ಬಾಗಲಕೋಟೆ: ಎಲೆಕ್ಷನ್ (Election) ಬಂತು ಅಂದ್ರೆ ಸಾಕು, ಮತದಾರರ ಮನವೊಲಿಕೆಗೆ ಗಿಫ್ಟ್ ರಾಜಕೀಯ (Gift Politics) ಜೋರಾಗಿ ಸದ್ದು ಮಾಡ್ತಾನೆ ಇರುತ್ತೆ. ಈಗಲೂ ಸಹ ಅನೇಕ ಕ್ಷೇತ್ರಗಳಲ್ಲಿ ಮತದಾರರನ್ನ ಸೆಳೆಯಲು ಗಿಫ್ಟ್ ಕಸರತ್ತು ಕಂಡು ಬರುತ್ತಿವೆ. ಆದ್ರೆ ಇಲ್ಲೊಂದು ಕಡೆ ರಾಜ್ಯದ ಪ್ರಭಾವಿ ಸಚಿವರ ಬೆಂಬಲಿಗರು ಕೊಟ್ಟ ಸಕ್ಕರೆ ಪ್ಯಾಕೆಟ್ (Sugar Packet) ಮಹಿಳೆಯೊಬ್ಬರು ತಿರಸ್ಕರಿಸಿದ್ದಾರೆ. ಇತ್ತ ಮುರುಗೇಶ್ ನಿರಾಣಿ (Minister Murugesh Nirani) ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಮನೆಗಳಿಗ ಸಕ್ಕೆರೆ ಪ್ಯಾಕೆಟ್ ಮತ್ತು ಮಕ್ಕಳಿಗೆ ಅಲರಾಂ (Alarm) ಹಂಚಿಕೆ ಮಾಡಲಾಗುತ್ತಿದೆ. ಮಹಿಳೆ ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿರುವ ವಿಡಿಯೋ ವೈರಲ್ (Viral Video) ಆಗುತ್ತಿದ್ದಂತೆ, ಮತ್ತೊಂದಿಷ್ಟು ಜನರು ಗಿಫ್ಟ್ ತಿರಸ್ಕರಿಸಿದ್ದಾರೆ.
ಅನ್ನಪೂರ್ಣ ಬಗಲಿ ಎಂಬವರೇ ಮನೆಯವರೆಗೂ ಬಂದ ಸಕ್ಕರೆಯನ್ನು ತಿರಸ್ಕರಿಸಿದ್ದಾರೆ. ನಿರಾಣಿ ಬೆಂಬಲಿಗರು ಒತ್ತಾಯವಾಗಿ ಮನೆಯೊಳಗೆ ಸಕ್ಕರೆ ಪ್ಯಾಕೆಟ್ ಇರಿಸಿದರೆ ಮಹಿಳೆ ಅದನ್ನು ಹೊರಗೆ ತಂದು, ಇದು ನಮಗೆ ಬೇಡ. ದಯವಿಟ್ಟು ವಾಪಸ್ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮನೆ ಮನೆಗೆ ತೆರಳಿ ಸಕ್ಕರೆ ವಿತರಣೆ
ಅನ್ನಪೂರ್ಣ ಅವರು ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ನಿವಾಸಿ. ಕ್ಷೇತ್ರದ ಜನರು ಬೇಡ ಬೇಡ ಅಂದ್ರು ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಮಾತ್ರ ಸಕ್ಕರೆಯನ್ನು ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ.
ಮುರುಗೇಶ್ ನಿರಾಣಿ ಅವರು ಬೀಳಗಿ ಮತಕ್ಷೇತ್ರದಿಂದ ಮೂರು ಬಾರಿ ಗೆದ್ದು, ಎರಡು ಸಲ ಮಂತ್ರಿಯೂ ಆಗಿದ್ದಾರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಮತದಾರರನ್ನ ಸೆಳೆಯಲು ಗಿಫ್ಟ್ ರಾಜಕೀಯ ಶುರು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅಲಾರಂ ವಿತರಣೆ
ಕೆಲ ದಿನಗಳ ಹಿಂದಷ್ಟೇ, ಕ್ಷೇತ್ರದ ಪ್ರೌಢ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ, ನಿರಾಣಿ ಸಮೂಹ ಸಂಸ್ಥೆಯ ಲೇಬಲ್ ಇರುವ 5 ಕೆಜಿ ಸಕ್ಕರೆ ಪ್ಯಾಕೆಟ್ ಹಾಗೂ ಬಿಜೆಪಿ ಪಕ್ಷದ ಚಿಹ್ನೆ ಮತ್ತು ಸಚಿವರ ಭಾವಚಿತ್ರವಿರುವ ಅಲಾರಾಂ ವಿತರಣೆ ಮಾಡಿದದ್ದರು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾದ ಬಳಿಕ ವಿತರಣಾ ಕಾರ್ಯಕ್ರಮ ನಿಲ್ಲಿಸಲಾಗಿತ್ತು.
ಇನ್ನು ಮಹಿಳೆ ಅನ್ನಪೂರ್ಣ ಅವರು ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಸಚಿವ ನಿರಾಣಿ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಗಿಫ್ಟ್ ರೂಪದಲ್ಲಿ ಆಮಿಷವೊಡ್ಡಿ ಮತದಾರರನ್ನು ಗೆಲ್ಲುವ ಕನಸು ಕಾಣ್ತಿದ್ದಾರೆ. ಗಿಫ್ಟ್ ಬೇಡ ಎಂದಿರುವುದು ಮತದಾರರ ಜಾಗೃತಿ ಎನ್ನುವ ಮಾತುಗಳು ಕೇಳಿ ಬರ್ತಿವೆ.
ರಾಜಕಾರಣ ಅಲ್ಲ ಎಂದ ನಿರಾಣಿ
ಇನ್ನು ಇದೇ ವಿಷಯದ ಬಗ್ಗೆ ಈ ಹಿಂದೆಯೇ ಹೇಳಿಕೆ ಕೊಟ್ಟಿದ್ದ ಸಚಿವ ನಿರಾಣಿ, ಸಕ್ಕರೆ ಕೊಡ್ತಿರೋದು ನಿಜ, ಇದರಲ್ಲಿ ಯಾವುದೇ ಆಮಿಷ, ಯಾವುದೇ ರಾಜಕಾರಣ ಇಲ್ಲ ಎಂದು ಹೇಳಿದ್ದರು.
ನಿರಾಣಿ ವಿರುದ್ಧ ಜೆ.ಟಿ.ಪಾಟೀಲ್ ಕಿಡಿ
ಇತ್ತ ಬೀಳಗಿ ಕ್ಷೇತ್ರದ ಮಾಜಿ ಶಾಸಕ ಜೆ.ಟಿ ಪಾಟೀಲ್, ಸಕ್ಕರೆ ಗಿಫ್ಟ್ ಮೊದಲನೇಯ ಕಂತು. ಇನ್ನು ಎಷ್ಟು ಕಂತುಗಳು ಬರ್ತಾವೋ ನೋಡಬೇಕು. ಈಗಾಗಲೇ ಸಾಕಷ್ಟು ಕಡೆ (ನಿರಾಣಿ) ಅವರ ಗಿಫ್ಟ್ ತಿಸ್ಕರಿಸಿದ್ದಾರೆ. ಕೆಲವು ಕಡೆ ನಮ್ಮ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ. ಎಷ್ಟೇ ಗಿಫ್ಟ್ ಕೊಟ್ಟರೂ ಅವರನ್ನು ಎದುರಿಸುವ ಧೈರ್ಯ ಕಾಂಗ್ರೆಸ್ಗೆ ಇದೆ ಅಂತ ಕುಟುಕಿದ್ದಾರೆ.
ವರದಿ: ಮಂಜುನಾಥ್ ತಳವಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ