸ್ತಕ ಬಿಡುಗಡೆಗೆ ಸಿದ್ಧತೆ!

ಯುವಕರಿಗೆ ದಾರಿದೀಪವಾಗುವ ರೀತಿಯಲ್ಲಿ ಕೃಷಿ ಕಾಯಕ ನಡೆಸುತ್ತಿರುವ ಈ ಯುವ ಕೃಷಿಕರು ಬೆಳೆಯುವ ತರಕಾರಿಗೆ ಎಲ್ಲಿಲ್ಲದ ಬೇಡಿಕೆಯೂ ಇದೆ. ಪಕ್ಕದ ಕೇರಳ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಜನ ಬಂದು ತೋಟದಿಂದಲೇ ತರಕಾರಿ ಕೊಂಡೊಯ್ಯುತ್ತಿದ್ದಾರೆ. ಹೆಚ್ಚಾಗಿ ಸಾವಯವ ಗೊಬ್ಬರವನ್ನೇ ತರಕಾರಿ ಬೆಳೆಯಲು ಬಳಸುವ ಈ ಯುವ ಕೃಷಿಕರು ಕೀಟಬಾಧೆ ತಡೆಗೆ ಕೆಲವು ಸಂದರ್ಭಗಳಲ್ಲಿ ಮಾತ್ರ ರಸಾಯನಿಕಗಳನ್ನು ಬಳಸುತ್ತಾರೆ. ಕಳೆದ ನಾಲ್ಕು ತಿಂಗಳಿನಿಂದ ಲೀಸ್ ಗೆ ಪಡೆದ ಈ ಭೂಮಿಯಲ್ಲಿ ಈ ಕೃಷಿಕರಿಬ್ಬರು ತರಕಾರಿ ಬೆಳೆಯುತ್ತಿದ್ದು ಸರಾಸರಿ 10 ಲಕ್ಷದಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸುಮಾರು 40 ಕ್ವಿಂಟ್ವಾಲ್ ಬದನೆಕಾಯಿ, ಮುಳ್ಳು ಸೌತೆ 35 ಕ್ವಿಂಟಾಲ್, ತೊಂಡೆಕಾಯಿ 25 ಕ್ವಿಂಟಾಲ್ ಮಾರಾಟ ಮಾಡಿಯಾಗಿದ್ದು, ಇನ್ನಷ್ಟು ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಕೃಷಿಯಿಂದ ನಷ್ಟ ಎನ್ನುವ ಇತ್ತೀಚಿನ ಕೆಲವು ಕೃಷಿಕರಿಗೆ ಕೃಷಿಯನ್ನು ಯಾವ ರೀತಿಯಲ್ಲಿ ಮಾಡಿದಲ್ಲಿ ಲಾಭದಾಯಕ ಅನ್ನೋದನ್ನು  ಈ ಯುವ ಕೃಷಿಕರು ತೋರಿಸಿಕೊಟ್ಟಿದ್ದಾರೆ.
Published by:Seema R
First published: