ದಾವಣಗೆರೆ: ನಾಡಿನ ಹಿರಿಯ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ತಲೆಸುತ್ತು ಬಂದು ಕುಸಿದು ಬಿದ್ದ ಘಟನೆ ನಡೆದಿದೆ. ಬಂಡಾಯ ಸಾಹಿತ್ಯ (Bandaya Sahithya) ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದದ್ದರು. ಕಾರ್ಯಕ್ರಮ ಮುಗಿಸಿ ಕಾರನ್ನು ಹತ್ತಲು ತೆರಳಿದ ವೇಳೆ ತಲೆ ಚಕ್ರ ಬಂದು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ವಾಹನ ಚಾಲಕ ರಾಮಚಂದ್ರಪ್ಪ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ಭಯಪಡುವ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಡಾಯ ಸಾಹಿತ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಿ ವಾಪಾಸಾಗುವ ವೇಳೆ ಈ ಘಟನೆ ನಡೆದಿದ್ದು, ಅವರನ್ನು ಹರಿಹರದ ಅಕ್ಷಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಬಂಡಾಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬರಗೂರು ಅವರು ಭಾಷಣವನ್ನೂ ಮಾಡಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ವಾಪಸಾಗುವ ವೇಳೆ ಸುಸ್ತಾಗಿ ಕುಸಿದು ಕುಳಿತಿದ್ದರು ಎನ್ನಲಾಗಿದೆ.
ಬೆಂಗಳೂರಿಗೆ ವಾಪಸ್ ಆಗಲಿರುವ ಬರಗೂರು
ನನಗೆ ಮೊದಲಿಂದಲೂ ಬಿಪಿ ಶುಗರ್ ಏನೂ ಇಲ್ಲ. ಆದರೂ ವೈದ್ಯರು ಎಲ್ಲಾ ಪರೀಕ್ಷೆಗಳನ್ನು ಮಾಡಿದ್ದಾರೆ. ಪ್ರಯಾಣದ ಆಯಾಸದಿಂದ ಹೀಗಾಗಿದೆ. ನನಗೆ ಏನು ಸಮಸ್ಯೆ ಇಲ್ಲ, ನಾನು ಆರಾಮವಾಗಿ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ. ನಾನು ಈಗ ಬೆಂಗಳೂರಿಗೆ ಹೊರಡುತ್ತೇನೆ ಎಂದು ಚಿಕಿತ್ಸೆಪಡೆದ ನಂತರ ಬರಗೂರು ರಾಮಚಂದ್ರ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ರಾಮಚಂದ್ರಪ್ಪ
ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಹರಿಹರ ತಾಲ್ಲೂಕು ಘಟಕದಿಂದ ನಗರದ ಗುರುಭವನದಲ್ಲಿ " ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂವೇದನೆಯ ಬಹುರೂಪಗಳು" ಕುರಿತು ವಿಚಾರಸಂಕಿರಣ ಮತ್ತು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದ್ದರು. ಪತ್ರಕರ್ತ ಬಿ.ಎನ್.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ಥಿತ್ಯಂತರಗಳು ಕುರಿತು ಲೇಖಕಿ ತಾರಿಣಿ ಶುಭ ದಾಯಿನಿ, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆಯ ಸ್ವರೂಪ ವಿಷಯದ ಬಗ್ಗೆ ದಾದಾಪೀರ್ ನವಿಲೇಹಾಳ್, ದಲಿತ ಬಂಡಾಯ ಸಂವೇದನೆ ಮತ್ತು ಚಳವಳಿಯ ಕುರಿತು ರಾಜಪ್ಪ ದಳವಾಯಿ ಮಾತನಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ