Yellow Disease in Arecanut: ಬೆಲೆ ಇದೆ, ಬೆಳೆಯೇ ಇಲ್ಲ; ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ

ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.

ಅಡಿಕೆ ಬೆಳೆ

ಅಡಿಕೆ ಬೆಳೆ

  • Share this:
 ದಕ್ಷಿಣ ಕನ್ನಡ: ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ (Arecanut Crop)  ಮಾರುಕಟ್ಚೆಯಲ್ಲಿ (MARKET) ಉತ್ತಮ ಧಾರಣೆ ಕಂಡು ಬರುತ್ತಿದೆ. ಆದರೆ ಈ ಧಾರಣೆ ಏರಿಕೆಯ ಜೊತೆಗೆ ಅಡಿಕೆಗೆ ರೋಗಗಳ ಸಮಸ್ಯೆಯೂ (Disease Problem for Arecanut) ಹೆಚ್ಚಾಗುತ್ತಿದೆ. ಅಡಿಕೆಗೆ ಕೊಳೆರೋಗ ಎನ್ನುವುದು ಪ್ರತೀ ವರ್ಷದ ಸಮಸ್ಯೆಯಾದರೆ, ಜಿಲ್ಲೆಯ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ರೋಗದ ಸಮಸ್ಯೆಗೆ (Yellow Disease in Arecanut) ಈವರೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲಾಗಿಲ್ಲ. ಈ ನಿಟ್ಟಿನಲ್ಲಿ ನಡೆಸಲಾದ ಕೆಲವೊಂದು ಸಂಶೋಧನೆಗಳು ಯಶಸ್ವಿಯಾದರೂ, ಸಂಪೂರ್ಣ ಸಾಧನೆಗೆ ಇನ್ನಷ್ಟು ವರ್ಷಗಳು ಕಾಯಬೇಕಾದ ಸ್ಥಿತಿಯಿದೆ.

ಒಳ್ಳೆಯ ಬೆಲೆ ಬಂದಿದೆ ಆದ್ರೆ ಫಸಲೇ ಇಲ್ಲ! 

ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಇದೀಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಈ ಹಿಂದೆ ಕಿಲೋವೊಂದಕ್ಕೆ 200 ರಿಂದ 220 ರೂಪಾಯಿಗಳ  ಆಸುಪಾಸಿನಲ್ಲಿದ್ದ ಅಡಿಕೆ ಬೆಳೆ ಇದೀಗ 400-450 ರೂಪಾಯಿಗಳ ಅಂಚಿಗೆ ಬಂದು ತಲುಪಿದೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾದಂತೆ ಅಡಿಕೆ ಗಿಡಗಳಿಗೆ ರೋಗಗಳ ಬಾಧೆಯೂ ಹೆಚ್ಚಾಗಲಾರಂಭಿಸಿದೆ. ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಪ್ರತೀ ವರ್ಷವೂ ಕೊಳೆರೋಗ ಗ್ಯಾರೆಂಟಿಯಾಗಿದ್ದು, ಈ ಬಾರಿ ಕರಾವಳಿ ಭಾಗದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ಮುಕ್ಕಾಲು ಭಾಗದಷ್ಟು ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಸರಿಯಾದ ಸಮಯದಲ್ಲಿ ಬೋಡೋ ದ್ರಾವಣವನ್ನು ಸಿಂಪಡಿಸಲಾಗದೇ ಇದ್ದ ಕಾರಣ ಇದೀಗ ಗಿಡಗಳ ಹಿಂಗಾರ ಕರಟಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಸಣ್ಣ ಅಡಿಕೆಗಳು ಉದುರಲಾರಂಭಿಸಿದೆ.

ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರವೇ ಇಲ್ಲವೇ? 

ಈ ಸಮಸ್ಯೆಯ ಜೊತೆಯಲ್ಲಿ ಜಿಲ್ಲೆಯ ಕಾಣಿಯೂರು, ಮಡಪ್ಪಾಡಿ, ಸಂಪಾಜೆ, ಪೆರಾಜೆ, ಮರ್ಕಂಜ ಮೊ ದಲಾದ ಕಡೆಗಳಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರ ಸಂಪೂರ್ಣ ನಷ್ಟದಲ್ಲಿದ್ದಾನೆ. ಹಳದಿ ಎಲೆ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನು ರೋಗ ಬಾಧಿಸಿದ ಅಡಿಕೆ ತೋಟಗಳಲ್ಲಿ ಮಾಡಿದ್ದರೂ, ಈವರೆಗೂ ಶಾಶ್ವತ ಪರಿಹಾರವನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿಲ್ಲ.

ಇದನ್ನೂ ಓದಿ: Tourist Spot: ಕೊಡಗಿನಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಿನಿ ನಯಾಗರ

ಕೃಷಿ ವಿಜ್ಞಾನಿಗಳು ಏನಂತಾರೆ? 

ಅಡಿಕೆ ಹಳದಿ ಎಲೆ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಹಲವು ರೀತಿಯ ಸಂಶೋಧನೆಗಳನ್ನು ಮಾಡಲಾಗುತ್ತಿದ್ದು, ಇವುಗಳು ಕೆಲವು ಹಂತದಲ್ಲಿ ಯಶಸ್ಸನ್ನೂ ಪಡೆದಿದೆ. ಹಳದಿ ಎಲೆ ರೋಗಕ್ಕೆ ಮುಖ್ಯವಾಗಿ ಕಾರಣ ಅಡಿಕೆ ಬೆಳೆ ಮಾಡುವ ಕೃಷಿಕರಿಗೆ ಮಾಹಿತಿಯ ಕೊರತೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಡಿಕೆ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿಯಿಲ್ಲದಿರುವುದು ಎನ್ನುವುದನ್ನು ಕೃಷಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಡಿಕೆ ಬೆಳೆಗಾರರು ಅಡಿಕೆ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡದ ಪರಿಣಾಮ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿಯು ಕುಂಠಿತಗೊಂಡಿದೆ. ಇದರಿಂದಾಗಿ ಹಳದಿ ರೋಗ ಹರಡುವ ವೈರಸ್ ಗಳು ಬಹುಬೇಗ ಇಂಥಹ ಗಿಡಗಳನ್ನು ಆವರಿಸಿ ಬಹುಬೇಗ ಸಾಯುವಂತೆ ಮಾಡುತ್ತದೆ.

ಹೈರಾಣಾದ ಅಡಿಕೆ ಬೆಳೆಗಾರರು

ಈ ಹಿನ್ನಲೆಯಲ್ಲಿ ಹಳದಿ ಎಲೆ ರೋಗ ಇರುವಂತಹ ತೋಟಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಗಿಡಗಳಿಗೆ ಸರಿಯಾದ ಪ್ರಮಾಣ ಪೋಷಕಾಂಶಗಳನ್ನು ನೀಡಲು ಮಾಹಿತಿ ನೀಡುವ ಕಾರ್ಯವನ್ನು ಮಾಡಿದ ಪರಿಣಾಮ ಇಂದು ಹೆಚ್ಚಿನ ಪ್ರಮಾಣದ ತೋಟದಲ್ಲಿ ಹಳದಿ ಎಲೆರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ. ಅಲ್ಲದೆ ಹಳದಿ ಎಲೆರೋಗ ಬಾಧಿಸಿದ ತೋಟದಲ್ಲಿ ಸಣ್ಣ ಸಸಿಗಳನ್ನು ನೆಟ್ಟು ರೋಗರಹಿತ ಗಿಡಗಳನ್ನು ಮಾಡಲಾಗುತ್ತಿದೆ. ಒಂದೆಡೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ, ಇನ್ನೊಂದು ಕಡೆ ಹಳದಿ ಎಲೆರೋಗದಿಂದ ಗಿಡಗಳ ನಾಶದಿಂದಾಗಿ ಅಡಿಗೆ ಬೆಳೆಗಾರ ಇದೀಗ ಹೈರಾಣಾಗಿದ್ದಾನೆ. ಹಳದಿ ಎಲೆರೋಗದಿಂದ ಆದಷ್ಟು ಬೇಗ ಮುಕ್ತಿ ದೊರೆಯುವಂತೆ ಹಾತೊರೆಯುವ ಕೃಷಿಕನಿಗೆ ಇನ್ನಷ್ಟು ವರ್ಷಗಳು ಕಾಯಬೇಕಾದ ಅನಿವಾರ್ಯತೆಯೂ ಸದ್ಯದ ಪರಿಸ್ಥಿತಿಯಲ್ಲಿದೆ.
Published by:Kavya V
First published: