ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು (Ashok Nagar Police) ಬಂಧಿಸಿದ್ದಾರೆ. ಅಲ್ಲದೆ ಪೊಲೀಸರ ವಿಚಾರಣೆ ವೇಳೆ ಮಹಿಳೆಯೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ (Live-in Relationship) ವ್ಯಕ್ತಿಯೇ ಕೊಲೆ ಮಾಡಿರುವುದು ಖಚಿತವಾಗಿದೆ. ದೇಶದಲ್ಲಿ ಲಿವ್ ಇನ್ ಸಂಸ್ಕೃತಿ ಹೆಚ್ಚಾಗುತ್ತಿದ್ದಂತೆ ರಿಲೇಶನ್ಶಿಪ್ನಲ್ಲಿದ್ದ ಮಹಿಳೆಯರ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಸದ್ಯ ಬೆಂಗಳೂರಿನಲ್ಲಿ ಇಂತಹದ್ದೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಇದರೊಂದಿಗೆ ಹಲವು ತಜ್ಞರು ಯಾವುದೇ ಮಹಿಳೆ ಅಥವಾ ಯುವತಿ (Women) ತಮ್ಮ ಜೀವನದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಯೋಚನೆ ಮಾಡಿ ತೀರ್ಮಾನ ಮಾಡಿ. ಯಾವುದೇ ಸಂಬಂಧಕ್ಕೆ ಓಕೆ ಮಾಡುವ ಅಥವಾ ರಿಲೇಶನ್ಶಿಪ್ನಲ್ಲಿರುವ ಸಂದರ್ಭದಲ್ಲಿ ಕುಟುಂಬಸ್ಥರ (Family) ಹಾಗೂ ಸ್ನೇಹಿತರ ನಡುವಿನ ಸಂಪರ್ಕವನ್ನು ಕಡಿದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಏನಿದು ಪ್ರಕರಣ?
ಫೆಬ್ರವರಿ 13ರಂದು ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿಯ ನಿವಾಸದಲ್ಲಿ ಒಂಟಿಯಾಗಿ ವಾಸವಿದ್ದ ಕೌಸರ್ ಮುಬೀನಾ ಎಂಬಾಕೆಯನ್ನು ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯಾದ ಬಳಿಕ ಆರೋಪಿ ಸೈಲೆಂಟ್ ಆಗಿ ಮನೆಯಿಂದ ಎಸ್ಕೇಪ್ ಆಗಿದ್ದ. ಘಟನೆ ಕುರಿತ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ವೇಳೆ ಪರಿಚಯಸ್ಥ ವ್ಯಕ್ತಿಯೇ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ಶುರು ಮಾಡಿದ್ದರು.
ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ
ಸದ್ಯ ಪೊಲೀಸರು ನದೀಮ್ ಪಾಷ ಎಂಬ ಆರೋಪಿಯನ್ನು ಬಂಧನ ಮಾಡಿದ್ದಾರೆ. ಅಂದಹಾಗೆ, ಕೊಲೆಯಾದ ಕೌಸರ್ಗೆ ಈಗಾಗಲೇ ಮದುವೆಯಾಗಿದ್ದು, ಎರಡು ವರ್ಷಗಳ ಹಿಂದೆ ಕೌಟುಂಬಿಕ ಕಲಹ ಹಿನ್ನಲೆ ಮೊದಲ ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದಳು. ವಿಚ್ಚೇದನ ಪಡೆದ ಬಳಿಕ ಮಗಳ ಜೊತೆ ಒಂಟಿಯಾಗಿ ಕೌಸರ್ ವಾಸ ಮಾಡುತ್ತಿದ್ದಳು. ಈ ವೇಳೆ ಕೌಸರ್ಗೆ ನದೀಮ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ಕೆಲ ಸಮಯದ ಬಳಿಕ ಪ್ರೇಮಕ್ಕೆ ತಿರುಗಿತ್ತು. ಅಲ್ಲದೆ, ಇತ್ತೀಚೆಗೆ ನದೀಂ ಹಾಗೂ ಕೌಸರ್ ಮದುವೆ ಆಗುವ ತೀರ್ಮಾನವನ್ನು ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಆದರೆ, ಫೆಬ್ರವರಿ 13ರಂದು ಇಬ್ಬರ ನಡುವೆ ಏಕಾಏಕಿ ಜಗಳ ಶುರುವಾಗಿದೆ. ಈ ವೇಳೆ ಕೋಪದ ಕೈಗೆ ಬುದ್ಧಿ ಕೊಟ್ಟ ನದೀಮ್, ಗೆಳತಿಯ ಕುತ್ತಿಗೆ ಕೊಯ್ದು ಎಸ್ಕೇಪ್ ಆಗಿದ್ದ. ಕೌಸರ್ ಮಗಳು ಶಾಲೆಗೆ ಹೋದ ಬಳಿಕ ಮನೆಗೆ ಬಂದಿದ್ದ ನದೀಮ್ ಕೃತ್ಯ ಎಸಗಿ ಪರಾರಿಯಾಗಿದ್ದ.
ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ವಿಚ್ಛೇದನ ಪಡೆದಿದ್ದ ಮೊದಲ ಗಂಡನ ಕುರಿತು ಅನುಮಾನ ಪಟ್ಟಿದ್ದರು. ಆದರೆ ಆ ಬಳಿಕ ಕೊಲೆಯಾದ ಕೌಸರ್ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ ವೇಳೆ ಆರೋಪಿ ನದೀಮ್ ಹೆಸರು ಹೊರಕ್ಕೆ ಬಂದಿತ್ತು. ಈ ವೇಳೆ ಕಾಲ್ ಲಿಸ್ಟ್ನಲ್ಲಿ ಸಿಕ್ಕ ಮೊಬೈಲ್ ನಂಬರ್ನ ಲೊಕೇಶನ್ ಆಧರಿಸಿ ನದೀಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ನದೀಮ್, ಕೌಸರ್ ಲಿವ್ ಇನ್ ರಿಲೇಶನ್ಶಿಪ್!
ಘಟನೆ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಅವರು, ಅಶೋಕ ನಗರ ಪೊಲೀಸರು ಆರೋಪಿ ನದೀಮ್ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಬರ್ತ್ಡೇ ಗಿಫ್ಟ್ಗಾಗಿ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ. 37 ವರ್ಷದ ನದೀಮ್ ಪಾಷ ಬಂಧಿತ ಆರೋಪಿಯಾಗಿದ್ದಾನೆ. ಸೋಮವಾರದಂದು ಒಂಟಿ ಮಹಿಳೆಯ ಕೊಲೆಯಾಗಿತ್ತು.
ನದೀಮ್ ಪಾಷ ಹಾಗೂ ಕೌಸರ್ ಮುಬೀನಾ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು. ನಾಲ್ಕು ವರ್ಷದ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಬೇರೆ ಬೇರೆ ಮದುವೆಯಾಗಿದ್ದರೂ ಬಿಟ್ಟು ಇಬ್ಬರೂ ಒಟ್ಟಿಗೆ ವಾಸವಿದ್ದರು. ಸೋಮವಾರ ಕೌಸರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಹೊರಗೆ ಹೋಗಲು ಪ್ಲ್ಯಾನ್ ಮಾಡಿದ್ದರು.
ಈ ವೇಳೆ ಆರೋಪಿ ನದೀಮ್ ಪ್ರೀತಿಯಿಂದ ಬರ್ತ್ಡೇ ಗಿಫ್ಟ್ ಆಗಿ ಬೆಳ್ಳಿ ಚೈನ್ ತಂದು ಕೊಟ್ಟಿದ್ದನಂತೆ. ಆದರೆ ನದೀಮ್ ಬೆಳ್ಳಿ ಚೈನ್ ತಂದು ಕೊಟ್ಟಿದ್ದರಿಂದ ನಿರಾಸೆಗೊಂಡಿದ್ದ ಕೌಸರ್, ಬೆಳ್ಳಿ ಚೈನ್ ಕೊಟ್ಟಿದ್ಯಾ ಚಿನ್ನದ ಚೈನ್ ಕೊಡ್ತಿಯಾ ಅಂದುಕೊಂಡಿದ್ದೆ ಅಂತ ಜಗಳ ಮಾಡಿದ್ದರಂತೆ. ಇಬ್ಬರ ನಡುವೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ