ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ನೀವು ಚೂರಿ ರಾಮಯ್ಯ; ಸಿದ್ದರಾಮಯ್ಯ ಬಗ್ಗೆ ಶ್ರೀರಾಮುಲು ಲೇವಡಿ

ಬೆನ್ನಿಗೆ ಚೂರಿ ಹಾಕಿದ್ದು ನಮ್ಮ ಶಾಸಕರಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ನೀವು ಕಾಂಗ್ರೆಸ್​ಗೆ ಸೇರ್ಪಡೆಯಾದಿರಿ. ನಿಮ್ಮನ್ನು ಸಿದ್ದರಾಮಯ್ಯ ಎನ್ನುವ ಬದಲು ಚೂರಿ ರಾಮಯ್ಯ ಎನ್ನಬೇಕಾ? ಎಂದು ಲೇವಡಿ ಸಚಿವ ಬಿ. ಶ್ರೀರಾಮುಲು ಮಾಡಿದ್ದಾರೆ.

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಬೆಂಗಳೂರು (ಅ. 30): ಮುನಿರತ್ನ ಸೇರಿದಂತೆ ಕಾಂಗ್ರೆಸ್​ನ ಶಾಸಕರು ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಚಿವ ಬಿ. ಶ್ರೀರಾಮುಲು, ಬೆನ್ನಿಗೆ ಚೂರಿ ಹಾಕಿದ್ದು ನಮ್ಮ ಶಾಸಕರಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ನೀವು ಕಾಂಗ್ರೆಸ್​ಗೆ ಸೇರ್ಪಡೆಯಾದಿರಿ. ನಿಮ್ಮನ್ನು ಸಿದ್ದರಾಮಯ್ಯ ಎನ್ನುವ ಬದಲು ಚೂರಿ ರಾಮಯ್ಯ ಎನ್ನಬೇಕಾ? ಎಂದು ಲೇವಡಿ ಮಾಡಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನ. 3ರಂದು ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಚಾರ ನಡೆಸಿದ ಸಚಿವ ಬಿ. ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಬೆನ್ನಿಗೆ ಚೂರಿ ಹಾಕಿರೋದು ನಮ್ಮ ಶಾಸಕರಲ್ಲ. ನೀವು ದೇವೇಗೌಡರ ಬೆನ್ನಿಗೆ ಚೂರಿ ಹಾಕಿರೋದು. ಜೆಡಿಎಸ್​ನಿಂದ ಅಧಿಕಾರವನ್ನು ಅನುಭವಿಸಿ ದೇವೇಗೌಡರಿಗೆ ಚೂರಿ ಹಾಕಿ ಕಾಂಗ್ರೆಸ್​ಗೆ ಬಂದವರು ನೀವು. ಇವತ್ತು ನಿಮ್ಮನ್ನು ಸಿದ್ದರಾಮಯ್ಯ ಅಂತ ಕರೆಯಬೇಕಾ? ಅಥವಾ ಚೂರಿ ರಾಮಯ್ಯ ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ತಾಯಿಗೆ ಚೂರಿ ಹಾಕಿದ ನಿನ್ನನ್ನು ಜನ ನಂಬ್ತಾರಾ?; ಮುನಿರತ್ನ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧವೂ ಶಿರಾದಲ್ಲಿ ವಾಗ್ದಾಳಿ ನಡೆಸಿದ ಸಚಿವ ಬಿ. ಶ್ರೀರಾಮುಲು. ಡಿಕೆಶಿ ಅಲಿಯಾಸ್ ಬಂಡೆ ಶಿವಕುಮಾರ್ ಅಲಿಯಾಸ್ ಕಲ್ಲು ಶಿವಕುಮಾರ್ ಅವರು ತಾವೇ ಸಿಎಂ ಆಗಬೇಕು ಅಂತ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ನಡೆದಿದೆ. ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಎಬ್ಬಿಸಲು ನಿಮ್ಮ ಕೈಲಿ ಸಾಧ್ಯವಿಲ್ಲ. ಯಡಿಯೂರಪ್ಪ ಆ ಕುರ್ಚಿಯಲ್ಲಿ ಗಟ್ಟಿಯಾಗಿ ಕುಳಿತಿದ್ದಾರೆ. ಅವರನ್ನು ಎಬ್ಬಿಸೋಕೆ ನಿಮ್ಮ ಕೈಯಿಂದ ಸಾಧ್ಯವಿಲ್ಲ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆರ್​ಆರ್​ ನಗರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ನೀನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದಿ. ನಿನ್ನನ್ನು ಸೋಲಿಸಲೇಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ. ನಿನ್ನಂಥವರು ರಾಜಕೀಯದಲ್ಲಿ ಇರಬಾರದು. ಕಣ್ಣೀರು ಹಾಕಿದ್ರೆ ಅನುಕಂಪ ಬರುತ್ತದೆ ಅಂತ ನೀನು ಅಂದ್ಕೊಂಡಿದ್ರೆ ತಪ್ಪು. ಕಾಂಗ್ರೆಸ್ ತಾಯಿಗೆ ಚೂರಿ ಹಾಕಿ ಹೋದ ನಿನ್ನನ್ನು ಜನ ನಂಬ್ತಾರಾ? ಎಂದು ಆರ್​ಆರ್​ ನಗರದಲ್ಲಿ ಪ್ರಚಾರದ ವೇಳೆ ಇಂದು ಮುನಿರತ್ನ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
Published by:Sushma Chakre
First published: