ಬೆಂಗಳೂರು(ನ. 08): ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ನಿರಾಯಾಸ ಗೆಲುವು ಸಾಧಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ. ಆರ್ ಆರ್ ನ ಗರದಲ್ಲಿ ಮುನಿರತ್ನ 35-40 ಸಾವಿರ ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 20-25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಎಂದು ಬಿಎಸ್ವೈ ಹೇಳಿದ್ದಾರೆ. ಆರ್ ಆರ್ ನಗರ ಮತ್ತು ಶಿರಾದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಯಡಿಯೂರಪ್ಪ ಭವಿಷ್ಯ ನುಡಿದಿದ್ಧಾರೆ.
ಯಡಿಯೂರಪ್ಪ ಏನಾದರೂ ಹೇಳಿದರೆ 10 ಬಾರಿ ಯೋಚನೆ ಮಾಡಿ ಹೇಳುತ್ತೇನೆ. ಉಪಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯಗೆ 10ನೇ ತಾರೀಖು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಿ-ವೋಟರ್ನ ಮತಗಟ್ಟೆ ಸಮೀಕ್ಷೆ ಪ್ರಕಾರವೂ ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುವ ಸಾಧ್ಯತೆ ಕಂಡಿದೆ. ಚುನಾವಣೆಗಿಂತ ಮುಂಚೆಯೂ ಯಡಿಯೂರಪ್ಪ ಅವರು ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಶತಃ ಸಿದ್ಧ ಎಂದು ಆತ್ಮವಿಶ್ವಾಸಪೂರ್ವಕವಾಗಿ ಹೇಳಿದ್ದರು.
ಇದನ್ನೂ ಓದಿ: Bihar Exit Poll Results | ಮತದಾನೋತ್ತರ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್ಬಂಧನ್ಗೆ ಅಧಿಕಾರ ಸಾಧ್ಯತೆ
ಇನ್ನು, ಶಿವಮೊಗ್ಗಕ್ಕೆ ತೆರಳುವ ಮುನ್ನ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ಬಿಹಾರ ಚುನಾವಣೆಯಲ್ಲೂ ಎನ್ಡಿಎ ಗೆಲುವು ಸಾಧಿಸಬಹುದು ಎಂದು ಅಂದಾಜಿಸಿದ್ದಾರೆ. ಬಿಹಾರದಲ್ಲಿ ಏಳು ಸುತ್ತಿನ ಮತದಾನ ಮುಕ್ತಾಯವಾಗಿದ್ದು, ಅಲ್ಲಿ ನಡೆದ ವಿವಿಧ ಎಕ್ಸಿಟ್ ಪೋಲ್ಗಳ ಪ್ರಕಾರ ಆರ್ಜೆಡಿ ನೇತೃತ್ವದ ಮಹಾಘಟಬಂಧನ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮತಗಟ್ಟೆ ಸಮೀಕ್ಷೆಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೆ, ಸರ್ಕಾರ ರಚನೆ ಮಾಡುವುದು ನಾವೆಯೇ. ನೂರಕ್ಕೆ ನೂರು ನಾವೇ ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದ್ದಾರೆ.
ವರದಿ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ