Puttur: ಇಲ್ಲಿ ಮಹಿಳೆಯರು ಮನೆ ಮಾತ್ರವಲ್ಲ, ಊರನ್ನೇ ಸ್ವಚ್ಛ ಮಾಡ್ತಾರೆ

ಗ್ರಾಮಪಂಚಾಯತೊಂದು (Grama Panchayat) ಸದ್ದಿಲ್ಲದೆ ಇಡೀ ಗ್ರಾಮವನ್ನೇ ಬಯಲು ಕಸಮುಕ್ತವನ್ನಾಗಿ ಮಾಡಲು ಮುಂದಡಿ ಇಟ್ಟಿದೆ. ಈ ಜವಾಬ್ದಾರಿಯನ್ನು ಪಂಚಾಯತ್ ಮಹಿಳೆಯರಿಗೇ ಹಂಚಿದ್ದು, ಇಲ್ಲಿ ಕಸ ಸಂಗ್ರಹ ಸೇರಿದಂತೆ ವಿಲೇವಾರಿಯಿಂದ ಹಿಡಿದು ಗೊಬ್ಬರ ತಯಾರಿಸುವ ತನಕದ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಮಹಿಳೆಯರ ತಂಡ

ಮಹಿಳೆಯರ ತಂಡ

  • Share this:
ಗಲ್ಲಿ ಗಲ್ಲಿಯಲಿ, ರಸ್ತೆ ಪಕ್ಕಗಳಲ್ಲಿ ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ದಕ್ಷಿಣಕನ್ನಡ(Dakshina kannada) ಜಿಲ್ಲೆಯನ್ನು ಬಯಲು ಕಸಾಲಯವಾಗಿ ಬದಲಾಗಿದೆ. ಆದರೆ ಇದೇ ಜಿಲ್ಲೆಯ ಗ್ರಾಮಪಂಚಾಯತೊಂದು (Grama Panchayat) ಸದ್ದಿಲ್ಲದೆ ಇಡೀ ಗ್ರಾಮವನ್ನೇ ಬಯಲು ಕಸಮುಕ್ತವನ್ನಾಗಿ ಮಾಡಲು ಮುಂದಡಿ ಇಟ್ಟಿದೆ. ಈ ಜವಾಬ್ದಾರಿಯನ್ನು ಪಂಚಾಯತ್ ಮಹಿಳೆಯರಿಗೇ ಹಂಚಿದ್ದು, ಇಲ್ಲಿ ಕಸ ಸಂಗ್ರಹ ಸೇರಿದಂತೆ ವಿಲೇವಾರಿಯಿಂದ ಹಿಡಿದು ಗೊಬ್ಬರ ತಯಾರಿಸುವ ತನಕದ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಇತ್ತೀಚಿನ ಕೆಲವು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಯಲು ಕಸಾಲಯವಾಗಿ ಬದಲಾಗುತ್ತಿದೆ. ಮನೆ, ಹೋಟೇಲ್, ಉದ್ಯಮ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ಪಾದನೆಯಾಗುವ ಬಹುತೇಕ ಹಸಿ ಮತ್ತು ಒಣ ತ್ಯಾಜ್ಯಗಳಿಗೆ ಇಂದು ಜಿಲ್ಲಾ ಪಂಚಾಯತ್ , ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳೇ ಕಸದ ತೊಟ್ಟಿಯಾಗಿ ಬದಲಾಗಿದೆ.

ಮನೆ ಮನೆಗೆ ತೆರಳಿ ಕಸ ಸಂಗ್ರಹ ಹಾಗೂ ವಿಲೇವಾರಿ

ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಕೆಲವು ನಗರಸಭೆ, ಪುರಸಭೆ, ಪಟ್ಟಣಪಂಚಾಯ್ ಹಾಗು ಗ್ರಾಮಪಂಚಾಯತ್‌ ಗಳು ಮಾತ್ರ ಮನೆ ಮನೆಗೆ ತೆರಳಿ ಕಸ ಸಂಗ್ರಹ ಹಾಗೂ ವಿಲೇವಾರಿ ನಡೆಸುವ ವ್ಯವಸ್ಥೆಯನ್ನು ಮಾಡುತ್ತಿದ್ದು, ಇನ್ನು ಕೆಲವು ಆಡಳಿತಗಳು ತಮಗೂ ಕಸಕ್ಕೂ ಯಾವುದೇ ಸಂಬಂಧವೇ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.

ಬಯಲು ಕಸ ಮುಕ್ತ ಅಭಿಯಾನ

ಈ ನಡುವೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲೆಯಾದ್ಯಂತ ಬಯಲು ಕಸ ಮುಕ್ತ ಅಭಿಯಾನವನ್ನೂ ಹಮ್ಮಿಕೊಂಡಿದೆ. ಆದರೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಪಂಚಾಯತ್ ಮಾತ್ರ ಸದ್ದಿಲ್ಲದೆ ತನ್ನ ಪಂಚಾಯತ್ ಅನ್ನು ಬಯಲು ಕಸ ಮುಕ್ತ ಮಾಡುವ ಪಣ ತೊಟ್ಟುಕೊಂಡಿದೆ. ಪಂಚಾಯತ್ ನ ಮಾತೃಸಂಜೀವಿನಿ ಒಕ್ಕೂಟದ ಜೊತೆಗೆ ಒಪ್ಪಂದ ಮಾಡಿಕೊಂಡ ಗ್ರಾಮಪಂಚಾಯತ್ ಆಡಳಿತ ಪಂಚಾಯತ್ ವ್ಯಾಪ್ತಿಯ ಕಸ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರ ಮೇಲೆ ಹಾಕಿತ್ತು.

ಚಾಲಕಿ, ನಿರ್ವಾಹಕಿ, ಸ್ವಚ್ಛತಾ ಸೇನಾನಿ ಎಲ್ಲವೂ ಮಹಿಳೆಯರೇ

ಈ ಜವಾಬ್ದಾರಿಯನ್ನು ಛಾಲೆಂಜ್ ಆಗಿ ತೆಗೆದುಕೊಂಡ ಒಕ್ಕೂಟದ ಸದಸ್ಯರು ತಮ್ಮಲ್ಲೇ ಕಸ ಸಂಗ್ರಹಿಸುವ, ಕಸ ವಿಂಗಡಿಸುವ ಹಾಗೂ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ ಜವಾಬ್ದಾರಿಯನ್ನು ಹಂಚಿಕೊಂಡಿದೆ. ಕಸ ಸಂಗ್ರಹಿಸಲು ಬೇಕಾದ ವಾಹನಕ್ಕೆ ಚಾಲಕಿ, ನಿರ್ವಾಹಕಿ, ಸ್ವಚ್ಛತಾ ಸೇನಾನಿ ಎಲ್ಲವನ್ನೂ ಇಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದು, ಇಬ್ಬರು ಚಾಲಕಿಯರು ಪ್ರತೀ ದಿನವೂ ನಾಲ್ಕು ವಾರ್ಡಿನ 376 ಕ್ಕೂ ಮಿಕ್ಕಿದ ಮನೆಗಳ ಕಸ ಸಂಗ್ರಹಿಸುತ್ತಿದ್ದಾರೆ.

1048 ಕಸದ ತೊಟ್ಟಿ ವಿತರಣೆ

ಪಂಚಾಯತ್ ವತಿಯಿಂದ 1048 ಕಸದ ತೊಟ್ಟಿಗಳನ್ನೂ ವಿತರಿಸಲಾಗಿದ್ದು, ಮನೆ ಮಂದಿ ಇದರಲ್ಲಿ ಕಸವನ್ನು ತುಂಬಿಸಿ ವಾರಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಪಂಚಾಯತ್ ಗೆ ನೀಡುವ ಮೂಲಕ ಕಸ ವಿಲೇವಾರಿಗೆ ತಮ್ಮ ಸಹಕಾರವನ್ನೂ ನೀಡುತ್ತಿದ್ದಾರೆ ಎನ್ನುತ್ತಾರೆ ಕಡೇಶ್ವಾಲ್ಯ ಪಂಚಾಯತ್ ಪಿಡಿಒ  ಸುನಿಲ್ ಕುಮಾರ್ ಹಾಗು ಕಡೇಶ್ವಾಲ್ಯ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್.

ದಿನಕ್ಕೆ 25 ಕಿಲೋದಷ್ಟು ಒಣ ಕಸ ಹಾಗೂ 30 ರಿಂದ 35 ಕಿಲೋದಷ್ಟು ಹಸಿ ಕಸ

ಕಸ ಸಂಗ್ರಹ ವಾಹನದ ಲಕ್ಷ್ಮೀ ಹಾಗು ಪ್ರಮೀಳಾರಿಗೆ ಪಂಚಾಯತ್ ವತಿಯಿಂದಲೇ ವಾಹನದ ತರಬೇತಿಯನ್ನೂ ನೀಡಲಾಗಿದೆ. ಈ ಹಿಂದೆ ಕಸ ಸಂಗ್ರಹಿಸಲು ಮನೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಣ ನೀಡಲು ಹಿಂದೇಟು ಹಾಕುತ್ತಿದ್ದ ಗ್ರಾಮಸ್ಥರು ಇದೀಗ ಸರಿಯಾಗಿ ಹಣವನ್ನು ಪಾವತಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: Mandaya: ಇಲ್ಲಿ ನಾಟಿ ವೈದ್ಯೆ ನಾಗಮ್ಮಜ್ಜಿ ಬಲು ಫೇಮಸ್ಸು; ಕಾಮಾಲೆ ಸೇರಿದಂತೆ ಹಲವು ಕಾಯಿಲೆಗೆ ಇವರೇ ಸ್ಪೆಷಲಿಸ್ಟ್

ದಿನವೊಂದಕ್ಕೆ 25 ಕಿಲೋದಷ್ಟು ಒಣ ಕಸ ಹಾಗೂ 30 ರಿಂದ 35 ಕಿಲೋದಷ್ಟು ಹಸಿ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಸಂಗ್ರಹಿಸಿದ ಕಸವನ್ನು ವಿಂಗಡಿಸಿ ಜೋಡಿಸಿ ಇಡಲು ಘಟಕವನ್ನೂ ನಿರ್ಮಿಸಲಾಗಿದೆ. ಹಸಿ ಕಸವನ್ನು ಕಸದ ತೊಟ್ಟಿಯಲ್ಲಿ ಹಾಕಿ ಗೊಬ್ಬರ ತಯಾರಿಸುತ್ತಿದ್ದರೆ, ಒಣ ಕಸವನ್ನು ವಿಂಗಡಿಸಿ  ಅದನ್ನು ಮರು ಬಳಕೆಗೆ ನೀಡುವ ಮೂಲಕ ಕಸದಲ್ಲೂ ಆದಾಯವನ್ನು ಈ ಪಂಚಾಯತ್ ಗಳಿಸುತ್ತಿದೆ.

ಗೊಬ್ಬರವನ್ನು ಸದುಪಯೋಗ

ಪಂಚಾಯತ್ ಉತ್ಪಾದಿಸುವ ಗೊಬ್ಬರವನ್ನು ಸದುಪಯೋಗಪಡಿಸಲು ತ್ಯಾಜ್ಯ ನಿರ್ವಹಣ ಘಟಕದ ಪಕ್ಕದಲ್ಲೇ ಇರುವ ಪಂಚಾಯತ್ ಜಾಗದಲ್ಲಿ ಅಡಿಕೆ ಗಿಡಗಳನ್ನು ಬೆಳೆಸಲೂ ಪಂಚಾಯ್ ತೀರ್ಮಾನಿಸಿದೆ ಎನ್ನುತ್ತಾರೆ ಮಾತೃ ಸಂಜೀವಿನ ಒಕ್ಕೂಟದ ಅಧ್ಯಕ್ಷೆ ಶ್ಯಾಮಲಾ.

ಇದನ್ನೂ ಓದಿ: Hubballi: 88 ಕಿಡಿಗೇಡಿಗಳಿಗೆ 14 ದಿನ ನ್ಯಾಯಾಂಗ ಬಂಧನ; ಗಲಭೆ ಪೀಡಿತ ಪ್ರದೇಶದಲ್ಲಿ ಪೊಲೀಸರ ಮೊಕ್ಕಾಂ

ಜಿಲ್ಲೆಯ ಇತರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಸ್ತೆ, ಗಲ್ಲಿಯಲ್ಲಿ ಕಾಣಸಿಗುವಂತಹ ತ್ಯಾಜ್ಯಗಳ ರಾಶಿ ಕಡೇಶ್ವಾಲ್ಯ ಪಂಚಾಯತ್ ವ್ಯಾಪ್ತಿಯನ್ನು ಕಂಡು ಬರುತ್ತಿಲ್ಲ. ರಸ್ತೆ ಬದಿಗಳಲ್ಲಿದ್ದ ಕಸವನ್ನು ಗ್ರಾಮದ ಎಲ್ಲಾ ಜನರನ್ನು ಸೇರಿಸಿ ಬಯಲು ಕಸಮುಕ್ತ ಅಭಿಯಾನದ ಮೂಲಕ ವಿಲೇವಾರಿ ಮಾಡುವ ಕಾರ್ಯ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಪಕ್ಕದಲ್ಲಿ ಯಾರೂ ಕಸ ಹಾಕದಂತೆ ಕಟ್ಟು ನಿಟ್ಟಿನ ಕ್ರಮಗಳನ್ನೂ ಕೈಗೊಳ್ಳುವ ಮೂಲಕ ಕಡೇಶ್ವಾಲ್ಯ ಗ್ರಾಮಪಂಚಾಯತ್  ಜಿಲ್ಲೆಯಲ್ಲಿ ಮಾದರಿ ಪಂಚಾಯತ್ ಆಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ.
Published by:Divya D
First published: