ಗೋ ಹತ್ಯೆ ನಿಷೇಧ ಕಾಯ್ದೆಗೆ ತಡೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ; ಪ್ರಮಾಣಪತ್ರ ಸಲ್ಲಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಹೊರಡಿಸಿದ್ದ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಹ ಈ ಹಿಂದೆ ದಾಖಲಿಸಿದ್ದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು ಜೂನ್ 09): ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020" ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆ. ಈ ಕಾಯ್ದೆಯ ಮೂಲಕ ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು ಎಂಬುದು ಬಿಜೆಪಿ ಸರ್ಕಾರದ ನಿಲುವು. ಇದೇ ಕಾರಣಕ್ಕೆ ವಿರೋಧ ಪಕ್ಷಗಳ ತೀವ್ರ ವಿರೋಧಗಳ ನಡುವೆಯೂ ಈ ಕಾಯ್ದೆಯನ್ನು ಕಳೆದ ವರ್ಷ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ, ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್​ನಲ್ಲಿ ಬಹುಮತ ಇಲ್ಲ. ಇದೇ ಕಾರಣಕ್ಕೆ ಪರಿಷತ್​ನಲ್ಲಿ ಈ ಕಾಯ್ದೆ ಸಂಬಂಧ ಉಂಟಾದ ದೊಡ್ಡ ಮಟ್ಟದ ಗಲಾಟೆ ಮತ್ತು ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್​ ಪಕ್ಷದ ಉಪ ಸಭಾಪತಿ ಎಸ್​.ಎಲ್​. ಧರ್ಮೇಗೌಡ ಆತ್ಮಹತ್ಯೆಗೆ ಶರಣಾದದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಸಾಕ್ಷಿಯಾದ "ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020" ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿತ್ತು. ಆದರೆ, ಈ ಕಾಯ್ದೆಯನ್ನು ವಿರೋಧಿಸಿ ಕೆಲವರು ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದು, ಇದೀಗ ಅರ್ಜಿಯ ವಿಚಾರಣೆ ಆರಂಭವಾಗಿದೆ. ಅಲ್ಲದೆ, ಈ ಸಂಬಂಧ ಪ್ರಮಾಣ ಪತ್ರವನ್ನೂ ಸರ್ಕಾರ ಕೋರ್ಟ್​ಗೆ ಇಂದು ಸಲ್ಲಿಸಿದೆ ಎನ್ನಲಾಗಿದೆ.

  ರಾಜ್ಯ ಸರ್ಕಾರ ಹೊರಡಿಸಿದ್ದ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಹ ಈ ಹಿಂದೆ ದಾಖಲಿಸಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿ ಕರ್ನಾಟಕ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸಚಿನ್ ಶಂಕರ್ ಮಗುದಂ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

  ಇದನ್ನೂ ಓದಿ: ಜೂನ್.14ರ ನಂತರ ಕರ್ನಾಟಕದಲ್ಲಿ 4 ರಿಂದ 5 ಹಂತದಲ್ಲಿ ಅನ್​ಲಾಕ್ ಪ್ರಕ್ರಿಯೆ ಆರಂಭ: ಸಚಿವ ಆರ್​. ಅಶೋಕ್ ಮಾಹಿತಿ!

  ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ 19 (ಜಿ) ವಿಧಿ ಖಾತರಿಪಡಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹಾಗೆಯೇ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿವೆ. ಹಾಗೆಯೇ ಈ ಸುಗ್ರೀವಾಜ್ಞೆಯು ವ್ಯಾಪಾರ ಮತ್ತು ವ್ಯವಹಾರದ ಹಕ್ಕನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರ ಮೊಹಮ್ಮದ್ ಆರಿಫ್ ತಮ್ಮ ಹೈಕೋರ್ಟ್​ಗೆ ತಿಳಿಸಿದ್ದರು.

  ದೇಶದಲ್ಲಿ ಪ್ರಾಣಿಗಳನ್ನು ವಧಿಸುವುದನ್ನು ನಿಷೇಧಿಸುವುದರಿಂದ ಮಾಂಸ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗೆಯೇ ಈ ಕಾನೂನಿನಿಂದ ಅವರ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರೊಂದಿಗೆ ನಾಗರಿಕರು ತಮ್ಮ ಆಹಾರದ ಆಯ್ಕೆಯನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಕಾನೂನನನ್ನು ಪುನರ್ಪರಿಶೀಲಿಸಬೇಕೆಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್ ನೀಡಿತ್ತು. ಅಲ್ಲದೆ, ಈ ಸಂಬಂಧ ವಿಸ್ಕೃತ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚನೆ ನೀಡಿತ್ತು.

  ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ; ಟ್ವೀಟ್​ ಮೂಲಕ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಘಟಕ

  ಹೀಗಾಗಿ ಇಂದು ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ರಿಟ್ ಅರ್ಜಿಗೆ ಉತ್ತರ ನೀಡಿರುವ ರಾಜ್ಯ ಸರ್ಕಾರ, "ರಾಜ್ಯದಲ್ಲಿ ಗೋವುಗಳ ಸಂರಕ್ಷಣೆ ಅಗತ್ಯವಿದೆ. ಕೃಷಿ ಕಾರ್ಯಕ್ಕೆ ಗೋವುಗಳು ಅಗತ್ಯ. ರಾಜ್ಯದ ಒಟ್ಟಾರೆ ಆದಾಯದಲ್ಲಿ 52,688 ಕೋಟಿ ಕೃಷಿಯಲ್ಲಿ ಗೋವುಗಳ ಬಳಕೆಯಿಂದಲೇ ಬರುತ್ತಿದೆ. ಒಟ್ಟಾರೆ ಕೃಷಿ ಆದಾಯ 1,28,000 ಕೋಟಿ ಆಗಿದೆ. ಶೇ. 80 ರಷ್ಟು ರೈತರ ಬಳಿ 2 ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಇದೆ. ಈ ರೈತರು ಕೃಷಿ ಚಟುವಟಿಕೆಗಳಿಗೆ ಗೋವುಗಳನ್ನೇ ಹೆಚ್ಚಾಗಿ ಅವಲಂಬಿಸಬೇಕು.

  ಈ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆ ಅತ್ಯಗತ್ಯವಾಗಿತ್ತು. ಹೀಗಾಗಿ, ಸರ್ಕಾರ "ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020" ಕಾಯ್ದೆಯನ್ನು ಜಾರಿಗೆ ತಂದಿದೆ" ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಬಗ್ಗೆ ರಾಜ್ಯ ಸರ್ಕಾರ ಮಾಧ್ಯಮ ಪ್ರಕಟಣೆಯನ್ನೂ ಹೊರಡಿಸಿದೆ.
  Published by:MAshok Kumar
  First published: