ದಸರಾಗೆ ಇನ್ನು 2 ತಿಂಗಳಷ್ಟೇ ಬಾಕಿ; ಆದ್ರೂ ನಡೆದಿಲ್ಲ ಯಾವುದೇ ಸಿದ್ಧತೆ; ಕಾರಣವೇನು?

ಈ ಬಾರಿ ದಸರಾ ಉತ್ಸವವು ಅವಧಿಗಿಂತ ಮುಂಚೆಯೇ ಆಗಮಿಸಲಿದೆ. ಸೆಪ್ಟೆಂಬರ್ 29ರಂದು ನಾಡಹಬ್ಬ ದಸರಾ ಉದ್ಘಾಟನೆ ಆಗಲಿದೆ. ಅಕ್ಟೋಬರ್ 8ಕ್ಕೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

Latha CG | news18
Updated:August 1, 2019, 1:19 PM IST
ದಸರಾಗೆ ಇನ್ನು 2 ತಿಂಗಳಷ್ಟೇ ಬಾಕಿ; ಆದ್ರೂ ನಡೆದಿಲ್ಲ ಯಾವುದೇ ಸಿದ್ಧತೆ; ಕಾರಣವೇನು?
ಸಾಂದರ್ಭಿಕ ಚಿತ್ರ
  • News18
  • Last Updated: August 1, 2019, 1:19 PM IST
  • Share this:
ಮೈಸೂರು(ಆ. 01): ರಾಜ್ಯದಲ್ಲಿ ಜರುಗುತ್ತಿರುವ ರಾಜಕೀಯ ಬೆಳವಣಿಗೆಗಳು ಉಳಿದೆಲ್ಲಾ ಬೆಳವಣಿಗೆಗಳನ್ನು ಮರೆಮಾಚಿದಂತಿದೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಶುರುವಾದ ರಾಜಕೀಯ ಕೆಸರೆರಚಾಟ ಅಂತೂ ಮೈತ್ರಿ ಸರ್ಕಾರ ಪತನದಲ್ಲಿ ಅಂತ್ಯವಾದಂತೆ ಕಾಣುತ್ತಿದೆ. ಆದರೆ ಈ ರಾಜಕೀಯ ದೊಂಬರಾಟಗಳ ನಡುವೆ ಜನಪ್ರತಿನಿಧಿಗಳು ವಿಶ್ವವಿಖ್ಯಾತ ಮೈಸೂರು ದಸರಾವನ್ನೇ ಮರೆತುಬಿಟ್ಟಿದ್ದಾರೆ.

ಹೌದು, ನಾಡಹಬ್ಬ ದಸರಾ ಎಂದರೆ ಅದು ಪಾರಂಪರಿಕ, ಐತಿಹಾಸಿಕ, ವಿಶ್ವವಿಖ್ಯಾತ ಹಬ್ಬ. ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದೇ ಕರೆಯಲಾಗುವ ಮೈಸೂರಿನಲ್ಲಿ ಜಗದ್ವಿಖ್ಯಾತ ದಸರಾ ಸಂಭ್ರಮ ಮನೆ ಮಾಡಿರುತ್ತದೆ.  ದಸರಾ ಶುರುವಾಗುವ ಮುನ್ನವೇ ಸಿದ್ದತಾ ಕಾರ್ಯಗಳು ನಡೆಯುತ್ತವೆ. ಹಲವಾರು ಸಭೆಗಳನ್ನ ನಡೆಸಿ ಕಮಿಟಿಗಳನ್ನು ರಚನೆ ಮಾಡುತ್ತಾರೆ. ಆ ಮೂಲಕ ನಾಡಹಬ್ಬ ಶುರುವಾಗುವ ಹೊತ್ತಿಗೆ ದಸರಾ ಸಿದ್ದತಾ ಕಾರ್ಯಗಳು ಒಂದು ಹಂತಕ್ಕೆ ಮುಗಿದಿರುತ್ತವೆ.

ಆದರೆ ಈ ಬಾರಿ ಮಾತ್ರ ದಸರಾಗೆ ಸಂಬಂಧಿಸಿದ ಯಾವುದೇ ಸಭೆಗಳು ಇನ್ನೂ ಕೂಡ ನಡೆದಿಲ್ಲ. ಸಿಎಂ ಹಾಗೂ ಸಚಿವರು ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆ ​​ ನಡೆಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಈ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಸಬೇಕಿತ್ತು. ಪ್ರತಿ ವರ್ಷ ಮೇ ಅಥವಾ ಜೂನ್​ ತಿಂಗಳಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಬೇಕಿತ್ತು. ಆದರೆ ಮಾಜಿ ಸಿಎಂ ಎಚ್​ಡಿಕೆ ಆ ಸಭೆ ನಡೆಸಲಿಲ್ಲ ಎಂದು ತಿಳಿದು ಬಂದಿದೆ.

ಆಗಸ್ಟ್​ 8 ಅಥವಾ 10ಕ್ಕೆ ಸಚಿವ ಸಂಪುಟ ರಚನೆ; ಯಾರ್ಯಾರಿಗೆ ಯಾವ ಖಾತೆ?

ಏನಿದು ದಸರಾ ಉನ್ನತ ಮಟ್ಟದ ಸಮಿತಿ ಸಭೆ ?
ದಸರಾ ಪ್ರಾರಂಭವಾಗುವ ಮುನ್ನ ಮೊಟ್ಟ ಮೊದಲ ಬಾರಿಗೆ ನಡೆಸುವ ಸಭೆ ಇದಾಗಿದೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯಲ್ಲಿ ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸದಸ್ಯರಿರುತ್ತಾರೆ. ಈ  ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ದಸರಾ ಅಂದಾಜು ವೆಚ್ಚ ಹಾಗೂ ಅನುದಾನದ ಕುರಿತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಈ ಬಾರಿಯ ದಸರಾ ಉದ್ಘಾಟಕರು ಯಾರು? ಎಂಬ ನಿರ್ಧಾರವನ್ನು ಈ ಉನ್ನತ ಮಟ್ಟದ ಸಮಿತಿ ಸಭೆಯಲ್ಲೇ ಕೈಗೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಜುಲೈ ಮುಗಿದು ಆಗಸ್ಟ್​ ಬಂದರೂ ದಸರಾ ಉನ್ನತ ಮಟ್ಟದ ಸಮಿತಿ ಸಭೆಯನ್ನು ನಡೆಸಿಲ್ಲ.

ದಸರಾ ಯಾವಾಗ?ಈ ಬಾರಿ ದಸರಾ ಉತ್ಸವವು ಅವಧಿಗಿಂತ ಮುಂಚೆಯೇ ಆಗಮಿಸಲಿದೆ. ಸೆಪ್ಟೆಂಬರ್ 29ರಂದು ನಾಡಹಬ್ಬ ದಸರಾ ಉದ್ಘಾಟನೆ ಆಗಲಿದೆ. ಅಕ್ಟೋಬರ್ 8ಕ್ಕೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ದಸರಾ ಆಚರಣೆಗೆ ಬಾಕಿ ಇರುವುದು ಕೇವಲ 59 ದಿನಗಳಷ್ಟೇ. ದಸರೆ ಪ್ರಾರಂಭವಾಗುವ 50 ದಿನದ ಮುನ್ನವೇ ಮೈಸೂರಿಗೆ ಆನೆಗಳು ಬರಬೇಕಿದೆ.  ಆದರೆ ಮುಂಜಾಗ್ರತಾ ಕ್ರಮವಾಗಿ ಆಗಬೇಕಿದ್ದ ಯಾವ ಕೆಲಸವೂ ಸಹ ಇನ್ನೂ ಆಗಿಲ್ಲ.

ಇನ್ನು, ದಸರಾಗೆ ಕಡಿಮೆ ಸಮಯ ಇದ್ದು, ತರಾತುರಿಯಲ್ಲಿ ಹಬ್ಬ ನಡೆಸಲು ಸಾಧ್ಯವೇ? ಎಂಬ ಮಾತುಗಳು ಕೇಳಿಬರುತ್ತಿವೆ. ಜನಪ್ರತಿನಿಧಿಗಳು ಅಧಿಕಾರದ ಆಸೆಯಿಂದ ನಾಡಹಬ್ಬವನ್ನೇ ನಿರ್ಲಕ್ಷ್ಯ ಮಾಡಿದ್ದಾರಾ? ಎಂಬ ಆರೋಪವೂ ಸಹ ಕೇಳಿಬರುತ್ತಿದೆ. ಹೊಸ ಸಿಎಂ ಬಿಎಸ್‌ ಯಡಿಯೂರಪ್ಪ ಅವರಾದರೂ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

First published: August 1, 2019, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading