ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ನೆಲಸಮಕ್ಕೆ ನಿರ್ಧಾರ; ಪಾಲಿಕೆ ವಿರುದ್ದ ರಾಜವಂಶಸ್ಥ ಯದುವೀರ್ ಅಸಮಾಧಾನ

ಇದೇ ವಿಚಾರವಾಗಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದ ಯುದುವೀರ್ ನಮ್ಮ ಮುಂದಿನ ಪಿಳಿಗೆಗೆ  ಪಾರಂಪರಿಕತೆಯನ್ನ ಚಿತ್ರದಲ್ಲಿ ತೋರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

news18-kannada
Updated:January 13, 2020, 9:36 PM IST
ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ನೆಲಸಮಕ್ಕೆ ನಿರ್ಧಾರ; ಪಾಲಿಕೆ ವಿರುದ್ದ ರಾಜವಂಶಸ್ಥ ಯದುವೀರ್ ಅಸಮಾಧಾನ
ಮೈಸೂರಿನ ಲ್ಯಾನ್ಸ್​ಡೌನ್ ಕಟ್ಟಡ.
  • Share this:
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ತನ್ನದೆಯಾದ ಪರಂಪರೆ ಇತಿಹಾಸ ಇದೆ. ನೂರಾರು ವರ್ಷಗಳ ರಾಜಮಹಾರಾಜರ ಆಡಳಿತ ಇಂದಿಗೂ ಮಾದರಿಯಾಗಿದೆ. ಈ ಇತಿಹಾಸ ಹಾಗೂ ಪರಂಪರೆಯ ರೂಪಕವಾಗಿ ಮೈಸೂರಿನಾದ್ಯಾಂತ ಹಲವು ಪಾರಂಪರಿಕ ಕಟ್ಟಡಗಳಿವೆ. ಒಂದೊಂದು  ಕಟ್ಟಡಗಳು ಒಂದೊಂದು ಉದ್ದೇಶಕ್ಕೆ ನಿರ್ಮಿಸಿದ್ದು ಮೈಸೂರಿನ ರಾಜರ ದೂರದೃಷ್ಟಿ ಇಂದಿನ ಆಡಳಿತಗಾರರಿಗೆ ನಾಂದಿ ಹಾಕಿಕೊಟ್ಟಿತ್ತು. ಆದರೆ ಈ ಪಾರಂಪರಿಕ ಕಟ್ಟಡಗಳಲ್ಲಿ ಲ್ಯಾನ್ಸ್ ಡೌನ್ ಹಾಗೂ ದೇವರಾಜ ಮಾರುಕಟ್ಟೆ ಸುಸ್ಥಿರವಾಗಿಲ್ಲ ಅಂತ ನೆಲಸಮ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಪಾಲಿಕೆ ನಡೆಯ ಬಗ್ಗೆ ಮೈಸೂರು ರಾಜಮನೆತನ ಕೆಂಡಾಮಂಡಲಾಗಿದೆ. ಸ್ವತಃ ಯದುವೀರ್ ಒಡೆಯರ್ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಮೂರೂವರೆ ಎಕರೆ ವಿಸ್ತೀರ್ಣದಲ್ಲಿರುವ 120 ವರ್ಷ ಇತಿಹಾಸ ಇರುವ ಕಟ್ಟಡ. ಆದರೆ ಮೂರ್ನಾಲ್ಕು ವರ್ಷಗಳ ಹಿಂದೆ ಕಟ್ಟಡದ ಕೆಲ ಭಾಗ ಶಿಥಿಲಗೊಂಡು ಕುಸಿದು ಬಿದ್ದಿತ್ತು. ನಂತರ ಮಾರುಕಟ್ಟೆ ನೆಲಸಮಗೊಳಿಸಲು ಪಾಲಿಕೆ ನಿರ್ಣಯ ಮಾಡಿತ್ತು. ಆದರೆ ಮಾರುಕಟ್ಟೆಯ ಮಳಿಗೆಯ ವ್ಯಾಪಾರಿಗಳು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ನಂತರ  ಕೋರ್ಟ್ ಚಂಡನ್ನು ಜಿಲ್ಲಾಧಿಕಾರಿ ಅಂಗಳಕ್ಕೆ ನೀಡಿ, ತಜ್ಞರ ಸಲಹೆ ಪಡೆಯಲು ಸೂಚನೆ ನೀಡಿತು. ಅದರಂತೆ ಇದೀಗಾ ತಜ್ಞರ ಸಮಿತಿ ಒಂದು ತಿಂಗಳ ಕಾಲ ಪರಿಶೀಲನೆ ನಡೆಸಿ ಕಟ್ಟಡ ಸುಸ್ಥಿರವಾಗಿಲ್ಲ ಅಂತ ವರದಿ  ಕೊಟ್ಟಿದೆಯಂತೆ. ಇದರಿಂದ ಈ ಹಿಂದೆ ಪಾಲಿಕೆ ನಿರ್ಧರಿಸಿದಂತೆ ಕಟ್ಟಡ ನೆಲಸಮ ಮಾಡಲು ನಿರ್ಣಯಿಸಿದ್ದು, ಕೋರ್ಟ್​ಗೆ ವರದಿ ಕೊಡಲು ಮುಂದಾಗಿದೆ. ಲ್ಯಾನ್ಸ್ ಡೌನ್ ಬಿಲ್ಡಿಂಗ್ ಬಗ್ಗೆಯೂ ಇದೇ ನಿರ್ಣಯ ಮಾಡಿದ್ದು ಎರಡು ಕಟ್ಟಡಗಳನ್ನ ನೆಲಸಮ ಮಾಡಿ ಹೊಸದಾಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತ ಗುರುದತ್‌ ಸಹ ನ್ಯಾಯಾಲಯಕ್ಕೆ ವರದಿ ನೀಡಲು ಸಜ್ಜಾಗುತ್ತಿದ್ದಾರಂತೆ.

ಆದರೆ ಈ ವಿಚಾರವಾಗಿ ಮೈಸೂರಿನ ರಾಜಮನೆತನ ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೈಸೂರಿನ ಪರಂಪರೆಯನ್ನು ಸಾರುವಂತಹ ಈ ಪಾರಂಪರಿಕ ಕಟ್ಟಡಗಳು. ಆದರೆ ಇವುಗಳ ಯಥಾಸ್ಥಿತಿ ಕಾಪಾಡುವ ಬದಲು ಇದನ್ನು ಕೆಡವಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಸದ್ಯ ತಜ್ಞರ ಸಮಿತಿ ವರದಿ ಬಗ್ಗೆ ಸಹ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಜ್ಞರ ಸಮಿತಿಯಲ್ಲಿ ಇಂಜಿನಿಯರ್​ಗಳಿದ್ದಾರೆ, ಅವರಿಗೆ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ಇರಲ್ಲ. ಅವರು ಸಿಮೆಂಟ್ ನಲ್ಲಿ ಕೆಲಸ ಮಾಡೋರು. ಅವರಿಗೆ ಪಾರಂಪರಿಕ ಕಟ್ಟಡವನ್ನ ಸುಣ್ಣ ಬಳಸಿ ಮಾಡಿದ್ದಾರೆ ಅನ್ನುವ ಜ್ಞಾನ ಕೂಡ ಇರಲ್ಲ. ಇಂತಹವರಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯನ್ನು ಹೇಗೆ ನಿರೀಕ್ಷೆ ಮಾಡೋದು ಅಂತ ಹೇಳಿದ್ದಾರೆ.

ಇದನ್ನು ಓದಿ: ನಾನು ಉಫ್ ಅಂತ ಊದಿದ್ದಕ್ಕೆ ಜಮೀರ್​ ಬೆಂಗಳೂರಿಗೆ ವಿಮಾನ ಹತ್ತಿದ್ದು; ಸೋಮಶೇಖರ ರೆಡ್ಡಿ ವ್ಯಂಗ್ಯ

ಇದೇ ವಿಚಾರವಾಗಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದ ಯುದುವೀರ್ ನಮ್ಮ ಮುಂದಿನ ಪಿಳಿಗೆಗೆ  ಪಾರಂಪರಿಕತೆಯನ್ನ ಚಿತ್ರದಲ್ಲಿ ತೋರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಪಾರಂಪರಿಕ ಕಟ್ಟಡಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ್ದು ಪಾಲಿಕೆ ಕೆಲಸ. ಆದರೆ ಇದೀಗಾ ಪಾಲಿಕೆ ನಿರ್ಧಾರ ನೆಲಸಮದ ವಿಚಾರ ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ. ಈ ನಡುವೆ ರಾಜಮನೆತನವು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿರೋದು ಒಂದು ಹಂತಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ