ಯಾದಗಿರಿ (ನ. 16): ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಆದರೆ, ಭೀಮಾನದಿ ಪ್ರವಾಹ ಪೀಡಿತ ಶಿವನೂರ ಗ್ರಾಮದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸಂತ್ರಸ್ತರು ಇನ್ನೂ ನರಕಯಾತನೆ ಜೀವನ ನಡೆಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವನೂರ ಗ್ರಾಮದಲ್ಲಿ ಕೂಡ ಭೀಮಾ ನದಿ ನೀರು ನುಗ್ಗಿತ್ತು. ಆದರೆ, ಮನೆಗಳಿಗೆ ನೀರು ನುಗ್ಗಿದ ಕೆಲ ಸಂತ್ರಸ್ತರಿಗೆ ಇನ್ನೂ ಸರಕಾರ 10 ಸಾವಿರ ರೂ ಪರಿಹಾರದ ಹಣ ನೀಡಿಲ್ಲ. ಇದರಿಂದ ಸಂತ್ರಸ್ತರಿಗೆ ಹಬ್ಬ ಕಗ್ಗತ್ತಲಾಗಿದೆ. ಈ ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಸರಕಾರ ಇನ್ನೂ ಪರಿಹಾರ ಹಣ ನೀಡಿಲ್ಲ. ಇದರ ಪರಿಣಾಮ ಕುಸಿದು ಬಿದ್ದ ಮನೆಯಲ್ಲಿಯೇ ಸಂತ್ರಸ್ತರು ನರಕಯಾತನೆ ಜೀವನ ನಡೆಸುತ್ತಿದ್ದಾರೆ. ಯಾವಾಗ ಮನೆ ಮೈಮೇಲೆ ಬೀಳುತ್ತೋ ಎಂದು ಆತಂಕದಲ್ಲಿಯೇ ಅನಿವಾರ್ಯವಾಗಿ ವಾಸ ಮಾಡುತ್ತಿದ್ದಾರೆ.
ಈ ಗ್ರಾಮದ ಜನರು ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕಾರ ಮಾಡಿ, ನೂತನ ಬಟ್ಟೆ ಖರೀದಿ ಮಾಡಿ, ಪಟಾಕಿ ಹಚ್ಚಿ, ಸಂಭ್ರಮ ಪಡಬೇಕು. ಆದರೆ, ಕೈಯಲ್ಲಿ ಹಣವಿಲ್ಲದ ಕಾರಣ ಮನೆಗಳಿಗೆ ಸುಣ್ಣ-ಬಣ್ಣ ಮಾಡಿಲ್ಲ. ಮಕ್ಕಳಿಗೆ ಪೋಷಕರು ನೂತನ ಬಟ್ಟೆ ಖರೀದಿ ಮಾಡಿಲ್ಲ.ಅದೇ ರೀತಿ ಪಟಾಕಿ ಕೂಡ ಖರೀದಿ ಮಾಡಲು ಹಣವಿಲ್ಲದೇ ಸರಳವಾಗಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೊಸ ಬಟ್ಟೆ, ಸಿಹಿ ತಿಂಡಿಗೆ ರಂಪಾಟ; ಜೈಲಿನಲ್ಲೇ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ದೀಪಾವಳಿ ಆಚರಣೆ
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ತಾಯಮ್ಮ ಮಾತನಾಡಿ, ನಾವು ಬಹಳಷ್ಟದಲ್ಲಿ ಬದುಕು ಸಾಗಿಸುತ್ತಿದ್ಧಿವಿ ಯಾವುದೇ ಹಬ್ಬ ಮಾಡದಂತಾಗಿದೆ. ಸರಕಾರ ಮನೆ ಬಿದ್ದವರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವು ಮಕ್ಕಳನ್ನು ಕಟ್ಟಿಕೊಂಡು ಬಿದ್ದ ಮನೆಯಲ್ಲಿಯೇ ಇರಬೇಕಾಗುತ್ತದೆ. ಸಿಎಂ ಸಾಹೇಬರೇ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ನೋವು ತೊಡಿಕೊಂಡರು.
ನಮಗೆ ಊಟಕ್ಕೆ ಏನು ಇಲ್ಲ!:
ಮನೆಯಲ್ಲಿ ಅಕ್ಕಿ, ಜೋಳ, ಗೋಧಿ ಎಲ್ಲವೂ ಖಾಲಿಯಾಗಿದೆ. ನಾವು ಹೇಗೆ ಊಟ ಮಾಡಬೇಕು? ಎಂದು ಸಂತ್ರಸ್ತರು ಅಳಲುತೊಡಿಕೊಂಡಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ,ನಮಗೆ ಹಸಿವು ನೀಗಿಸುವ ಕಾರ್ಯ ಮಾಡಿಲ್ಲ ಎಂದು ಶಾಂತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ