ಬೆಂಗಳೂರು (ಏ. 30) :ಕೊರೋನಾ ಸಂಕಷ್ಟದಲ್ಲಿ ಜನರು ಬಳಲುತ್ತಿರುವ ಈ ಸಮಯದಲ್ಲಿ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ ಮಾಡಿದೆ. ಬಿಪಿಎಲ್ ಕಾರ್ಡ್ದಾರರಿಗೆ 5 ಕೆಜಿ ಅಕ್ಕಿ ಬದಲಿಗೆ 2 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಜನರಿಗೆ ಸರಿಯಾಗಿ ಅಕ್ಕಿಯನ್ನು ನೀಡುತ್ತಿಲ್ಲ. ಸೋಂಕಿನಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ನೀಡಲಾಗುತ್ತಿಲ್ಲ ಎಂದು ಆಪಾದಿಸಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಕೊರೋನಾ ನಿರ್ವಹಣೆ ವಿಚಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಂಪೂರ್ಣವಾಗಿ ಸೋತಿದ್ದಾರೆ. ಜನರು ಕಷ್ಟದಿಂದ ನರಳುತ್ತಿದ್ದರೂ ಸರ್ಕಾರ ಮಾತ್ರ ಬೆಚ್ಚಗೆ ಹೊದ್ದು ಮಲಗಿದೆ. ಜನರ ಸಂಕಷ್ಟ ಕಾಣಬೇಕು ಎಂದರೇ ಬೀದಿಗಿಳಿರಿ. ಆಗ ನಿಮಗೆ ನಮ್ಮ ನೋವು ತಿಳಿಯಲಿದೆ ಎಂದು ಸವಾಲ್ ಹಾಕಿದ್ದಾರೆ.
ಕೊರೋನಾ ಬಂದ 30 ವರ್ಷದ ಯುವಕ ಸಾಯುತ್ತಾರೆ. ಅದೇ 72ರ ಯಡಿಯೂರಪ್ಪ ಅವರು ಚೇತರಿಕೆ ಕಾಣುತ್ತಾರೆ. ನಿಮಗೆ ದುಡ್ಡು ಇದೆಯಲ್ಲ ಬಿಡಿ. ಸಾಮಾನ್ಯ ಜನರ ಬಗ್ಗೆ ನೀವೇಕೆ ಕಾಳಜಿ ಮಾಡುತ್ತೀರಾ. ಜನರು ರಸ್ತೆಯಲ್ಲಿ ಸಾಯುತ್ತಿದ್ದರೂ ಸರ್ಕಾರ, ಬಿಜೆಪಿ ನಾಯಕರು ಬೆಚ್ಚಗೆ ಹೊದ್ದು ಮಗಲಿದ್ದಾರೆ. ಇದಕ್ಕೆನಾ ನಾವು ಬಿಜೆಪಿ ಸರ್ಕಾರ ಬರಲಿ ಎಂದು ನಿಮಗೆ ಮತ ಹಾಕಿಸಿ ಗೆಲ್ಲಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಮೋದಿ ಮುಖ ನೋಡಿ ನಾವು ಮತ ಹಾಕಿದ್ದೇವು ಎಂದು ಇದೇ ವೇಳೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ತಂದೆ ಐಸಿಯು ಬೆಡ್ನಲ್ಲಿದ್ದರೂ ಸೋಂಕಿತರಿಗೆ ಚಿಕಿತ್ಸೆ; ಅದಕ್ಕೆ ಹೇಳೋದು ವೈದ್ಯೋ ನಾರಾಯಣ ಹರಿ ಎಂದು
ಜನರು ಈಗಾಗಲೇ ಕೊರೋನಾದಿಂದ ಸಂಕಟ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಿ ಕಡಿತ ಮಾಡಿರುವುದು ಯಾವ ನ್ಯಾಯ. ಎರಡು ಕೆಜಿ ಅಕ್ಕಿಯಲ್ಲಿ ತಿಂಗಳೀಡಿ ಜೀವನ ಮಾಡಲು ಸಾಧ್ಯವಾ? ಬಿಎಸ್ವೈಗಿಂತ ಸಿದ್ದರಾಮಯ್ಯ ಅವರೇ ಮೇಲಾದರೂ ಅವರಾದರೂ 7 ಕೆಜಿ ಅಕ್ಕಿ ನೀಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಅಕ್ಕಿ ಕಡಿತ ಮಾಡಿದ ಕ್ರಮಕ್ಕೆ ಎಲ್ಲೆಡೆ ಜನಸಾಮಾನ್ಯರು ಟೀಕೆ ಮಾಡಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ರೈತರೊಬ್ಬರು ಅಕ್ಕಿ ಕಡಿತ ಮಾಡಿದ್ದೀರಿ. ಜನ ತಿನ್ಬೇಕೋ ಸಾಯಬೇಕೋ ಎಂದು ಸಚಿವ ಉಮೇಶ್ ಕತ್ತಿಗೆ ಪ್ರಶ್ನಿಸಿದ್ದರು. ಈ ವೇಳೆ ಸಚಿವರು ಸತ್ತೋಗಪ್ಪಾ ನಂಗೆ ಏನು ಆಗ್ಬೇಕಿಲ್ಲ ಎಂದು ಉಡಾಫೆ ಉತ್ತರ ನೀಡುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಬಳಿಕ ತಮ್ಮ ತಪ್ಪಿನ ಅರಿವಾದ ಸಚಿವರು ರಾಜ್ಯದ ಜನರ ಕ್ಷಮೆಯಾಚಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ