ಕಳೆದ ಜೂ.5 ರಂದು ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ (Hosalli, Hassan) ಗ್ರಾಮದ ರೈಸ್ ಮಿಲ್ ಬಳಿ ರಾಷ್ಟ್ರೀಯ ಹೆದ್ದಾರಿ 376 (National Highway) ಹಾಸನ-ಮೈಸೂರು ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಮೃತನ ಸಾವಿನ ಬಗ್ಗೆ ಅನುಮಾನಗೊಂಡ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆಯ ನಂತರ ಸಾವಿನ ರಹಸ್ಯ (Death Secret) ಬಯಲಾಗಿದೆ. ಕುಡಿಯುವ ವಿಚಾರಕ್ಕೆ ಪತ್ನಿ, ಮಗ, ಅತ್ತೆಯೊಂದಿಗೆ ಸೇರಿ ಪತಿಯನ್ನೇ ಕೊಲೆ (Husband Murder) ಮಾಡಿದ್ದಾರೆ. ಹಾಸನ ತಾಲೂಕಿನ, ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ (52) ಕೊಲೆಯಾದ ವ್ಯಕ್ತಿ.
23 ವರ್ಷಗಳ ಹಿಂದೆ ಕೃಷ್ಣೇಗೌಡ ಮತ್ತು ಗುಡುಗನಹಳ್ಳಿ ಗ್ರಾಮದ ಜ್ಯೋತಿ ನಡುವೆ ಮದುವೆಯಾಗಿತ್ತು. ದಂಪತಿಗೆ ಶಿವಕುಮಾರ್ ಹಾಗೂ ಶಶಿಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕೃಷ್ಣೇಗೌಡ ಹೊಳೆನರಸೀಪುರ ರಸ್ತೆಯ ಮೊಸಳೆ ಹೊಸಳ್ಳಿ ರೈಸ್ ಮಿಲ್ ಹತ್ತಿರ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಅಲ್ಲೇ ವಾಸವಿದ್ದರು. ಅವರೊಂದಿಗೆ ತಾಯಿ ಪುಟ್ಟಮ್ಮ ಸಹ ವಾಸವಿದ್ದರು.
ಕುಡಿಯುವ ವಿಚಾರಕ್ಕೆ ಕೊಲೆ
ಇತ್ತೀಚೆಗೆ ಜ್ಯೋತಿ, ಶಶಿಕುಮಾರ್ ಮತ್ತು ಅತ್ತೆ ಪುಟ್ಟಮ್ಮ ಪ್ರತಿದಿನ ಕುಡಿಯುವ ವಿಚಾರಕ್ಕೆ ಕೃಷ್ಣೇಗೌಡರೊಂದಿಗೆ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ಹೋಗಿ ಹಲ್ಲೆ ಸಹ ಮಾಡುತ್ತಿದ್ದರು. ಈ ವಿಚಾರವನ್ನು ಕೃಷ್ಣೇಗೌಡ ತನ್ನ ಅಣ್ಣ ಸ್ವಾಮಿಗೌಡ ಬಳಿ ಹೇಳಿಕೊಂಡಿದ್ದರು. ಕುಡಿಯುವುದನ್ನು ಪ್ರಶ್ನಿದ್ದಕ್ಕೆ ಜ್ಯೋತಿ, ಶಶಿಕುಮಾರ್, ಪುಟ್ಟಮ್ಮನ ಮಾತು ಕೇಳಿ ನನ್ನ ಪಾಲಿನ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ: Chikkamagaluru: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳಿದ್ದ ಅರಳಿ ಮರಕ್ಕೆ ಬೆಂಕಿ
ಈ ವಿಚಾರವಾಗಿ ಹಲವು ಬಾರಿ ರಾಜಿ ಪಂಚಾಯ್ತಿ ನಡೆಸಿದ್ದರು. ಇದರ ನಡುವೆ ಸ್ವಾಮಿಗೌಡ ಅವರ ಮಗಳ ಮದುವೆ ಹಿನ್ನೆಲೆಯಲ್ಲಿ ಜೂ.5 ರಂದು ಮನೆಯಲ್ಲಿ ಔತಣ ಇಟ್ಟುಕೊಂಡಿದ್ದರು. ಅಂದು ಕೃಷ್ಣೇಗೌಡ ಮತ್ತು ಹಿರಿಯ ಮಗ ಶಿವಕುಮಾರ್ ಬಂದು ಊಟ ಮಾಡಿಕೊಂಡು ರಾತ್ರಿ 9.30 ರ ಸುಮಾರಿಗೆ ಮನೆಗೆ ಹೋಗುವುದಾಗಿ ಟಿವಿಎಸ್ ಎಕ್ಸ್ ಎಲ್ ಸೂಪರ್ ನಲ್ಲಿ ಅಲ್ಲಿಂದ ತೆರಳಿದ್ದರು. ಆದರೆ ಜ್ಯೋತಿ ಮತ್ತು ಪುಟ್ಟಮ್ಮ ಊಟಕ್ಕೆ ಬಂದಿರಲಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಪತ್ತೆ
ಮರುದಿನ ಜೂ.6 ರ ಬೆಳಗ್ಗೆ 6 ಗಂಟೆಯಲ್ಲಿ ಮೊಸಳೆ ಹೊಸಳ್ಳಿ ರೈಸ್ ಮಿಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಜೊತೆ ಒಬ್ಬ ವ್ಯಕ್ತಿ ಬಿದ್ದಿರುವುದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಹತ್ತಿರ ಹೋಗಿ ನೋಡಿದಾಗ ಕೃಷ್ಣೇಗೌಡ ಎಂದು ಗೊತ್ತಾಗಿದ್ದು ಕೂಡಲೇ ಅವರ ಸಹೋದರ ಸ್ವಾಮಿಗೌಡರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅವರು ಆಂಬ್ಯುಲೆನ್ಸ್ನಲ್ಲಿ ಕೃಷ್ಣೇಗೌಡರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಕೃಷ್ಣೇಗೌಡ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ತಮ್ಮನ ಸಾವಿನ ಬಗ್ಗೆ ಅನುಮಾನಗೊಂಡ ಸ್ವಾಮೀಗೌಡ ಗೊರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೊಲೆಯ ಹಿಂದೆ ಪತ್ನಿ ಮತ್ತು ಮಗ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತ ಕೃಷ್ಣೇಗೌಡ ವ್ಯವಸಾಯ ಮಾಡಿಕೊಂಡಿದ್ದ. ಎಲ್ಲರೊಂದಿಗೂ ಚೆನ್ನಾಗಿದ್ದರು. ಆದರೆ ಪತ್ನಿ ಜ್ಯೋತಿ ಮತ್ತು ತಾಯಿ ಪುಟ್ಟಮ್ಮ ಹಾಗೂ ಮಗ ಶಶಿಕುಮಾರ್ ದಿನವಿಡೀ ಮನೆಯಲ್ಲಿಯೇ ಕುಡಿಯುತ್ತಿದ್ದರು. ಇದನ್ನು ಕೃಷ್ಣೇಗೌಡ ಪ್ರಶ್ನಿಸುತ್ತಿದ್ದರು. ಇದರಿಂದ ಪದೇ ಪದೇ ಜಗಳವಾಗುತ್ತಿತ್ತು.
ಅಲ್ಲದೇ ಮಗ ಶಶಿಕುಮಾರ್ ನನ್ನ ಜಮೀನು ನನಗೆ ಕೊಡು ಎಂದು ಪಟ್ಟು ಹಿಡಿದಿದ್ದನು. ಇದಕ್ಕೆ ಒಪ್ಪದ ಕಾರಣ ಜೂ.5 ರಂದು ಶಶಿಕುಮಾರ್, ಜ್ಯೋತಿ, ಪುಟ್ಟಮ್ಮ ಸೇರಿ ಜಗಳ ತೆಗೆದು ಹರಿತವಾದ ಆಯುಧದಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಮನೆಯಲ್ಲಿ ರಕ್ತದ ಕಲೆ, ಮಚ್ಚು ಪತ್ತೆ
ಕೊಲೆಯನ್ನು ಮರೆಮಾಚಲು ಅಪಘಾತವಾಗಿ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ರೈಸ್ ಮಿಲ್ ಹತ್ತಿರ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿ ಏನು ಗೊತ್ತಿಲ್ಲದಂತೆ ಇದ್ದರು. ಪತಿ ರಾತ್ರಿ ಮನೆಗೆ ಬಂದಿರಲಿಲ್ಲ. ಎಲ್ಲ ಕಡೆ ಹುಡುಕಿದರು ಪತ್ತೆಯಾಗಿಲ್ಲ ಎಂದು ವದಂತಿ ಹಬ್ಬಿಸಿದ್ದರು. ಆದರೆ ಪೊಲೀಸರು ಮನೆಯ ಒಳಗೆ ತಪಾಸಣೆ ನಡೆಸಿದಾಗ ರಕ್ತ, ಮಚ್ಚು ಪತ್ತೆಯಾಗಿದೆ.
ಇದನ್ನೂ ಓದಿ: Chitradurga: ಕಾಂಗ್ರೆಸ್ನವರಿಗೂ ನೋವು ಗೊತ್ತಾಗಲಿ! ಪ್ರತಿಭಟನೆಗೆ ರಾಮುಲು ಟಾಂಗ್
ಕೂಡಲೇ ಮೂವರನ್ನು ವಶಕ್ಕೆ ಪಡೆಸು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ಪತ್ನಿ ಹಾಗೂ ಪುತ್ರ, ಪುಟ್ಟಮ್ಮನ ಜೊತೆ ಸೇರಿ ತಾಳಿಕಟ್ಟಿದ ಪತಿಗೆ, ಅಪ್ಪನಿಗೆ ಚಟ್ಟ ಕಟ್ಟಿ ಜೈಲು ಪಾಲಾಗಿದ್ದಾರೆ. ಇತ್ತ ಇನ್ನೋರ್ವ ಮಗ ಶಿವಕುಮಾರ್ ತಾಯಿ ಆಗಲಿ, ಸಹೋದರನಾಗಲಿ ತಪ್ಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ