ಹಳದಿ ಕಲ್ಲಂಗಡಿ ಹಣ್ಣು ಸವಿದಿದ್ದೀರಾ? ಬೆಂಗಳೂರಿನ ತುಂಬಾ ಇದರದ್ದೇ ಹವಾ !

ಬೆಂಗಳೂರು ಹೊರವಲಯದ ಕುಂಬಳಗೋಡು, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಕಡೆ ರೈತರು ಪ್ರಾಯೋಗಿಕವಾಗಿ ಕೆಲ ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದಾರೆ. ಅದರಲ್ಲಿ ಹಳದಿ ತಿರುಳಿನ ಈ ಕಲ್ಲಂಗಡಿ ತಳಿಯ ಹೆಸರು ಆರೋಹಿ.

ಹಳದಿ ಬಣ್ಣದ ಕಲ್ಲಂಗಡಿ.

ಹಳದಿ ಬಣ್ಣದ ಕಲ್ಲಂಗಡಿ.

  • Share this:
ಬೇಸಿಗೆ ಬಂತು ಅಂದ್ರೆ ಮೊದಲು ನೆನಪಾಗೋದು ಕಲ್ಲಂಗಡಿ ಹಣ್ಣು. ಅದ್ರಲ್ಲೂ ರಾಜಧಾನಿ ಬೆಂಗಳೂರಲ್ಲಂತೂ ಗಲ್ಲಿಗಲ್ಲಿಗಳಲ್ಲಿ ಕಲ್ಲಂಗಡಿ ಹಣ್ಣಿನ ರಾಶಿ ಮಾರೋಕೆ ಬಂದಿರುತ್ತೆ. ಎಷ್ಟು ಸವಿದರೂ ಸಾಲದು ಎನ್ನುವಂತೆ ಎಲ್ರೂ ಖುಷಿಯಿಂದ ಕಲ್ಲಂಗಡಿ ಹಣ್ಣನ್ನು ಕೊಳ್ಳುವವರೇ, ತಿನ್ನುವವರೇ. ಆದ್ರೆ ಈ ಸಲ ಬೆಂಗಳೂರಿನ ಜನ ಕಲ್ಲಂಗಡಿ ಹಣ್ಣನ್ನು ಸ್ವಲ್ಪ ವಿಶೇಷ ಆಸಕ್ತಿ ಇಂದಲೇ ಸವಿಯುತ್ತಿದ್ದಾರೆ. ಅದಕ್ಕೆ ಕಾರಣ ಈ ಬಾರಿ ಕಲ್ಲಂಗಡಿ ಹಣ್ಣಿನ ಬಣ್ಣ ಬದಲಾಗಿದೆ. ಆಶ್ಚರ್ಯ ಆಯ್ತಾ? ಇದು ಸತ್ಯ.ಹೊರಗೆ ಹಸಿರು ಬಣ್ಣ ಇರೋ ಈ ಹಣ್ಣು ಕೊಯ್ದಾಗ ಒಳಗೆ ಕೆಂಪು ಬಣ್ಣದ ರಸಭರಿತವಾದ ತಿರುಳು ಹೊಂದಿರುತ್ತೆ. ಇದರಲ್ಲಿ ಸಾಕಷ್ಟು ಕಪ್ಪು ಬಣ್ಣದ ಬೀಜಗಳಿದ್ದರೂ ಹಣ್ಣಿನ ರುಚಿಗೇನೂ ಅದು ಅಡ್ಡಿ ಬರೋಲ್ಲ. ಆದ್ರೂ ಬೀಜಗಳ ಪ್ರಮಾಣ ಕಡಿಮೆ ಇರುವ ಕಿರಣ್ ಜಾತಿಯ ಕಲ್ಲಂಗಡಿ ಕೂಡಾ ಇದೆ.

ಆದರೆ, ಇದು ಬಹುತೇಕ ವರ್ಷ ಪೂರ್ತಿ ಸಿಗುತ್ತದೆ. ಆದ್ರೆ ನಾವು ಹೇಳ್ತಿರೋದು ಇವುಗಳ ಬಗ್ಗೆ ಅಲ್ಲ. ಹಸಿರು ಹೊರಮೈ ತೆಗೆದರೆ ಒಳಗಿರುವ ತಿರುಳಿನ ಬಣ್ಣವೇ ಬದಲಾಗಿರುವ ಹಣ್ಣುಗಳ ಬಗ್ಗೆ.. ಹೌದು ಈ ವಿಶೇಷ ಕಲ್ಲಂಗಡಿ ಹಣ್ಣಿನ ತಿರುಳು ಹಳದಿ ಬಣ್ಣದ್ದು !ಯಾವ್ದೋ ಎಕ್ಸಾಟಿಕ್ ಖಾದ್ಯದಲ್ಲಿ ನೀವು ಹಳದಿ ಕಲ್ಲಂಗಡಿ ಬಳಸ್ತಾರೆ ಅನ್ನೋದನ್ನ ಕೇಳಿ ತಿಳಿದಿರಬಹುದು. ಆದ್ರೆ ಈ ಸಲ ಬೆಂಗಳೂರಿನ ಜನ ಈ ವಿಶೇಷ ಹಣ್ಣುಗಳನ್ನು ಸ್ವತಃ ಸವಿಯುವ ಸುವರ್ಣಾವಕಾಶ ಪಡೆದಿದ್ದಾರೆ.

ಬೆಂಗಳೂರು ಹೊರವಲಯದ ಕುಂಬಳಗೋಡು, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಕಡೆ ರೈತರು ಪ್ರಾಯೋಗಿಕವಾಗಿ ಕೆಲ ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದಾರೆ. ಅದರಲ್ಲಿ ಹಳದಿ ತಿರುಳಿನ ಈ ಕಲ್ಲಂಗಡಿ ತಳಿಯ ಹೆಸರು ಆರೋಹಿ.ಅಂದ್ಹಾಗೆ ಇದು ಮೂಲ ತೈವಾನ್ ನ ತಳಿ. ನೋನ್ ಯೂ ಎನ್ನುವ ಸಂಸ್ಥೆಯೊಂದು ಕೆಲ ರೈತರ ಮನವೊಲಿಸಿ ವಿಭಿನ್ನ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯೋಕೆ ಪ್ರೋತ್ಸಾಹ ನೀಡಿದೆ.

ಸಂಸ್ಥೆಯೇನೋ ಈ ತಳಿಗಳ ಬಗ್ಗೆ ವಿವರಿಸಿ ಬೀಜಗಳನ್ನು ಮಾರಿದೆ, ಆದ್ರೆ ಹೇಗೋ ಏನೋ ಅಂತ ಸ್ವಲ್ಪ ಅನುಮಾನದಲ್ಲೇ ಕೇವಲ ಮೂರು ಎಕರೆ ಪ್ರದೇಶಕ್ಕೆ ಮಾತ್ರ ತಾವು ಸದಾ ಬೆಳೆಯುತ್ತಿದ್ದ ಕೆಂಪು ಕಲ್ಲಂಗಡಿ ಬದಲು ಈ ಆರೋಹಿ ತಳಿಯ ಬೀಜ ಬಿತ್ತಿದ್ದಾರೆ ಕುಂಬಳಗೋಡಿನ ರೈತ ಬಸವರಾಜು. ಫಸಲೇನೋ ಚೆನ್ನಾಗೇ ಬಂದಿದೆ. ಮೊದಲ ಬೆಳೆ ತೆಗೆದುಕೊಂಡು ಬೆಂಗಳೂರಿನ ತನಕ ಮಾರಲು ಬಂದಾಗ ಇವರಿಗೆ ಸ್ವಲ್ಪ ನಿರಾಸೆಯಾಗಿದೆ.

ಮೊದಲ ದಿನ ಬಂದವರೆಲ್ಲಾ ಅಚ್ಚರಿಯಿಂದ ಹಳದಿ ತಿರುಳು ನೋಡಿದ್ದಾರೇ ಹೊರತು ಅನುಮಾನದಿಂದ ಯಾರೂ ಕೊಳ್ಳೋಕೆ ಮುಂದೆ ಬಂದಿಲ್ಲ. ಆದ್ರೆ ಧೃತಿಗೆಡದೆ ರೈತ ಮಾರನೇ ದಿನವೂ ಅದೇ ಸ್ಥಳದಲ್ಲಿ ಬಂದು ಹಣ್ಣುಗಳನ್ನು ಮಾರೋಕೆ ನಿಂತಿದ್ದಾರೆ. ಆಗ ಬಂದ್ರು ನೋಡಿ ಜನ.. ಒಬ್ಬಬ್ಬರೂ ಎರಡು, ಮೂರು, ಐದು ಹಣ್ಣುಗಳನ್ನು ಕೊಂಡುಕೊಂಡಿದ್ದಾರೆ. ವಾರ ಕಳೆದಯುವಷ್ಟರಲ್ಲಿ ಮೂರು ಎಕರೆಯಲ್ಲಿ ಬೆಳೆದಿದ್ದ ಅಷ್ಟೂ ಹಣ್ಣುಗಳನ್ನು ರೈತನೇ ನೇರವಾಗಿ ಗ್ರಾಹಕರಿಗೆ ಮಾರಿ ಖುಷಿಯಿಂದ ತೆರಳಿದ್ದಾರೆ.

ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಯಾಕಾಗಿ ತಾವಾಗಿಯೇ ಸಿಡಿ ಕೇಸ್‌ನಲ್ಲಿ ಸಿಲುಕುತ್ತಿದ್ದಾರೋ ಗೊತ್ತಿಲ್ಲ?; ಕುಮಾರಸ್ವಾಮಿ

ಹಾಗಂತ ಇವೇನೂ ದುಬಾರಿಯಲ್ಲ. ಉಳಿದ ಕಲ್ಲಂಗಡಿ ರೀತಿಯಲ್ಲೇ ಒಂದು ಕೆಜಿಗೆ 20 ರೂಪಾಯಿ ಬೆಲೆ ಇದಕ್ಕಿದೆ. ಹಾಗಾಗಿ ಜನ ಚೌಕಾಸಿ ಕೂಡಾ ಮಾಡದೇ ಖುಷಿಯಿಂದ ಹಣ್ಣು ಖರೀದಿಸಿದ್ದಾರೆ. ಕೆಂಪು ಹಣ್ಣುಗಳಿಗಿಂತ ಹಳದಿ ಹಣ್ಣುಗಳು ಸ್ವಲ್ಪ ಹೆಚ್ಚೇ ಸಿಹಿಯಾಗಿವೆ. ಸಲಾಡ್, ಜ್ಯೂಸ್ ಎಲ್ಲವಕ್ಕೂ ಇವು ಸೂಕ್ತವಾಗುತ್ತದೆ. ಹಳದಿ ಹಣ್ಣುಗಳ ಜೊತೆಗೆ ಬೂದು ಬಣ್ಣದ, ಕೆಂಪು ತಿರುಳಿನ ಜನ್ನತ್ ವೆರೈಟಿ ಕಲ್ಲಂಗಡಿ ಕೂಡಾ ಹೊಸಾ ಪ್ರಯೋಗವೇ.

ಈಗಂತೂ ಬೆಂಗಳೂರು ಜನರಿಗೆ ಈ ವಿಶೇಷ ಹಣ್ಣುಗಳ ಪರಿಚಯವಾಗಿದೆ. ಬಹುಶಃ ಒಳ್ಳೆ ಪ್ರತಿಕ್ರಿಯೆ ನೋಡಿ ಮುಂದಿನ ವರ್ಷ ಹೆಚ್ಚು ರೈತರು ಇವುಗಳನ್ನು ಬೆಳೆದು ಹೆಚ್ಚು ವೆರೈಟಿ ಕಲ್ಲಂಗಡಿ ಹಣ್ಣುಗಳನ್ನು ಸವಿಯುವ ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ.
Published by:MAshok Kumar
First published: