ಕೋವಿಡ್ ಲಾಕ್‌ಡೌನ್ (Covid Lockdown) ಸಮಯದಲ್ಲಿ ಎಲ್ಲಾ ಕಚೇರಿಗಳು ಮುಚ್ಚಿದ್ದವು. ಈ ಸಮಯದಲ್ಲಿ ಎಂಜಿನಿಯರ್ ಒಬ್ಬರು ಕಾಮಗಾರಿಯೊಂದಕ್ಕೆ ರೂ 5 ಕೋಟಿ ಮಂಜೂರು ಮಾಡಿದ್ದಾರೆ. ಈ ವಿಚಾರ ಹೈಕೋರ್ಟ್ (High Court) ಮೆಟ್ಟಿಲೇರಿದ್ದು ಹೈಕೋರ್ಟ್ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಲಾಕ್‌ಡೌನ್ ಸಮಯದಲ್ಲಿ ಕಾಮಗಾರಿ ಮೂರೇ ದಿನದಲ್ಲಿ ಪೂರ್ಣಗೊಂಡಿದ್ದು ಇದಕ್ಕಾಗಿ ಹಣ ಕೂಡ ಮಂಜೂರಾಗಿರುವುದು ನ್ಯಾಯಪೀಠವನ್ನು ಬೆರಗಾಗಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.
ಹಣ ಮಂಜೂರು ಮಾಡಿದ್ದ ಇಂಜಿನಿಯರ್
ಮಂಡ್ಯ ಜಿಲ್ಲೆಯಲ್ಲಿ 2019 ರ ಅಕ್ಟೋಬರ್‌ನಲ್ಲಿ ತೀವ್ರ ಮಳೆಯಾಗಿ ಪ್ರವಾಹ ಬಂದಿತ್ತು. ಈ ಸಮಯದಲ್ಲಿ ಜಿಲ್ಲೆಯ ಕೆ.ಆರ್ ಪೇಟೆಯ ಕೆರೆಗಳು ಹಾಳು ಬಿದ್ದಿದ್ದವು. ಅವುಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕೆಂದು ಮಾರ್ಚ್ 27, 2020 ರಂದು ಗುತ್ತಿಗೆ ನೀಡಲಾಗಿತ್ತು.
ಹೇಮಾವತಿ ಕಾಲುವೆ ಘಟಕದ ಸರಕಾರಿ ಕಾರ್ಯಪಾಲಕ ಎಂಜಿನಿಯರ್ ಮೂರು ದಿನಗಳಲ್ಲಿ ಪೂರ್ಣಗೊಳಿಸಿದ ಕಾಲುವೆ ಕಾಮಗಾರಿಗೆ ಸುಮಾರು 5 ಕೋಟಿ ಹಣವನ್ನು ಮಂಜೂರು ಮಾಡಿದ್ದು, ಪಾವತಿ ವಿವರಗಳನ್ನು ರಾಜ್ಯ ಹೈಕೋರ್ಟ್ ಪರಿಶೀಲಿಸಿದೆ.
ಇದನ್ನೂ ಓದಿ: ಭೀಕರ ಸುಂಟರಗಾಳಿಗೆ ನಲುಗಿದ ಅಮೆರಿಕಾ! 21ಕ್ಕೂ ಹೆಚ್ಚು ಸಾವು! ನೂರಾರು ಕಟ್ಟಡಗಳು ಧರಾಶಾಹಿ!
ಇಂಜಿನಿಯರ್‌ನ ಮೇಲೆ ಏಕೆ ವಿಚಾರಣೆ ನಡೆಸಿಲ್ಲ
ಏಕಸದಸ್ಯ ಪೀಠವು ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡಿದ ಎಂಜಿನಿಯರ್ ಕೆ. ಶ್ರೀನಿವಾಸ್ ಅವರನ್ನು ವಿಚಾರಣೆಗೆ ಒಳಪಡಿಸದೇ ಇರಲು ಕಾರಣಗಳೇನು ಎಂಬುದಾಗಿ ಪ್ರಶ್ನಿಸಿದ್ದು ಈ ನಿರ್ಧಾರವನ್ನು ಸಮರ್ಥಿಸುವ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ.
ಪ್ರಕರಣವೇನು?
ಸಂಪೂರ್ಣ ದೇಶವೇ ಸಾಂಕ್ರಾಮಿಕದ ಕಷ್ಟವನ್ನೆದುರಿಸುತ್ತಿದ್ದಾಗ ರಾಜಕಾಲುವೆ ಹಾಗೂ ಇನ್ನಿತರ ಕೆಲಸಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರ ಪಿ.ಕೆ ಶಿವರಾಮು ಎಂಬುವವರಿಗೆ ಮಾರ್ಚ್ 27, 2020 ರಂದು ವರ್ಕ್ ಆರ್ಡರ್ ನೀಡಲಾಗಿತ್ತು.
ಅಂತೆಯೇ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಲ್ ಕ್ಲೈಮ್ ಮಾಡಿದ್ದರು ಅಂತೆಯೇ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರನಿಗೆ ಎಂಜಿನಿಯರ್ ಕೆ. ಶ್ರೀನಿವಾಸ್ ಹಣ ಮಂಜೂರು ಮಾಡಿದ್ದಾರೆ.
ಲಾಕ್‌ಡೌನ್ ಇದ್ದಾಗ ಹಣ ಮಂಜೂರು ಹೇಗೆ ಸಾಧ್ಯ?
ಈ ಎಲ್ಲಾ ಪ್ರಕ್ರಿಯೆಗಳು ನಡೆದ ಸಮಯದಲ್ಲಿ ಸಂಪೂರ್ಣ ದೇಶವೇ ಲಾಕ್‌ಡೌನ್‌ಗೆ ಒಳಗಾಗಿತ್ತು ಹಾಗೂ ಕೋವಿಡ್ ತೀವ್ರವಾಗಿ ಹರಡಿತ್ತು. ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ ಕಚೇರಿಗಳನ್ನು ಕೂಡ ಮುಚ್ಚಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಕಚೇರಿಗಳು ಮುಚ್ಚಿದ್ದರೂ ಬಿಲ್ ಮಂಜೂರು ಮಾಡಲು ಹೇಗೆ ಸಾಧ್ಯವೆಂದು ನಾಗೇಗೌಡ ಎಂಬುವವರು ದಾಖಲೆಗಳನ್ನು ಸಂಗ್ರಹಿಸಿ ಲೋಕಾಯಕ್ತಕ್ಕೆ ದೂರು ಸಲ್ಲಿಸಿದ್ದರು ಹಾಗೂ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಎಂಜಿನಿಯರ್ ಶ್ರೀನಿವಾಸ್ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದ್ದರು.
ಲೋಕಾಯುಕ್ತದ ಮುಂದೆ ವಾದ ಮಂಡಿಸಿದ ಇಂಜಿನಿಯರ್
ಕರ್ನಾಟಕ ಪಾರದರ್ಶಕತೆ ಕಾಯ್ದೆ ಸೆಕ್ಷನ್ 4 ರಡಿಯಲ್ಲಿ ಹಣವನ್ನು ಮಂಜೂರು ಮಾಡಲಾಗಿದ್ದು, ಕಾನೂನಿನ ಯಾವುದೇ ತೊಡಕಿಲ್ಲ ಎಂದು ಶ್ರೀನಿವಾಸ್ ವಾದಿಸಿದ್ದು ಅವರ ವಾದ ಆಲಿಸಿದ ಲೋಕಾಯುಕ್ತ ಎಂಜಿನಿಯರ್ ಪ್ರಕರಣದಲ್ಲಿ ದೋಷವಿಲ್ಲ ಎಂದು ಲೋಕಾಯುಕ್ತರು ನಿರ್ಧರಿಸಿ ಇತ್ಯರ್ಥಗೊಳಿಸಿದ್ದರು ಎಂಬುದು ತಿಳಿದುಬಂದಿದೆ.
ಹೈಕೋರ್ಟ್‌ನಲ್ಲಿ ಕೇಸು ದಾಖಲು
ಈ ಹಿನ್ನಲೆಯಲ್ಲಿ ನಾಗೇಗೌಡರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು, ನ್ಯಾಯಾಲಯದ ಆತ್ಮಸಾಕ್ಷಿಗೆ ಇಂತಹ ಪ್ರಕರಣಗಳು ಆಘಾತವನ್ನುಂಟುಮಾಡುತ್ತವೆ. ಅದೂ ಅಲ್ಲದೆ ಈ ಪ್ರಕರಣದಲ್ಲಿ ಪ್ರಾಧಿಕಾರವು ಕ್ರಮ ಕೈಗೊಳ್ಳದೇ ಇರುವುದು ಮತ್ತಷ್ಟು ಆಘಾತಕಾರಿಯಾಗಿದೆ ಎಂದು ತಿಳಿಸಿದೆ. ಲೋಕಾಯುಕ್ತದಲ್ಲಿಯೂ ಪ್ರಕರಣದ ವಿಚಾರಣೆ ಈಗಾಗಲೇ ಮುಕ್ತಾಯಗೊಂಡಿದೆ ಎಂಬುದು ಆಶ್ಚರ್ಯಕರವಾಗಿದೆ ಎಂದು ತಿಳಿಸಿದೆ.
ಲೋಕಾಯುಕ್ತದ ಮುಂದೆ ಕೇಸು ಇತ್ಯರ್ಥಗೊಳ್ಳದೆಯೇ ಪ್ರಾಧಿಕಾರವು ಹಣ ಮಂಜೂರು ಹೇಗೆ ಮಾಡಿದೆ ಎಂಬುದಾಗಿ ಪ್ರಶ್ನಿಸಿರುವ ನ್ಯಾಯಾಲಯವು ಇಲ್ಲಿ ಪ್ರತಿವಾದಿ ಯಾವುದೇ ಹಣ ವಿನಿಮಯ ಮಾಡಿಕೊಂಡಿಲ್ಲ. ಅಂತೆಯೇ ಮಂಜೂರಾತಿ ತಿರಸ್ಕರಿಸಿದ ಪ್ರಾಧಿಕಾರ ಕೂಡ ಹಣ ಕಳೆದುಕೊಂಡಿಲ್ಲ ಇಲ್ಲಿ ವ್ಯಯವಾಗಿರುವುದು ಸಾರ್ವಜನಿಕರಿಗೆ ಸೇರಿದ ಹಣವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ