ರಸ್ತೆಯಲ್ಲಿ ಗಲಾಟೆಗಳು ಸಾಮಾನ್ಯ. ಹಾಗೆಯೇ ಅವುಗಳ ವಿಡಿಯೊ ವೈರಲ್ ಆಗುವುದು ಹೊಸದೇನಲ್ಲ. ಸದ್ಯ ವಿಡಿಯೋವೊಂದು (Video) ವೈರಲ್ ಆಗಿದ್ದು, ಅದರಲ್ಲಿ ಬಾಗಲಕೋಟೆಯಲ್ಲಿ (Bagalakote) ವ್ಯಕ್ತಿಯೊಬ್ಬ ಮಹಿಳಾ ವಕೀಲರ (Advocate) ಮೇಲೆ ದೌರ್ಜನ್ಯ ಎಸಗಿರುವುದು ಕಾಣುತ್ತದೆ. ವಿಡಿಯೋ ಶನಿವಾರ (Saturday) ವೈರಲ್ ಆಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಕೀಲೆ ಸಂಗೀತಾ ಶಿಕ್ಕೇರಿ ಅವರ ನೆರೆಹೊರೆಯವರಾದ ಮಹಾಂತೇಶ ಚೋಳಚಗುಡ್ಡ ಅವರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಮಹಾಂತೇಶ್ ಮತ್ತು ಸಂಗೀತಾ ಅವರ ಕುಟುಂಬಗಳು ಈ ಹಿಂದೆ ಸಮಸ್ಯೆ ಹೊಂದಿದ್ದವು ಎಂದು ವರದಿಗಳು ತಿಳಿಸಿವೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಾಂತೇಶ್ ನನ್ನು ಬಂಧಿಸಿದ್ದಾರೆ. ಆರೋಪಿ ಬಾಗಲಕೋಟೆಯ ನವನಗರದಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದಾರೆ.
ಆಸ್ತಿ ವಿವಾದ ಹಿನ್ನೆಲೆ ಗಲಾಟೆ
ಕೆಲ ವರದಿಗಳ ಪ್ರಕಾರ, ಆಸ್ತಿ ವಿವಾದದ ಹಿನ್ನೆಲೆ ಈ ಹಲ್ಲೆ ನಡೆದಿದೆ. ವಕೀಲೆಯಾಗಿರುವ ಮಹಿಳೆ ತನ್ನ ನೆರೆಯವನಾದ ದಾಳಿ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಕೋರನ ಆಸ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ. ಹಲ್ಲೆಯ ನಂತರ, ಮಹಿಳೆಯ ವಿರುದ್ಧ ದೈಹಿಕ ಹಲ್ಲೆ ಆರೋಪದ ಮೇಲೆ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯೇ ಮೊದಲು ಹಲ್ಲೆ ಮಾಡಿದ್ದು
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಪಿತ ಮಹಾಂತೇಶ ಚೊಳಚಗುಡ್ಡ, ನಿನ್ನೆ ಪೊಲೀಸರು ಬಂದಾಗ ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ನಮ್ಮ ಮನೆಯ ಹತ್ತಿರವೇ ಇರೋದ್ರಿಂದ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನ್ನ ಚಪ್ಪಲಿಯಿಂದ ಹೊಡೆದು ,ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಗಲಾಟೆಯಲ್ಲಿ ತಳ್ಳಾಟವಾಗಿದೆ. ಆದ್ರೆ ನಾನು ಯಾರ ಕುಮ್ಮಕ್ಕಿನಿಂದ ಏನು ಮಾಡಿಲ್ಲ. ನಾನೂ ಕೂಡ ಪೊಲೀಸ್ ಠಾಣೆಗೆ ದೂರು ಕೊಡುವೆ ಎಂದಿದ್ದಾರೆ.
Hope the bar associations take note of this and stand by their colleague. https://t.co/OcDS8tyMc7
— Lavanya Ballal (@LavanyaBallal) May 15, 2022
ಬಾಗಲಕೋಟೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ವಿರುದ್ಧ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ್ದಕ್ಕಾಗಿ ನೀಡಿದ ದೂರಿನಿಂದ ತನ್ನ ಮೇಲೆ ಈ ದಾಳಿ ನಡೆದಿದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಆದರೆ ಆರೋಪಿ ಮಾತ್ರ ನಾನು ಯಾರದ್ದೋ ಪ್ರಚೋದನೆಗೆ ಒಳಗಾಗಿ ಸಂಗೀತಾ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂದು ನೇಪಾಳಕ್ಕೆ ಪ್ರಧಾನಿ ಮೋದಿ - ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದ ಕುರಿತು ಚರ್ಚೆ ಸಾಧ್ಯತೆ
ಬಿಜೆಪಿ ಮುಖಂಡ ರಾಜು ನಾಯ್ಕರ್ ಕೂಡ ಈ ಆರೋಪವನ್ನು ಅಲ್ಲಗಳೆದಿದ್ದು, ಇದು ತಮ್ಮ ವಿರುದ್ಧದ ರಾಜಕೀಯ ಸಂಚು ಎಂದು ಹೇಳಿದ್ದಾರೆ. ಅವರು ಮನೆಯನ್ನು ಕಾನೂನುಬದ್ಧವಾಗಿ ಖರೀದಿಸಿದ್ದಾರೆ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಮತ್ತು ಮಹಿಳೆಯ ಮೇಲೆ ಹಲ್ಲೆ ಮಾಡಲು ಯಾರನ್ನೂ ಪ್ರಚೋದಿಸಿಲ್ಲ ಎಂದು ಅವರು ಆರೋಪವನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ.
ಕಲಾಪ ಬಹಿಷ್ಕರಿಸಲು ವಕೀಲರ ನಿರ್ಧಾರ
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ರಾಜ್ಯಾದ್ಯಂತ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತೆ ಜಿಲ್ಲಾ ವಕೀಲರ ಸಂಘ ಕರೆ ನೀಡಿದೆ. ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ನವನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪ್ರಕರಣದ ಕುರಿತು ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ನಾಳೆ ಸ್ವಯಂ ಪ್ರೇರಿತವಾಗಿ ರಾಜ್ಯಾದ್ಯಂತ ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.
ಅಲ್ಲದೇ ಯಾವ ವಕೀಲರೂ ಅರೋಪಿ ಪರ ವಕಾಲತ್ತು ವಹಿಸದಂತೆ ವಕೀಲರು ಸ್ವಯಂ ಪ್ರೇರಿತ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಇನ್ನು ಎಫ್ ಐ ಆರ್ ನಲ್ಲಿ ದಾಖಲಾದ ಎಲ್ಲ ಆರೋಪಿಗಳನ್ನ ಬಂಧಿಸಬೇಕು, ವಕೀಲೆ ಸಂಗೀತ ಶಿಕ್ಕೇರಿ ಮನೆಗೆ ನೀರು ಕರೆಂಟ್ ಸಂಪರ್ಕ ಒದಗಿಸಬೇಕು ಎಂದು ವಕೀಲರ ಸಂಘದ ಮುಖಂಡ ಎಸ್. ಎಸ್. ಮಿಟ್ಟಲಕೋಡ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಮಹಾಂತೇಶ್ ಮತ್ತು ಸಂಗೀತಾ ಅಕ್ಕಪಕ್ಕದ ಮನೆಯವರು. ಸಂಗೀತಾ ಕುಟುಂಬದ ನಿವಾಸವನ್ನು ರಾಜು ನಾಯ್ಕರ್ ಖರೀದಿಸಿದ್ದರು. ಆದರೆ ಕುಟುಂಬ ಸದಸ್ಯರಿಗೆ ತಿಳಿಸದೆ ಚಿಕ್ಕಪ್ಪ ಮನೆ ಮಾರಾಟ ಮಾಡಿದ್ದಾರೆ ಎಂದು ಸಂಗೀತಾ ಹೇಳಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ನಾಯ್ಕರ್ ಮನೆ ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
ಇದನ್ನೂ ಓದಿ: 3 ದಿನದ ನವ ಸಂಕಲ್ಪ ಶಿಬಿರ ಮುಕ್ತಾಯ - ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಜೆಂಡಾಗಳಿವು
ಇದೇ ವೇಳೆ ಮಾಜಿ ಶಾಸಕ ಎಚ್‌ವೈ ಮೇಟಿ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ