ಚಿಂಚೋಳಿ ಬಳಿ ಹಳ್ಳದಲ್ಲಿ ಕೊಚ್ಚಿ ಹೋದ ತಹಶೀಲ್ದಾರ್ ಕಾರು; ಮರವೇರಿ ಕುಳಿತ ಅಧಿಕಾರಿಯ ರಕ್ಷಣೆ

ಕೆಲ ತಿಂಗಳ ಹಿಂದೆಯಷ್ಟೇ ಚಿಂಚೋಳಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದ ಬಿರಾದಾರ, ಯಾದಗಿರಿ ತಹಶೀಲ್ದಾರರಾಗಿ ವರ್ಗವಾಗಿದ್ದರು. ನಿತ್ಯ ಬೀದರ್ ನಿಂದ ಯಾದಗಿರಿಗೆ ಕಾರಿನ ಮೂಲಕ ಹೋಗಿ ಬರುತ್ತಿದ್ದರೆನ್ನಲಾಗಿದೆ.

ಆಸ್ಪತ್ರೆಯಲ್ಲಿರುವ ತಹಶೀಲ್ದಾರ್​

ಆಸ್ಪತ್ರೆಯಲ್ಲಿರುವ ತಹಶೀಲ್ದಾರ್​

  • Share this:
ಕಲಬುರ್ಗಿ (ಸೆ.17): ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಧಾರಾಕಾರ ಮಳೆಗೆ ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿದ್ದು, ಹಳ್ಳದ ಪ್ರವಾಹಕ್ಕೆ ತಹಶೀಲ್ದಾರರ ಕಾರು ಕೊಚ್ಚಿ ಹೋದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಚಿಂಚೋಳಿ ತಾಲೂಕಿನ ಗಣಾಪುರ ಬಳಿ ಹಳ್ಳದಲ್ಲಿ ಕಾರು ಕೊಚ್ಚಿ ಹೋದ ಘಟನೆ ಸಂಭವಿಸಿದೆ. ಕಾರು ತಗ್ಗಿಗೆ ಬಿದ್ದು ನೀರಿನಲ್ಲಿ ಹರಿದು ಹೋಗಲು ಆರಂಭಿಸುತ್ತಿದ್ದಂತೆಯೇ ಎಚ್ಚೆತ್ತ ತಹಶೀಲ್ದಾರ್ ಕಾರಿನಿಂದ ಇಳಿದು ಮರ ಏರಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ನಂತರ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ತಹಶೀಲ್ದಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ರಕ್ಷಿಸಲಾದ ತಹಶೀಲ್ದಾರರನ್ನು ಪಂಡಿತ ಬಿರಾದಾರ ಎಂದು ಗುರುತಿಸಲಾಗಿದೆ. ಪಂಡಿತ ಬಿರಾದಾರ ಯಾದಗಿರಿಯಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸ್ವಂತ ಊರು ಬೀದರ್ ಗೆ ತಮ್ಮ ಸ್ವಂತ ಕಾರಿನಲ್ಲಿ ಹೋಗುವ ವೇಳೆ ಘಟನೆ ಸಂಭವಿಸಿದೆ. ಮಿರಿಯಾಣ ಸಮೀಪದ ಗಣಾಪುರದ ಹಳ್ಳದಲ್ಲಿ ನೀರು ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದವು. ಸಣ್ಣ ಪ್ರಮಾಣದಲ್ಲಿ ನೀರಿದೆ ಎಂದು ಕಾರಿನಲ್ಲಿ ಮುಂದೆ ಸಾಗಿ ಸೇತುವೆ ದಾಟಿದ ನಂತರ ಕಾರು ದಿಢೀರಾಗಿ ತಗ್ಗಿಗೆ ಬಿದ್ದಿದೆ. ನಿಧಾನಕ್ಕೆ ಕಾರು ನೀರಿನಲ್ಲಿ ಕೊಚ್ಚಿ ಹೋಗಲು ಆರಂಭಿಸಿದೆ. ತಕ್ಷಣ ಕಾರಿನಿಂದ ಜಂಪ್ ಮಾಡಿದ ತಹಶೀಲ್ದಾರ ಬಿರಾದಾರ, ಮರವೇರಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅಗ್ನಿಶಾಮಕ ದಳ ಸಿಬ್ಬಂದಿ, ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದೆ. ಚಿಂಚೋಳಿ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ, ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ ಮತ್ತಿತರ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮರವೇರಿ ಕುಳಿತ ಅಧಿಕಾರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಬಿರಾದಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ್​ ಬಿರಾದಾರರನ್ನು ಚಿಂಚೋಳಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ ಮತ್ತು ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಸೇಡಂ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ತಹಶೀಲ್ದಾರ ಬಿರಾದಾರ ಆರೋಗ್ಯ ವಿಚಾರಿಸಿದ್ದಾರೆ.

Narendra Modi Birthday: ಪ್ರಧಾನಿ ನರೇಂದ್ರ ಮೋದಿಗೆ 70ನೇ ಹುಟ್ಟುಹಬ್ಬ; ಶುಭಾಶಯ ಕೋರಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಕೆಲ ತಿಂಗಳ ಹಿಂದೆಯಷ್ಟೇ ಚಿಂಚೋಳಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದ ಬಿರಾದಾರ, ಯಾದಗಿರಿ ತಹಶೀಲ್ದಾರರಾಗಿ ವರ್ಗವಾಗಿದ್ದರು. ನಿತ್ಯ ಬೀದರ್ ನಿಂದ ಯಾದಗಿರಿಗೆ ಕಾರಿನ ಮೂಲಕ ಹೋಗಿ ಬರುತ್ತಿದ್ದರೆನ್ನಲಾಗಿದೆ. ಹಳ್ಳ ಉಕ್ಕಿ ಹರಿಯುತ್ತಿದ್ದರಿಂದಾಗಿ ಹೋಗದಿರುವಂತೆ ಸ್ಥಳೀಯರು ಎಚ್ಚರಿಕೆ ನೀಡಿದ್ದರೂ, ಅವರ ಮಾತು ಕೇಳದೆ ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮಾತು ಕೇಳದೆ ಹೋಗಿ ಅಧಿಕಾರಿ ತಮ್ಮನ್ನು ಅಪಾಯಕ್ಕೊಡ್ಡಿಕೊಂಡಿದ್ದಾರೆ ಎನ್ನಲಾಗಿದೆ. ಕೊನೆಗೂ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ.

ವರುಣನ ಅಬ್ಬರಕ್ಕೆ ಜನತೆ ತತ್ತರ

ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ರಾತ್ರಿಯೂ ಕಲಬುರ್ಗಿ ನಗರ ಸೇರಿ ಜಿಲ್ಲೆಯ ಹಲವೆಡೆ ವರ್ಷಧಾರೆಯಾಗಿದೆ. ಕಲಬುರ್ಗಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದು, ನದಿ-ಹಳ್ಳಗಳು ತುಂಬಿ ಹರಿಯುತ್ತಿವೆ. ಕಾಗಿಣಾ ನದಿ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಕಾಗಿಣಾ ನದಿ ಉಕ್ಕಿ ಹರಿಯುತ್ತಿರುವುದರಿಂದಾಗಿ ಮಳಖೇಡ ಉತ್ತರಾಧಿ ಮಠದೊಳಗೆ ನೀರು ನುಗ್ಗಿವೆ. ಉತ್ತರಾದಿ ಮಠದ ವೃಂದಾವನ ಜಲಾವೃತಗೊಂಡಿದ್ದು, ನೀರಿನಲ್ಲಿ ಇಳಿದೇ ಪೂಜೆ ಸಲ್ಲಿಸಲಾಗುತ್ತಿದೆ.

ಮತ್ತೊಂದೆಡೆ ಚಿಂಚೋಳಿ ತಾಲೂಕಿನ ಹಲವೆಡೆ ಮಳೆ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. ಹಲವು ಸೇತುವೆಗಳು ಜಲಾವೃತಗೊಂಡು, ರಸ್ತೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತಾಗಿದೆ. ಚಿಂಚೋಳಿ ತಾಲೂಕಿನ ನಾಗ ಇದಲಾಯಿ ಗ್ರಾಮ ಸೇರಿದಂತೆ ಮೂರ್ನಾಲ್ಕು ಗ್ರಾಮಗಳು ಭಾಗಶಃ ಮುಳುಗಡೆಯಾಗಿವೆ. ಚಿತ್ತಾಪುರ ತಾಲೂಕಿನಲ್ಲಿಯೂ ಕಾಗಿಣಾ ನದಿ ಉಕ್ಕಿ ಹರಿದು ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಸಾವಿರಾರು ಹೆಕ್ಟರ್ ಜಮೀನು ಜಲಾವೃತದಿಂದ ಬೆಳೆ ನಾಶವಾಗುವ ಭೀತಿ ಎದುರಾಗಿದೆ.
Published by:Latha CG
First published: