ಪ್ರವಾಸಿಗರ ಬದಲು ಹಸುಗಳ ಎಂಟ್ರಿ; ಗಬ್ಬೆದ್ದು ನಾರುತ್ತಿದೆ ಯಾದಗಿರಿಯ ಲುಂಬಿನಿ ಪಾರ್ಕ್

ಯಾದಗಿರಿ ನಗರದ ಜಿಲ್ಲಾಸ್ಪತ್ರೆ ಸಮೀಪ ಇರುವ ಲುಂಬಿನಿ ಉದ್ಯಾನವನ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಬದಲು ದನಕರುಗಳ ಬರುವ ಸಂಖ್ಯೆ ಹೆಚ್ಚಾಗಿದೆ.

ಯಾದಗಿರಿಯ ಪಾರ್ಕ್

ಯಾದಗಿರಿಯ ಪಾರ್ಕ್

  • Share this:
ಯಾದಗಿರಿ: ಯಾದಗಿರಿ ಜಿಲ್ಲೆಯ ಜನರು ಹಾಗೂ ಪ್ರವಾಸಿಗರಿಗೆ ರಿಲ್ಯಾಕ್ಸ್ ಆಗಲು ಸರಕಾರ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಉದ್ಯಾನವನ ನಿರ್ಮಾಣ ಮಾಡಿದೆ. ಆದರೆ, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಉದ್ಯಾನವನ ಈಗ ಗಬ್ಬೆದ್ದು ನಾರುತ್ತಿದೆ. ಅದೇ ರೀತಿ ಪ್ರವಾಸಿಗರ ತಾಣವಾಗುವ ಬದಲು ಈಗ ಜಾನುವಾರುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಯಾದಗಿರಿ ನಗರದ ಜಿಲ್ಲಾಸ್ಪತ್ರೆ ಸಮೀಪ ಇರುವ ಲುಂಬಿನಿ ಉದ್ಯಾನವನ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಬದಲು ದನಕರುಗಳ ಬರುವ ಸಂಖ್ಯೆ ಹೆಚ್ಚಾಗಿದೆ. ಆದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ನಿಷ್ಕಾಳಜಿ ತೋರುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಮಳೆ ಬಂದ‌ ಹಿನ್ನೆಲೆಯಲ್ಲಿ ಲುಂಬಿನಿ ಉದ್ಯಾನವನದ ಕೆರೆಯು ಮೊದಲನೇ ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಕೆರೆಯ ನೀರು ಕೂಡ ಉದ್ಯಾನವನದೊಳಗೆ ನುಗ್ಗಿ ಹಾಳಾಗಿತ್ತು. ಈಗ ಮೂರು ತಿಂಗಳಾದರೂ ಕೆರೆಯ ಹೆಚ್ಚುವರಿ ನೀರನ್ನು ಹೊರಗಡೆ ಬಿಡುಗಡೆ ಮಾಡುವ ಕೆಲಸ ಮಾಡಿಲ್ಲ. ನಿಜಾಂ ಕಾಲಾವಧಿಯಲ್ಲಿ ಅಳವಡಿಸಿದ ಗೇಟ್ ಇರುವುದರಿಂದ ಗೇಟ್ ಗಳು ತುಕ್ಕು ಹಿಡಿದು ಹಾಳಾಗಿದ್ದು ಗೇಟ್ ಗಳನ್ನು ತೆಗೆದು ನೀರು ಹೊರಗಡೆ ಬಿಡಲು ಸಾಧ್ಯವಾಗಿಲ್ಲ. ಇದರಿಂದ ಹೆಚ್ಚುವರಿ ‌ನೀರು ಉದ್ಯಾನವನದ ಕೆರೆಯೊಳಗಡೆ ಸಂಗ್ರಹಗೊಂಡಿದೆ.

ಉದ್ಯಾನವನದಲ್ಲಿರುವ ಪಾದಚಾರಿ ಮಾರ್ಗದ ರಸ್ತೆ ಒಡೆದು ಮೂರು ತಿಂಗಳಾದರೂ ದುರಸ್ಥಿ ಮಾಡಿಲ್ಲ‌. ಇದರಿಂದ ವಾಯು ವಿಹಾರ ಮಾಡಲು ಸಮಸ್ಯೆಯಾಗುತ್ತಿದೆ. ಅದೇ ರೀತಿ ಪ್ರವಾಸಿಗರು ನಡುಗಡ್ಡೆಯ ಪ್ರದೇಶಕ್ಕೆ ಹೋಗಿ ಮನ ತಣಿಸಿಕೊಳ್ಳುತ್ತಿದ್ದರು. ಆದರೆ,  ನಡುಗಡ್ಡೆ ಸಂಪರ್ಕ ಕಡಿತಗೊಂಡಿದೆ. ನೀರು ನುಗ್ಗಿದ ಹಿನ್ನೆಲೆಯಲ್ಲಿ ನಡುಗಡ್ಡೆಯ ಪಾದಚಾರಿ ಮಾರ್ಗವು ಜಲಾವೃತವಾಗಿದೆ.

ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸೋಮಶೇಖರ ಮಸ್ಕನಳ್ಳಿ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನವನಕ್ಕೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಮೀನು ಕೂಡ ಸತ್ತು ಹೋಗಿ ಗಾರ್ಡ್ ನ ಗಬ್ಬೆದ್ದು ನಾರುತ್ತಿದೆ. ಅಧಿಕಾರಿಗಳು ಉದ್ಯಾನವನ ಸರಿಯಾಗಿ ನಿರ್ವಹಣೆ ಮಾಡಿ ಅಭಿವೃದ್ಧಿ ಮಾಡಬೇಕಿದೆ ಎಂದಿದ್ದಾರೆ.

ಗಬ್ಬೆದ್ದು ನಾರುತ್ತಿದೆ ಉದ್ಯಾನವನ!:

ಪ್ರವಾಸಿಗರು ತಮ್ಮ ಕುಟುಂಬ ಸಮೇತ ಮನ ತಣಿಸಿಕೊಳ್ಳಲು ಉದ್ಯಾನವನಕ್ಕೆ ಬಂದರೆ ಕೆಟ್ಟ ವಾಸನೆಯಿಂದ ಕಂಗಾಲಾಗಿ ಬೇಗ ವಾಪಾಸ್ ಮನೆಗೆ ತೆರಳುತ್ತಿದ್ದಾರೆ. ಮೀನುಗಳು ಮೃತ ಪಟ್ಟ ಹಿನ್ನೆಲೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ. ದನಕರುಗಳು ಕೂಡ ಉದ್ಯಾನವನದಲ್ಲಿರುವ ಮೇವು ತಿನ್ನಲು ಬರುತ್ತಿವೆ. ದನಗಳು ಬಂದರೂ ಸಿಬ್ಬಂದಿಗಳು ಓಡಿಸುವ ಕೆಲಸ ಮಾಡದೆ ಮೌನ ವಹಿಸಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಾತನಾಡಿ, ಉದ್ಯಾನವನ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಮಳೆ  ಬಂದ ಹಿನ್ನಲೆ ಕೆರೆಗೆ ನೀರು ನುಗ್ಗಿ ಹಾಳಾಗಿದೆ. ಉದ್ಯಾನವನವನ್ನು ಅಭಿವೃದ್ಧಿ ಪಡಿಸಲು ಮತ್ತೆ 50 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ‌. ಅನುದಾನ ಬಿಡುಗಡೆಯಾದ ನಂತರ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
Published by:Sushma Chakre
First published: