ಬೆಂಗಳೂರು(ನ. 14): ಸಂವಿಧಾನ ಇವತ್ತು ಗಟ್ಟಿಯಾಗಿ ಇರೋದಕ್ಕೆ ಜವಾಹರಲಾಲ್ ನೆಹರೂ ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ನೆಹರೂ ಜನ್ಮದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಪಂಚದ ಇತಿಹಾಸಕ್ಕೆ ನೆಹರೂ ಅವರ ಕೊಡುಗೆಯನ್ನು ಸ್ಮರಿಸಿದರು. ನೆಹರೂ ಅವರು ಇಲ್ಲದೇ ಪ್ರಪಂಚದ ಇತಿಹಾಸ ಪೂರ್ಣವಾಗಲ್ಲ. ಹೀಗಂತ ನೆಹರೂ ಹೇಳಿ ಬರೆಸಿದ್ದು ಅಲ್ಲ. ವಿದೇಶೀ ಬರಹಗಾರರು ಬರೆದಿದ್ದಾರೆ ಎಂದು ಹೇಳಿದ ಅವರು ಆರೆಸ್ಸೆಸ್ ಪರಿವಾರವನ್ನು ಕಟುವಾಗಿ ಟೀಕಿಸಿದರು.
ನೆಹರೂ ಜಾತ್ಯತೀತವಾದಿ ಆದ್ದರಿಂದ ಅವರನ್ನು ಬಿಜೆಪಿಯವರು ವಿರೋಧ ಮಾಡುತ್ತಾರೆ. ದೇಶಪ್ರೇಮಿ ಭಗತ್ ಸಿಂಗ್ ಅವರಿಗೂ ಬಿಜೆಪಿಗೂ ಸಂಬಂಧ ಇಲ್ಲ. ವಿವೇಕಾನಂದರಿಗೂ ಬಿಜೆಪಿಗೂ, ಆರೆಸ್ಸೆಸ್ಗೂ ಸಂಬಂಧ ಇಲ್ಲ. ಈಗ ಅವರೆಲ್ಲರ ಫೋಟೋ ಹಾಕಿಕೊಂಡು ಸಂಘ ಪರಿವಾರದವರು ರಾಜಕಾರಣ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕುಟುಕಿದರು.
ಸುಳ್ಳು ಹೇಳುವುದೇ ಆರೆಸ್ಸೆಸ್, ಬಿಜೆಪಿ ಕೆಲಸ. ಆರ್ ಎಸ್ ಎಸ್ ಒಂದು ಜಾತಿ ಸಂಘಟನೆ ಎಂಬುದು ತಿಳಿದಿರಲಿ. ಅದನ್ನು ಸಮರ್ಥವಾಗಿ ಎದುರಿಸಲು ಇತಿಹಾಸ ತಿಳಿದುಕೊಂಡು ಕೆಲಸ ಮಾಡಬೇಕು. ಆರೆಸ್ಸೆಸ್ನವರು ಹಿಂದು ಎಂದು ಹೇಳಲು ಬಂದರೆ, ನೀನೇ ಅಲ್ಲ ನಾವೂ ಹಿಂದೂಗಳೇ. ಕುಳಿತುಕೊಳ್ಳಿ ಸಾಕು ಅಂತ ಹೇಳಬೇಕು ಎಂದವರು ಕಿವಿಮಾತು ಹೇಳಿದರು.
ಇದನ್ನೂ ಓದಿ: ಹಸಿರು ಪಟಾಕಿಗೆ ಮುಗಿಬಿದ್ದ ಬೆಂಗಳೂರಿಗರು; ದುಬಾರಿಯಾದರೂ ಭರ್ಜರಿ ವ್ಯಾಪಾರ
ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರು ಕಾಂಗ್ರೆಸ್ನಲ್ಲಿ ಇದ್ದು ಹೋಗಿ ಆರೆಸ್ಸೆಸ್ ಕಟ್ಟಿದ್ದು. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿ ಹುಟ್ಟಿಕೊಂಡಿದ್ದು. ಹೆಡಗೇವಾರ್ ಅಂಥವರು ನಮ್ಮ ದೇಶದ ಪ್ರಧಾನಿ ಆಗಿದ್ದರೆ ದೇಶದಲ್ಲಿ ರಕ್ತ ಹರಿಯುತ್ತಿತ್ತು ಎಂದು ಅಭಿಪ್ರಾಯಪಟ್ಟ ಸಿದ್ದರಾಮಯ್ಯ, ಭಾರತ ಕಂಡ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ಮೋದಿ ಮಾತ್ರ ಎಂದು ವ್ಯಂಗ್ಯ ಮಾಡಿದರು.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನೆಹರೂ ಅವರ ಕಾರ್ಯಗಳನ್ನ ಸ್ಮರಿಸಿದರು. ಹೆಣ್ಣುಮಕ್ಕಳ ಶೋಷಣೆಯನ್ನು ತಪ್ಪಿಸಿದ್ದು ನೆಹರೂ. ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ತಂದವರು ಅವರು. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಇತಿಹಾಸ ಕಾಂಗ್ರೆಸ್ನ ಇತಿಹಾಸ ಎಂದು ಡಿಕೆಶಿ ಅಭಿಪ್ರಾಯಪಟ್ಟರು.
ನೆಹರೂ ಆದಿಯಾಗಿ ನಮ್ಮ ನಾಯಕರು ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ಈಗ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಯಾವ ಕ್ರಮ ಕೈಗೊಂಡಿದೆ. ಸಣ್ಣ ಕೈಗಾರಿಕೆಗಳನ್ನ ಸರ್ವನಾಶ ಮಾಡಿದ ಬಿಜೆಪಿಯವರು ಈಗ ಬಿಎಸ್ಸೆನ್ನೆಲ್ ಅನ್ನು ಮುಚ್ಚಿದ್ದಅರೆ. ರೈಲ್ವೇಸ್ ಅನ್ನೂ ಖಾಸಗಿಯವರಿಗೆ ಕೊಡುತ್ತಿದ್ದಾರೆ. ಇನ್ನೂ ಹಲವು ಕೈಗಾರಿಕೆಗಳನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಖಂಡಿಸಿದರು.
ಇದನ್ನೂ ಓದಿ: ರಾಜ್ಯಾದ್ಯಂತ ದೀಪಾವಳಿ ಸಂಭ್ರಮ; ಕೋವಿಡ್ ಭಯವಿಲ್ಲದೆ ಮಾರುಕಟ್ಟೆಗಳಲ್ಲಿ ಜನಜಂಗುಳಿ; ಹೂ ದುಬಾರಿ
ಇದಕ್ಕೂ ಮುನ್ನ ಮಾಜಿ ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೆಸ್ಸೆಸ್ ಸಂಘಟನೆಯನ್ನು ಬಲವಾಗಿ ತರಾಟೆಗೆ ತೆಗೆದುಕೊಂಡರು. “ಆರ್ ಎಸ್ ಎಸ್ನ ಗೋಳ್ವಾಲ್ಕರ್, ಆ ವೋಳ್ಕರ್, ಈ ವೋಳ್ಕರ್ ಅವರೆಲ್ಲಾ ಸೇರಿ ಬ್ರಿಟಿಷ್ ಪರ ಕೆಲಸ ಮಾಡಿದರು. ಉದ್ಯೋಗ ತೆಗೆದುಕೊಳ್ಳಿ, ಸ್ವಾತಂತ್ರ್ಯ ಹೋರಾಟ ಮಾಡಬೇಡಿ ಎಂದು ನಾಗಪುರ ಸೇರಿದಂತೆ ಹಲವು ಕಡೆ ಸಭೆ ನಡೆಸಿದರು. ಇಂಥವರು ಇಂದು ದೇಶಭಕ್ತಿ ಬಗ್ಗೆ ನಮಗೆ ಹೇಳುತ್ತಾರೆ” ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬಿ.ಕೆ. ಹರಿಪ್ರಸಾದ್, ಡಾ. ಎಲ್ ಹನುಮಂತಯ್ಯ, ಕೃಷ್ಣ ಭೈರೇಗೌಡ, ಹೆಚ್.ಎಂ. ರೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಚಿದಾನಂದ ಪಟೇಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ