HOME » NEWS » State » WOMEN PROTESTERS ARRESTED FOR ASSAULTING BUS DRIVER AND CONDUCTOR IN NELAMANGALA RHHSN

ಮುಷ್ಕರದ ಮಧ್ಯೆಯೂ ಬಸ್ ಚಲಾಯಿಸಿದ ಚಾಲಕನಿಗೆ ಥಳಿಸಿದ ಪ್ರತಿಭಟನಾನಿರತ ಮಹಿಳೆಯರ ಬಂಧನ!

ಘಟನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಸಾವಿತ್ರಿ, ಗೀತಾ, ಅನ್ನಪೂರ್ಣ, ಸುನಿತಾ ಹಾಗೂ ಪೀಣ್ಯಾ ಡಿಪೋದ ನಿರ್ವಾಹಕಿ ಕುಸುಮಾರನ್ನು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ. 

news18-kannada
Updated:April 12, 2021, 10:35 PM IST
ಮುಷ್ಕರದ ಮಧ್ಯೆಯೂ ಬಸ್ ಚಲಾಯಿಸಿದ ಚಾಲಕನಿಗೆ ಥಳಿಸಿದ ಪ್ರತಿಭಟನಾನಿರತ ಮಹಿಳೆಯರ ಬಂಧನ!
ಪ್ರಾತಿನಿಧಿಕ ಚಿತ್ರ.
  • Share this:
ನೆಲಮಂಗಲ (ಏ. 12): ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಸತತ 6ನೇ ದಿನವೂ ಮುಂದುವರೆದಿದೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಇಂದೂ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಮುಷ್ಕರದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕನನ್ನು ಪ್ರತಿಭಟನಾ ನಿರತ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ಐವರು ಮಹಿಳೆಯರನ್ನು ಬಂಧಿಸಿದ್ದು, 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅರಿಶಿನಕುಂಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಪೀಣ್ಯ ಡಿಪೋದ ಚಾಲಕ ಗಿರೀಶ್ ಹಾಗೂ ನಿರ್ವಾಹಕ ಚನ್ನಕೇಶವ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ನೌಕರರ ಕುಟುಂಬಸ್ಥರಾದ ಸಾವಿತ್ರಿ, ಗೀತಾ, ಅನ್ನಪೂರ್ಣ, ಸುನೀತಾ ಹಾಗೂ ಪೀಣ್ಯಾ ಡಿಪೋದ ನಿರ್ವಾಹಕಿ ಕುಸುಮಾರನ್ನು ಹಲ್ಲೆ ಆರೋಪದಡಿ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಐವರು ಮಹಿಳೆಯರಿಗೆ ಸ್ಥಳೀಯ ಕೋರ್ಟ್ 12 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಇಂದು ಬೆಳಗ್ಗೆ ಸಾರಿಗೆ ನೌಕರರು ಹಾಗೂ ಅವರ ಕುಟುಂಬಸ್ಥರು ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು. ನೆಲಮಂಗಲ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ತಲುಪಿ ತಾಲೂಕು ಅಧಿಕಾರಿಗೆ ಮನವಿ ಪತ್ರ ನೀಡಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಭಟನಾ ನಿರತರನ್ನು ಪೊಲೀಸರು ನೆಲಮಂಗಲ ಬಸ್ ನಿಲ್ದಾಣದ ಬಳಿಯೇ ತಡೆದಿದ್ದಾರೆ. ರೊಚ್ಚಿಗೆದ್ದ ಪ್ರತಿಭಟನಾ ನಿರತರು ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ಬಿಎಂಟಿಸಿ ಬಸ್​ಗೆ ಮುತ್ತಿಗೆ ಹಾಕಿದ್ದಾರೆ.

ಇದನ್ನು ಓದಿ: ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಸಾರಿಗೆ ನೌಕರ ವೇತನ ಹೆಚ್ಚಳಕ್ಕೆ ಕ್ರಮ; ಸಚಿವ ಲಕ್ಷ್ಮಣ ಸವದಿ ಭರವಸೆ

ಮುಷ್ಕರದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕ ಗಿರೀಶ್, ನಿರ್ವಾಹಕ ಚನ್ನಕೇಶವ್​ನನ್ನು ಬಸ್ಸಿನಿಂದ ಹೊರಗೆ ಎಳೆದು ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಚಾಲಕ ಗಿರೀಶ್ ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಸಾವಿತ್ರಿ, ಗೀತಾ, ಅನ್ನಪೂರ್ಣ, ಸುನಿತಾ ಹಾಗೂ ಪೀಣ್ಯಾ ಡಿಪೋದ ನಿರ್ವಾಹಕಿ ಕುಸುಮಾರನ್ನು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ.

ಸಾರಿಗೆ ಸಚಿವ ಸವದಿ ಮನವಿಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯಗೊಂಡ ನಂತರ ಸಾರಿಗೆ ನೌಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ನಾವು ಹಲವಾರು ಬಾರಿ ಮುಷ್ಕರ ನಿರತ ನೌಕರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿ ಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿಯನ್ನೂ ಕಳೆದುಕೊಳ್ಳುತ್ತಿದೆ.  ಇದರಿಂದ ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ, ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ ಎಂಬ ಸತ್ಯವನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

  • ವರದಿ: ಕಾವ್ಯಾ ವಿ

Published by: HR Ramesh
First published: April 12, 2021, 10:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories