ವಿಜಯಪುರದಲ್ಲಿ ನಾಳೆ ಜಿದ್ದಾ ಜಿದ್ದಿಗೆ ಸಾಕ್ಷಿಯಾಗಲಿರುವ ಬಂದ್; ಬಂದ್​ ವಿಫಲಗೊಳಿಸಲು ಯತ್ನಾಳ್​ ಕರೆ

ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದಲೂ ಜನ ಬನ್ನಿ.  ಜನಶಕ್ತಿಯ ಮುಂದೆ ಯಾವುದೇ ಶಕ್ತಿ ಇಲ್ಲ.  ಪೊಲೀಸರು ನಿಮ್ಮ ರಕ್ಷಣೆಗೆ ಇರುತ್ತಾರೆ ಎಂದು ಯತ್ನಾಳ ಅಭಯ ನೀಡಿದ್ದಾರೆ

ವಿಜಯಪುರ ನಗರ

ವಿಜಯಪುರ ನಗರ

  • Share this:
ವಿಜಯಪುರ, (ಡಿ. 04): ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಸಫಲತೆ ಅಥವಾ ವಿಫಲತೆ ಜಿಲ್ಲೆಯಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವಾಟಾಳ ನಾಗರಾಜ ನೇತೃತ್ವದಲ್ಲಿ ಕರೆ ನೀಡಿರುವ ಬಂದ್​ಗೆ  ಬಿಜೆಪಿ ಶಾಸಕ ಮತ್ತು ಹಿಂದುತ್ವವಾದಿ ಬಸನಗೌಡ ರಾ. ಪಾಟೀಲ ಯತ್ನಾಳ ವಿಫಲಗೊಳಿಸಲು ಕರೆ ನೀಡಿದ್ದಾರೆ.  ಅಲ್ಲದೇ, ಈ ಬಂದ್ ಆಚರಣೆಯ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಕುತಂತ್ರ ಅಡಗಿದೆ.  ಬಂದ್ ಕರೆ ನೀಡಿರುವವರು, ಬಡವರು, ಕಾರ್ಮಿಕರು, ಹಿಂದುತ್ವ ವಿರೋಧಿಗಳು ಎಂದು ವಾಕ್ಪ್ರಹಾರ ನಡೆಸಿದ್ದಾರೆ. 

ಬಂದ್ ವಿಫಲಗೊಳಿಸಲು ಯತ್ನಾಳ, ಸ್ವಾಮಿ ವಿವೇಕಾನಂದ ಸೇನೆ ಕರೆ 

ಯಾರೂ ಬಂದ್ ಮಾಡಬೇಡಿ.  ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ಕಾರ್ಯಕರ್ತರು ನಿಮ್ಮ ರಕ್ಷಣೆಗಿದ್ದಾರೆ.  ನಾಳೆ ಹೆಚ್ಚಾಗಿ ವ್ಯಾಪಾರ ಮತ್ತು ಖರೀದಿ ಮಾಡಿ.  ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದಲೂ ಜನ ಬನ್ನಿ.  ಜನಶಕ್ತಿಯ ಮುಂದೆ ಯಾವುದೇ ಶಕ್ತಿ ಇಲ್ಲ.  ಪೊಲೀಸರು ನಿಮ್ಮ ರಕ್ಷಣೆಗೆ ಇರುತ್ತಾರೆ ಎಂದು ಯತ್ನಾಳ ಅಭಯ ನೀಡಿದ್ದಾರೆ.
ಯತ್ನಾಳ ಬೆಂಬಲವಾಗಿ ನಾಳೆ ಬೆ. 8ಕ್ಕೆ ಸ್ವಾಮಿ ವಿವೇಕಾನಂದ ಸೇನೆ ಜಿಲ್ಲಾಧ್ಯಕ್ಷ ರಾಘವ ಅಣ್ಣಿಗೇರಿ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯಪುರ ನಗರದ ಗ್ರಾಮ ದೇವತೆ ಶ್ರೀ ಸಿದ್ಧೇರಾಮೇಶ್ವರ ದೇವಸ್ಥಾನ ಬಳಿ ಜಮಾಯಿಸಲಿದ್ದಾರೆ.  ವ್ಯಾಪಾರಿಗಳಿಗೆ ಯಾರಿಗಾದರೂ ತೊಂದರೆಯಾದರೆ, ಯಾರಾದರೂ ಬಲವಂತದಿಂದ ಬಂದ್ ಮಾಡಿಸಲು ಬಂದರೆ ನಮಗೆ ಕರೆ ಮಾಡಿ.  ನಿಮ್ಮ ಜೊತೆಗೆ ಬರುತ್ತೇವೆ.  ಬಲವಂತವಾಗಿ ಬಂದ್ ಮಾಡಿಸುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

 ಶಾಂತಿಯುತ, ಸ್ವಯಂ ಪ್ರೇರಿತ ಬಂದ್ ಗೆ ಕರವೇ ಮನವಿ

ಈ ಮಧ್ಯೆ ಬಂದ್ ಯಶಸ್ವಿ ಮಾಡುವುದಾಗಿ ತಿಳಿಸಿರುವ ಕರವೇ ಜಿಲ್ಲಾಧ್ಯಕ್ಷ ಎಂ. ಸಿ. ಮುಲ್ಲಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ, ಸ್ವಯಂ ಪ್ರೇರಿತರಾಗಿ ಬಂದ್ ನಲ್ಲಿ ಪಾಲ್ಗೋಳ್ಳುವಂತೆ ವ್ಯಾಪಾರಿಗಳು, ನಾನಾ ಸಂಘಟನೆಗಳಿಗೆ ಕರವೇಯಿಂದ ಮನವಿ ಪತ್ರ ನೀಡಲಾಗಿದೆ.  ಪ್ರತಿಭಟನಾ ಸಂದರ್ಭದಲ್ಲಿಯಾದರೂ ಕೆಲವು ಗಂಟೆ ವ್ಯಾಪಾರ ವಹಿವಾಟು ಬಂದ್ ಮಾಡಿ ಎಂದು ಮನವಿ ಮಾಡಿದ್ದೇವೆ.  ಆದರೆ, ಬಂದ್ ಮಾಡದಂತೆ ಯತ್ನಾಳ ಬೆದರಿಕೆ ಹಾಕುತ್ತಿದ್ದಾರೆ.  ಆದರೂ ನಾವು ಬಂದ್ ಮಾಡುತ್ತೇವೆ.  ಸಿಎಂ ಪ್ರತಿಕೃತಿಯ ಶವಯಾತ್ರೆ ಮಾಡಿ ದಹನ ಮಾಡುತ್ತೇವೆ.  ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಶಾಂತಿಯುತ ಪ್ರತಿಭಟನೆಗೆ ಅಭ್ಯಂತರವಿಲ್ಲ- ಡಿಸಿ ಹೇಳಿಕೆ

ಈ ಮಧ್ಯೆ, ಬಂದ್ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಸರಕಾರದ ನಿರ್ಧಾರವನ್ನು ಪಾಲಿಸುತ್ತೇವೆ.  ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ.  ಬಂದ್ ಗೆ ಅನುಮತಿ ನೀಡಬಾರದು ಎಂದು ಕೋರಿ ಹಲವಾರು ಜನ ಮನವಿ ಪತ್ರ ಸಲ್ಲಿಸಿದ್ದಾರೆ.  ಯಾವುದಾದರೂ ಸಮಸ್ಯೆಗಳಿದ್ದರೆ ಶಾಂತಿಯುತವಾಗಿ ಗಮನ ಸೆಳೆಯುವುದು ಅವರ ಹಕ್ಕು.  ಡಿ. 5ರ ಬಂದ್ ಕುರಿತು ಮಾಹಿತಿ ಬಂದ ಕೂಡಲೇ ಎಸ್ಪಿ ಅವರ ಜೊತೆ ಚರ್ಚಿಸಿದ್ದೇವೆ.

ಯಾವುದೇ ರೀತಿ ಅಹಿತರಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ.  ಬಂದ್ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
 
ಬಂದ್ ಹಿನ್ನೆಲೆ ಬಂದೋಬಸ್ತ್ ಬಗ್ಗೆ ಎಸ್ಪಿ ಮಾಹಿತಿ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಬಿಗೀ ಬಂದೊಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಬಲವಂತವಾಗಿ ಯಾರೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ.  ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡುವಂತಿಲ್ಲ. ಬಂದ್ ಗೆ ಅವಕಾಶ ಇಲ್ಲ.  ವ್ಯಾಪಾರ ವಹಿವಾಟು ಮತ್ತು ವಾಹನಗಳ ಸಂಚಾರ ಎಂದಿನಂತಿರಲಿದೆ.  ವಿಜಯಪುರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  139 ಜ ಪೊಲೀಸ್ ಅಧಿಕಾರಿಗಳು, 671 ಪೊಲೀಸ್ ಸಿಬ್ಬಂದಿ, 3 ಐ ಆರ್ ಬಿ ಮತ್ತು 7 ಡಿಎಆರ್ ತುಕಡಿಗಳನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ ಎಂದು ಎಸ್​ಪಿ ಅನುಪಮ ಅಗ್ರವಾಲ ತಿಳಿಸಿದದಾರೆ.

ಏನಿರುತ್ತೇ, ಏನಿರಲ್ಲ?

ಬಂದ್ ಕರೆಗೆ ಬೆಂಬಲಿಸದಿರಲು ನಾನಾ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿವೆ.  ಬಸ್ ಸಂಚಾರ ಎಂದಿನಂತಿರಲಿದೆ.  ಸರಕಾರಿ ಸೇವೆಗಳು ಯಥಾಸ್ಥಿತಿಯಲ್ಲಿರಲಿವೆ.  ಪೆಟ್ರೋಲ್ ಬಂಕ್ ಗಳು, ಹೋಟೇಲುಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.  ವ್ಯಾಪಾರಸ್ಥರ ಸಂಘ, ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸಂಕಿರ್ಣ ಎಂದಿನಂತೆ ತೆರೆದಿರಲಿವೆ.  ಅಟೋಗಳ ಸಂಘಟನೆಗಳು ಬಂದ್ ನಲ್ಲಿ ಪಾಲ್ಗೋಳ್ಳುವ ಅಥವಾ ಬಿಡುವ ನಿರ್ಧಾರವನ್ನು ಅಟೋಗಳ ಮಾಲಿಕರು ಮತ್ತು ಚಾಲಕರಿಗೆ ಬಿಟ್ಟಿವೆ.
Published by:Seema R
First published: