ಹುಬ್ಬಳ್ಳಿ- ಧಾರವಾಡದ ಜನರಿಗೆ ನಿತ್ಯ ಧೂಳಿನ ಅಭಿಷೇಕ; ರಸ್ತೆ ದುರಸ್ತಿಗೆ ಮುಂದಾಗದ ಜನಪ್ರತಿನಿಧಿಗಳು

ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ನಿಲಿಜನ್‌ ರಸ್ತೆ, ಕೊಪ್ಪಿಕರ್‌ ರಸ್ತೆ, ದುರ್ಗದಬೈಲ್‌, ಬ್ರಾಡ್‌ವೇ, ರೈಲ್ವೇ ಸ್ಟೇಷನ್‌ ರೋಡ್‌, ಮರಾಠಾ ಗಲ್ಲಿ, ಮೇದಾರ ಗಲ್ಲಿ  ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ

G Hareeshkumar | news18-kannada
Updated:October 17, 2019, 7:36 AM IST
ಹುಬ್ಬಳ್ಳಿ- ಧಾರವಾಡದ ಜನರಿಗೆ ನಿತ್ಯ ಧೂಳಿನ ಅಭಿಷೇಕ; ರಸ್ತೆ ದುರಸ್ತಿಗೆ ಮುಂದಾಗದ ಜನಪ್ರತಿನಿಧಿಗಳು
ಆಟೋ ಚಾಲಕರ ಪ್ರತಿಭಟನೆ
  • Share this:
ಹುಬ್ಬಳ್ಳಿ(ಅ.16) : ಧಾರವಾಡ ಅವಳಿ ನಗರದ ರಸ್ತೆಗಳು ಅಕ್ಷರಶಃ ಮೃತ್ಯುಕೂಪಗಳಾಗಿವೆ. ಗುಂಡಿತುಂಬಿದ ರಸ್ತೆಗಳು ವಾಹನ ಸವಾರರನ್ನು ಕಂಗೆಡಿಸಿವೆ. ದಟ್ಟಣೆಯ ಧೂಳು ಸಾರ್ವಜನಿಕರ ಅರೋಗ್ಯಕ್ಕೆ ಕುತ್ತು ತರುತ್ತಿದೆ. 

ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ, ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತ ಕರೆಸಿಕೊಳ್ಳುವ ಹುಬ್ಬಳ್ಳಿಯ ರಸ್ತೆಗಳ ಚಿತ್ರಣವಿದು. ನಗರದ ಯಾವ ರಸ್ತೆಗೆ ಹೋದ್ರು ಗುಂಡಿಗಳೇ ತುಂಬಿಕೊಂಡಿವೆ. ತಗ್ಗು ಗುಂಡಿಗಳ ಮಧ್ಯೆ ಜೀವ ಕೈಯಲ್ಲಿ ಹಿಡಿದು ಬೈಕ್‌ಗಳನ್ನು ಓಡಿಸಬೇಕು. ಆಯತಪ್ಪಿ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಇದೆ. ಮಳೆ ಬಂತೆಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರನ್ನು ಬಲಿಪಡೆಯಲು ಕಾಯ್ದು ಕುಳಿತುಕೊಳ್ಳುತ್ತವೆ.

ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಸಾರ್ವಜನಿಕರು ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಕೊಟ್ಟಿದ್ದಾರೆ. ಆಟೋ ಚಾಲಕರು, ವ್ಯಾಪಾರಸ್ಥರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆಗಳ ಮಧ್ಯದಲ್ಲಿಯೇ ಈ ರಸ್ತೆಗಳು ಅನಾಥವಾಗಿವೆ ಎಂದು ಬೋರ್ಡ್‌ಗಳನ್ನು ಅಳವಡಿಸಿದ್ದಾರೆ. ಇಷ್ಟಾದರೂ ಸಂಬಂಧಪಟ್ಟವರಿಗೆ ನಾಚಿಕೆಯಾಗಿಲ್ಲ. ಅವಳಿ ನಗರದ ಜನರು ಹೈರಾಣಾಗುವುದು ಮಾತ್ರ ತಪ್ಪಿಲ್ಲ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ನಿಲಿಜನ್‌ ರಸ್ತೆ, ಕೊಪ್ಪಿಕರ್‌ ರಸ್ತೆ, ದುರ್ಗದಬೈಲ್‌, ಬ್ರಾಡ್‌ವೇ, ರೈಲ್ವೇ ಸ್ಟೇಷನ್‌ ರೋಡ್‌, ಮರಾಠಾ ಗಲ್ಲಿ, ಮೇದಾರ ಗಲ್ಲಿ  ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಧೂಳುಮಯ ರಸ್ತೆಗಳು ವಾಹನ ಸಂಚಾರಕ್ಕೆ ದುಸ್ತರವಾಗಿವೆ. ಬೈಕ್‌ನಲ್ಲಿ ಹೊರಗೆ ಹೋಗಿ ಬರುವಷ್ಟರಲ್ಲಿ ಬಟ್ಟೆಗಳು ಹುದುಲು ಮೆತ್ತಿದಂತಾಗುತ್ತವೆ. ಧೂಳಿನಿಂದಾಗಿ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಸ್ತಮಾ, ಕೆಮ್ಮು- ಕಣ್ಣು ಉರಿಯಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ : ಸಾ.ರಾ.ಮಹೇಶ್​​ರಂತ ನಿಷ್ಠಾವಂತ ಶಾಸಕರು ಜೆಡಿಎಸ್ ಪಕ್ಷದಲ್ಲಿರಬೇಕು ; ಬಸವರಾಜ​​​​ ಹೊರಟ್ಟಿ

ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮನೆಗಳು ಹುಬ್ಬಳ್ಳಿಯಲ್ಲಿವೆ. ದಿನಬೆಳಗಾದರೆ ನೂರಾರು ಗಣ್ಯರಾಜಕಾರಣಿಗಳು ಹುಬ್ಬಳ್ಳಿಯ ಇದೇ ರಸ್ತೆಗಳಲ್ಲಿ ಓಡಾಡುತ್ತಾರೆ. ಆದರೆ ರಸ್ತೆ ದುರಸ್ತಿ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಂತಿಲ್ಲ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸದ್ಯಕ್ಕೆ ಆಡಳಿತ ಮಂಡಳಿಯಿಲ್ಲ. ಹೀಗಾಗಿ ಅಧಿಕಾರಿಗಳದ್ದೆ ದರ್ಬಾರ್‌ ನಡೆಯುತ್ತಿದೆ. ಇಷ್ಟುದಿನ ಮಳೆ ನಿಂತಮೇಲೆ ರಸ್ತೆದುರಸ್ತಿ ಮಾಡುತ್ತೇವೆ ಎನ್ನುತ್ತಿದ್ದರು. ಈಗ ಮಳೆ ಕಡಿಮೆಯಾದರೂ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪ್ರಶ್ನಿಸಿದರೆ ಪ್ರಸ್ತಾವನೆ ಕಳಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ಸಿಕ್ಕ ತಕ್ಷಣ ಕೆಲಸ ಆರಂಭಿಸುತ್ತೇವೆ. ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದೆ ಎನ್ನುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆದಷ್ಟು ಬೇಗ ರಸ್ತೆ ಗುಂಡಿಗಳು ಮತ್ತು ಧೂಳಿನಿಂದ ಮುಕ್ತಿ ಕೊಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ.ವರದಿ : ಪರಶುರಾಮ್​​​ ತಹಶೀಲ್ದಾರ್​​​

First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ