ವಿನಯ್ ಕುಲಕರ್ಣಿ ಬಂಧನ ವಿಚಾರ: ಸಿಬಿಐ ವಿಚಾರಣೆ ಸಹಜ – ಸಿಎಂ ಯಡಿಯೂರಪ್ಪ

ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ವಿಜಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐನ ಈ ಕ್ರಮವನ್ನು ಕಾಂಗ್ರೆಸ್ ಖಂಡಿಸಿದ್ದು, ಇದು ದ್ವೇಷದ ರಾಜಕಾರಣ ಎಂದು ಆರೋಪಿಸಿದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಮಂಗಳೂರು(ನ. 05): ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್ ಸಂಬಂಧ ವಿನಯ್ ಕುಲಕರ್ಣಿ ಮತ್ತವರ ಸಹೋದರನನ್ನ ಸಿಬಿಐ ವಶಕ್ಕೆ ಪಡೆದಿದೆ. ಕಾಂಗ್ರೆಸ್ ಇದನ್ನು ಬಿಜೆಪಿಯ ದ್ವೇಷದ ರಾಜಕಾರಣ ಎಂದು ಹೇಳಿದರೆ, ಬಿಜೆಪಿ ಮಾತ್ರ ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿರುವರಿಂದ ಸಿಬಿಐ ವಶಕ್ಕೆ ಪಡೆದಿದೆ ಎಂದು ಹೇಳಿದೆ. ಈ ನಡುವೆ ವಿನಯ್ ಕುಲಕರ್ಣಿ ಬಿಜೆಪಿ ಸೇರುವ ವಿಚಾರ ಸಂಪೂರ್ಣ ಸುಳ್ಳು ಸುದ್ದಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಎಂ‌‌ ಬಿ.ಎಸ್. ಯಡಿಯೂರಪ್ಪ, ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿದ್ದಾರೆ. ಈ ಕಾರಣದಿಂದ‌ ಅವರನ್ನು ಸಿಬಿಐ ‌ವಶಕ್ಕೆ ಪಡೆದಿದೆ. ಯೋಗೀಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿತ್ತು, ಸದ್ಯ ಸಿಬಿಐಗೆ ಸಾಕ್ಷ್ಯಾಧಾರ ಸಿಕ್ಕಿರುವುದರಿಂದ‌ ವಿನಯ್ ಕುಲಕರ್ಣಿಯನ್ನು‌ ವಶಕ್ಕೆ ಪಡೆದಿದೆ. ಈಗಲಾದರೂ ನ್ಯಾಯ ಸಿಗಲಿ ಎಂಬುದೇ ನಮ್ಮ ಅಭಿಪ್ರಾಯ ಎಂದು ಹೇಳಿದ್ದಾರೆ. ಹಾಗೆಯೇ, ವಿನಯ್ ಕುಲಕರ್ಣಿ ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿಯನ್ನು ಶುದ್ದ ಸುಳ್ಳು ಎಂದು ಇದೇ ಸಂದರ್ಭದಲ್ಲಿ ಸಿಎಂ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ರೈತ ಸಂಘಟನೆಗಳಿಂದ ಪ್ರತಿಭಟನೆ

ಇದೊಂದು ಸಿಬಿಐನ‌ ಕಾನೂನಾತ್ಮಕ ನಿರ್ಧಾರ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ತನಿಖೆ ಪರಿಶೀಲನೆ ಬಳಿಕ ಸಿಬಿಐ ಕಾನೂನು ಕ್ರಮ ಕೈಗೊಂಡಿದೆ. ಕಾಂಗ್ರೆಸ್​ಗೆ ಎಲ್ಲರದಲ್ಲೂ ರಾಜಕೀಯ ಹುಡುಕುವ ಹುಚ್ಚಿದೆ. ಕಾಂಗ್ರೆಸ್ ಆಡಳಿತದಲ್ಲೂ ಸಿಬಿಐ ದಾಳಿ ಬಂಧನ ಆಗುತ್ತಿತ್ತು. ಆಗೆಲ್ಲ ಇದು ಇವರ ಪ್ರೇರಣೆಯಲ್ಲಿ ಆಗುತ್ತಿತ್ತಾ ಎಂದು ನಳಿನ್ ಪ್ರಶ್ನಿಸಿದ್ದಾರೆ.

ಸಿಬಿಐನ ಈ ದಾಳಿಯನ್ನು ಸಚಿವ ಆರ್. ಅಶೋಕ್, ಈಶ್ವರಪ್ಪ, ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ್ ಪೂಜಾರಿಯೂ ಸಮರ್ಥಿಸಿಕೊಂಡಿದ್ದಾರೆ. ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ಒಟ್ಟಿನಲ್ಲಿ ಕುಲಕರ್ಣಿ ಸಹೋದರರನ್ನು ಸಿಬಿಐ ವಶಕ್ಕೆ ಪಡೆದಿರೋದನ್ನು ವಿಪಕ್ಷಗಳು ಖಂಡಿಸಿದ್ರೆ, ಆಡಳಿತ ಪಕ್ಷದ ಪ್ರಮುಖರು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾನೂನು ಪ್ರಕಾರ ನಿಷ್ಪಕ್ಷಪಾತ ತನಿಖೆಯನ್ನು ಸಿಬಿಐ ನಡಸಬೇಕಾಗಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿದೆ.

ವರದಿ: ಕಿಶನ್ ಕುಮಾರ್
Published by:Vijayasarthy SN
First published: