ಕೊಪ್ಪಳ: ಹುಲಿ ಬೋನಿನಲ್ಲಿದ್ದರೂ ಹುಲಿನೇ (Tiger), ಹೊರಗಡೆ ಇದ್ದರೂ ಹುಲಿನೇ. ನಾನು ಹುಲಿ ರೀತಿ ಬೇಟೆಯಾಡುತ್ತೇನೆ. ಹುಲಿ ಬೇಟೆಗೆ (Hunt) ಅದೆಷ್ಟು ಜಿಂಕೆಗಳು ಮನೆಗೆ ಹೋಗುತ್ತವೆ ಎಂಬುವದನ್ನು ಕಾದು ನೋಡಿ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ (Janardhana Reddy) ಹೇಳಿದರು. ಇಂದು ಕನಕಗಿರಿಯಲ್ಲಿ ಕೆಆರ್ ಪಿಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯ (Women's Day) ಪಕ್ಷದ ಸಮಾವೇಶ ಹಾಗು ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿ ಮಾತನಾಡಿದರು. ನಾನು ಎಂಎಲ್ಎ (MLA) ಆಗಬೇಕು ಅಂತಾ ಪಕ್ಷ ಕಟ್ಟಿಲ್ಲ.ನಾನು ಎಲ್ಲೆ ನಿಂತರೂ ಎಂಎಲ್ಎ ಆಗಬಹುದಿತ್ತು. ಆದರೆ ಇಲ್ಲಿನ ಜನರ ಅಭಿಮಾನ, ಪ್ರೀತಿ, ಚಪ್ಪಾಳೆ ಬೆಂಗಳೂರಲ್ಲಿ ಸಿಗಲ್ಲ. ಅದಕ್ಕಾಗಿ ಜನರ ಶ್ರೇಯೋಭಿವೃದ್ದಿಗೆ ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರು.
ಕನಕಗಿರಿ ಕ್ಷೇತ್ರಕ್ಕೆ ಚಾರುಲ್ ಅಭ್ಯರ್ಥಿ
ಕೆಲವರು ನಾವು ಬರುತ್ತೀನಿ ಕನಕಗಿರಿಯಲ್ಲಿ ಟಿಕೆಟ್ ಘೋಷಣೆ ಮಾಡಬೇಡಿ ಅಂತ ಕೆಲವರು ಹೇಳಿದರು. ಆದರೆ ಅವರ ಸಲುವಾಗಿ ಕಾಯ್ದು ಕುಳಿತುಕೊಳ್ಳುವ ಜಾಯಾಮಾನ ನನ್ನದಲ್ಲ. ಅದಕ್ಕಾಗಿ ಕನಕಗಿರಿ ಕ್ಷೇತ್ರಕ್ಕೆ ಚಾರುಲ್ ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇನೆ. ಈ ಸಮಾವೇಶ ನೋಡಿ 20 ಮಾತ್ರೆ ತೆಗೆದುಕೊಳ್ಳುವವರು, ಈಗ 40 ಮಾತ್ರೆ ತೆಗೆದುಕೊಳ್ತಾರೆ ಎಂದು ಟೀಕಿಸಿದರು.
ನನ್ನನ್ನು ಮುಗಿಸುವ ಕೆಲಸ ಮಾಡಿದ್ರು
ನನ್ನ ಜೀವನದಲ್ಲಿ ನನ್ನ ತಾಯಿ- ನನ್ನ ಪತ್ನಿಯ ಋಣ ಮರೆಯೋಲ್ಲ. ಎಲ್ಲರೂ ಸೇರಿ ನನ್ನ ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದರು. ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೆ ಈ ಜನಾರ್ಧನರೆಡ್ಡಿ. ನಾನು ಇನ್ನು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಮುಗಿಸುವ ಕೆಲಸ ಮಾಡಿದ್ದರು. ಆದರೆ ಅವರಿಂದ ಏನು ಮಾಡೋಕೆ ಆಗಿಲ್ಲ.ನಾನು ಇನ್ನು ರಾಜಕೀಯ ಉಳಿದಿದ್ದೇನೆ ಎಂದರೆ, ಅದು ಭಗವಂತನ ಹಾಗೂ ಜನರ ಆಶೀರ್ವಾದ ಎಂದರು.
ಇದನ್ನೂ ಓದಿ: KS Eshwarappa: ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ; ಕಾಂಗ್ರೆಸ್‌ಗೆ ಈಶ್ವರಪ್ಪ ಟಾಂಗ್
ರಾಣಿ ಚೆನ್ನಮ್ಮ ಅಭಯ ಹಸ್ತ ಎನ್ನುವ ಯೋಜನೆ ಘೋಷಣೆ
ಬರುವ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಬಸವವೇಶ್ವರ ರೈತ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ನಾನು ಈಗ ಧೈರ್ಯವಾಗಿ ಬದುಕುತ್ತಿದ್ದೇನೆ ಎಂದರೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಆದರ್ಶದಿಂದ. ರಾಣಿ ಚೆನ್ನಮ್ಮ ಅಭಯ ಹಸ್ತ ಎನ್ನುವ ಯೋಜನೆ ಘೋಷಣೆ ಮಾಡಿದ್ದೇನೆ ಎಂಬ ಪ್ರಣಾಳಿಕೆಯ ಬ್ಯಾನರ್ ಅನಾವರಣಗೊಳಿಸಿದರು.
ಅಧಿಕಾರ ನಾನು ಮಾಡುತ್ತಿನೋ ಅಥವಾ ಅಧಿಕಾರ ಮಾಡುವವರ ಕೈ ಹಿಡಿದು ಅಭಿವೃದ್ಧಿ ಮಾಡುತ್ತೇನೋ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು. ನಾನು ಬರಿ ರಾಜ್ಯದಲ್ಲಿ ಅಲ್ಲ, ದೇಶದಲ್ಲಿ ಇತಿಹಾಸ ನಿರ್ಮಿಸುತ್ತೇನೆ. ಕನಕಗಿರಿಯಲ್ಲಿ ಈ ಹಿಂದೆ ಗೆದ್ದವರ ಬಾಡಿ ಲಾಂಗ್ವೇಜ್ ಚೇಂಜ್ ಆಗಿದೆ. ಇನ್ನೊಬ್ಬ ಅಮಾಯಕ, ರೈತರ ಜೊತೆ ಇರುತ್ತಾನೆ ಎಂದು ಗೆಲ್ಲಿಸಿದರೆ ಏನೇನೋ ಮಾಡಿಕೊಂಡಿದ್ದಾನೆ. ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಹಾಲಿ ಶಾಸಕ ಬಸವರಾಜ ದಡೇಸೂಗೂರು ಹೆಸರು ಹೇಳದೆ ಕುಟುಕಿದರು.
ಇಂದಿನ ಸರ್ಕಾರಗಳು ನೀರಾವರಿ ಯೋಜನೆಗಳಲ್ಲಿ ಸಂಪೂರ್ಣವಾಗಿ ವಿಫಲ ಆಗಿವೆ
ರಾಜಕೀಯ ಕ್ಷೇತ್ರಕ್ಕೆ ಬಹಳ ಚಿಕ್ಕ ವಯಸ್ಸಿನಲ್ಲಿ ಬಂದೆ, 1999ನೇ ಇಸವಿಯಲ್ಲಿ ಸೋನಿಯಾ ಗಾಂಧಿ, ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಅವರು ನಿಂತಿದ್ದರು. ಕೇವಲ 18 ದಿನಗಳಲ್ಲಿ 540 ಸಭೆ ಮಾಡಿದ್ದೆವು. ಸುಷ್ಮಾ ಸ್ವರಾಜ್ ಕೇವಲ 30,000 ಅಂತರದಿಂದ ಸೋತರು. ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬಂದೆ. ಯಡಿಯೂರಪ್ಪ ಅವರನ್ನು ಜನಾರ್ದನರೆಡ್ಡಿ ಮುಖ್ಯಮಂತ್ರಿ ಮಾಡಿದರೂ ಅಂತ ಇಡೀ ರಾಜ್ಯ ಮಾತಾಡಿತ್ತು.
ಪ್ರವಾಸೋದ್ಯಮ ಸಚಿವ ಆಗಿ 13 ಏರ್ ಪೋರ್ಟ್ ಮಾಡಲು ಅಡಿಗಲ್ಲು ಹಾಕಿದ್ದೇವು. ಶಿವಮೊಗ್ಗದಲ್ಲೂ ಕೂಡ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದೆವು. ಇಂದಿನ ಸಿಎಂ ಅವರು ಅಂದು ಜಲಸಂಪನ್ಮೂಲ ಸಚಿವರಾಗಿದ್ದರು. ಅಂದು ನೀರಾವರಿ ಯೋಜನೆಗಳಿಗೆ ಸಾಕಷ್ಟು ಅನುಮೋದನೆ ಕೊಟ್ಟಿದ್ದೆವು. ಇಂದಿನ ಸರ್ಕಾರಗಳು ನೀರಾವರಿ ಯೋಜನೆಗಳಲ್ಲಿ ಸಂಪೂರ್ಣವಾಗಿ ವಿಫಲ ಆಗಿವೆ ಎಂದು ಆರೋಪಿಸಿದರು.
ಮಾತ್ರೆ ತೆಗೆದುಕೊಳ್ಳದೆ ನಿದ್ದೆ ಮಾಡುವ ಶಕ್ತಿ ಕೊಟ್ಟಿದ್ದಾನೆ ಭಗವಂತ
ನಮ್ಮವರೇ ಎಲ್ಲರೂ ಒಂದಾಗಿ, ನನ್ನನ್ನು ತುಳಿದರು, ಮೀನು ಆನಂದವಾಗಿ ಈಜಾಡುತ್ತೆ. ಮೀನಿಗೆ ಬಲೆ ಹಾಕಿರುತ್ತಾರೆ ಅಂತ ಗೊತ್ತಿರಲ್ಲ, ಅದು ಈಜಾಡುತ್ತಿರುತ್ತೆ. ಬಳಿಕ ಮೀನು ಬಲೆಯಲ್ಲಿ ಸಿಕಾಕೊಳ್ಳುತ್ತೆ, ಕಣ್ಣಿಗೆ ಕಂಡಿದ್ದು ಬೆಳ್ಳಗೆ ಅಂತ ಭಾವಿಸಿದ್ದೆ.
ರಾಜಕೀಯದಲ್ಲಿ ಪಾದ ಇಟ್ಟು ತುಳಿದರೆನೇ ಮುಂದೆ ಬರೋದು ಅಂತ ಕೆಲ ಹಿರಿಯರು ಕೆಲವರು ಹೇಳಿದ್ದರು. 12 ವರ್ಷ ಸಾರ್ವಜನಿಕ ಜೀವನದಿಂದ ದೂರ ಆಗುವಂತೆ ಮಾಡಿದರು. ಭಗವಂತ ದೊಡ್ಡವನು, ನನಗೆ ತೊಂದರೆ ಕೊಟ್ಟವನು ಇಪ್ಪತ್ತು ಮೂವತ್ತು ಮಾತ್ರೆ ತಿಂದು ಮಲಗುತ್ತಿದ್ದಾರೆ. ಆದರೆ ನಾನು ಮಾತ್ರೆ ತೆಗೆದುಕೊಳ್ಳದೆ ನಿದ್ದೆ ಮಾಡುವ ಶಕ್ತಿ ಕೊಟ್ಟಿದ್ದಾನೆ ಭಗವಂತ.
ಇದನ್ನೂ ಓದಿ: Bengaluru: ಭಾರತೀಯ ಸೇನೆಗೆ 100 ಅಗ್ನಿವೀರ್ ನಾರಿಯರು; ಕರ್ನಾಟಕದ ಮಹಿಳಾ ಅಭ್ಯರ್ಥಿಯ ಎಕ್ಸ್ಕ್ಲೂಸಿವ್ ಮಾತು!
ಸತ್ತ ಮೇಲೆ ಸಾವಿರ ವರ್ಷ ನನ್ನ ಹೆಸರು ಈ ಭೂಮಿ ಮೇಲೆ ಉಳಿಯಬೇಕು
ಹಲವು ಸಂದರ್ಭಗಳಲ್ಲಿ ರಾಜಕೀಯ ಬೇಡ ಎಂದು ಹೆಂಡತಿ ಮಕ್ಕಳ ಜೊತೆ ಇದ್ದೆ. ಬಳ್ಳಾರಿಯಲ್ಲಿ ಇದ್ದರೆ ರಾಜಕೀಯದಲ್ಲಿ ಮುಂದೆ ಬರ್ತಾನೆ ಅಂತ ಅಲ್ಲಿಂದಲೂ ದೂರ ಮಾಡುವ ಪ್ರಯತ್ನ ಮಾಡಿ ಕೆಲವರು ಸಫಲ ಆದರು. ಇರುವುದು ಒಂದೇ ಜನ್ಮ, ಮತ್ತೊಂದು ಜನ್ಮ ಸಿಗುವುದಿಲ್ಲ. ಸತ್ತ ಮೇಲೆ ಸಾವಿರ ವರ್ಷ ನನ್ನ ಹೆಸರು ಈ ಭೂಮಿ ಮೇಲೆ ಉಳಿಯಬೇಕು.
ಜನರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಒಂದು ಪ್ರಾದೇಶಿಕ ಪಕ್ಷ ಕಟ್ಟಿದ್ದೇನೆ. ಅಭಿವೃದ್ಧಿ ಅಂದರೆ ಕೇವಲ ಬೆಂಗಳೂರು, ಕರಾವಳಿ, ಮಲೆನಾಡಿಗೆ ಸೀಮಿತ ಆಗಿದೆ. ಇಡೀ ಜೀವನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಡುವುದಾಗಿ ಮಾಧ್ಯಮದವರಿಗೂ ಹೇಳಿದ್ದೇನೆ. ಪಕ್ಷ ಕಟ್ಟಿ 60 ದಿನ ಆಗಿದೆ, 31 ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದವರು ಗೆದ್ದು ಶಾಸಕರಾಗುತ್ತಾರೆ. ಗೆಲ್ಲೋದಕ್ಕೆ ಅವಕಾಶ ಇರುವ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿ ಹಾಕುತ್ತಿದ್ದೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ