ಉತ್ತರ ಕನ್ನಡ: ‘ಕರ್ನಾಟಕದ (Karnataka) ಕಾಶ್ಮೀರ (Kashmir)’ ಎಂದೇ ಕರೆಯಲ್ಪಡುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೇನೂ (Tourist Place) ಕಡಿಮೆ ಇಲ್ಲ. ಆದರೆ ಬಹುತೇಕ ಪ್ರವಾಸಿ ತಾಣಗಳು ಸೂಕ್ತ ನಿರ್ವಹಣೆ, ಸಮರ್ಪಕ ವ್ಯವಸ್ಥೆ ಇಲ್ಲದೇ ಕಳೆಗುಂದುತ್ತಿದೆ. ಇದಕ್ಕೆ ಉದಾಹರಣೆ ಅಂದರೆ ರಾಕ್ ಗಾರ್ಡನ್ (Rock Garden). ಕಾರವಾರದ (Karwar) ಕಡಲ ತೀರದಲ್ಲಿ (Beach) ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ್ದ ರಾಕ್ ಗಾರ್ಡನ್ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆಯಲ್ಲದೇ ಜಿಲ್ಲಾಡಳಿತದ ಆರಂಭ ಶೂರತ್ವಕ್ಕೆ ಮಾದರಿಯಂತಿದೆ. 2018 ರ ಫೆಬ್ರುವರಿ 25 ರಂದು ಉದ್ಘಾಟನೆಗೊಂಡಿದ್ದ ರಾಕ್ ಗಾರ್ಡನ್ ಕೇವಲ ನಾಲ್ಕು ವರ್ಷಗಳಲ್ಲಿ ಈ ರೀತಿ ಹಾಳು ಬೀಳಬಹುದು ಎಂದು ಯಾರೂ ಊಹಿಸಿರಲು ಸಾಧ್ಯವಿಲ್ಲ. ಆದರೀಗ ರಾಕ್ ಗಾರ್ಡನ್ ನೋಡಿದ್ರೆ ಅಯ್ಯೋ ಎನಿಸುತ್ತಿದೆ.
ಆರಂಭ ಶೂರತ್ವಕ್ಕೆ ಹಿಡಿದ ಕನ್ನಡಿ ರಾಕ್ ಗಾರ್ಡನ್
ಕಾರವಾರಕ್ಕೆ ಬರುವ ಜಿಲ್ಲಾಧಿಕಾರಿಗಳು ತಮ್ಮ ಬುದ್ಧಿ ಕೌಶಲ್ಯದಿಂದ ಏನನ್ನಾದರೂ ಹೊಸದನ್ನು ಇಲ್ಲಿ ನಿರ್ಮಿಸಿ ಹೋಗುತ್ತಾರೆ. ಆದರೆ ಹಿಂದಿನ ಜಿಲ್ಲಾಧಿಕಾರಿಗಳು ಮಾಡಿದ್ದನ್ನು ಮಾತ್ರ ಮುಂದೆ ಬಂದವರು ಮುಂದುವರೆಸಿಕೊಂಡು ಹೋಗುವುದಿಲ್ಲ ಎನ್ನುವ ಒಂದು ಅಭಿಪ್ರಾಯ ಕಾರವಾರದ ಜನತೆಯಲ್ಲಿದೆ. ಈ ಅಭಿಪ್ರಾಯ ನಿಜ ಎಂದು ರಾಕ್ ಗಾರ್ಡನ್ ದುಸ್ಥಿತಿ ಸಾರಿ ಹೇಳುವಂತಿದೆ.
ಪ್ರವಾಸಿಗರನ್ನು ಆಕರ್ಷಿಸಿದ್ದ ರಾಕ್ ಗಾರ್ಡನ್
ಆರಂಭದಲ್ಲಿ ರಾಕ್ ಗಾರ್ಡನ್ ನಿರ್ಮಿಸಿದ ಸಂದರ್ಭದಲ್ಲಿ ನೋಡಲು ಬರುವ ಪ್ರವಾಸಿಗರಿಂದ ಪ್ರತಿ ದಿನ 8 ರಿಂದ 10 ಸಾವಿರ ರು. ಆದಾಯ ಬರುತ್ತಿತ್ತು. ವಾರಾಂತ್ಯದ ದಿನಗಳಲ್ಲಿ 30 ರಿಂದ 40 ಸಾವಿರ ರು. ಆದಾಯ ಬರುತ್ತಿತ್ತು. ಹೀಗೆ ತಿಂಗಳಿಗೆ ಲಕ್ಷಾಂತರ ಆದಾಯ ಬರುತ್ತಿದ್ದ ರಾಕ್ ಗಾರ್ಡನ್ ಈ ರೀತಿ ಹಾಳು ಬೀಳಲು ಏನು ಕಾರಣ ಎಂದು ಸಂಬಂಧಪಟ್ಟ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ: Bridge: ಸೇತುವೆ ನಿರ್ಮಾಣವಾದ್ರೂ ತಪ್ಪಿಲ್ಲ ಜನರ ಸಂಕಷ್ಟ, ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟ ಕಷ್ಟ!
ಸುಣ್ಣ, ಬಣ್ಣ ಕಾಣದ ಮೂರ್ತಿಗಳು
2018 ರಲ್ಲಿ ನಿರ್ಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಮುದಾಯಗಳ ಜನಜೀವನವನ್ನು ಪ್ರತಿಬಿಂಬಿಸುವ ಮೂರ್ತಿಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಬಣ್ಣ ಹೊಡೆದಿಲ್ಲ. ಪ್ರತಿ ವರ್ಷ ಮಳೆಗಾಲ ಮುಗಿದ ನಂತರ ಬಣ್ಣ ಹೊಡೆದಿದ್ದರೆ ಈ ಮೂರ್ತಿಗಳು ಜೀವಂತಿಕೆ ಉಳಿಸಿಕೊಳ್ಳಲು ಸಾಧ್ಯವಿತ್ತು. ಬಣ್ಣವಿಲ್ಲದೆ ಈ ಮೂರ್ತಿಗಳು ಅಂದ ಕೆಡಿಸಿಕೊಂಡಿವೆ.
ಹಾಳಾಗುತ್ತಿವೆ ಚೆಂದದ ಮೂರ್ತಿಗಳು
ಇಲ್ಲಿನ ಮೀನುಗಾರ ಸಮುದಾಯದ ದೊಡ್ಡ ಮೂರ್ತಿಗಳಿಗೆ ಒಮ್ಮೆ ಬಣ್ಣ ಬಳಿಯಲಾಗಿತ್ತು ಬಿಟ್ಟರೆ ಉಳಿದ 104 ಮೂರ್ತಿಗಳಿಗೆ ಒಮ್ಮೆಯೂ ಬಣ್ಣ ಬಳಿದಿಲ್ಲ. ಹಲವು ಮೂರ್ತಿಗಳ ಕೈ ಬೆರಳುಗಳು ಮುರಿದು ಹೋಗಿವೆ. ವಿವಿಧ ಸಮುದಾಯಗಳ ಮನೆಗಳ ಮಾದರಿಗಳು ನಿರ್ವಹಣೆ ಇಲ್ಲದೇ ಹಾಳಾಗಿವೆ. ಒಂದು ಮನೆಯ ಮೇಲೆ ಮರ ಬಿದ್ದು ಮನೆ ಕುಸಿದು ಹೋಗಿದೆ. ಮರ ಬಿದ್ದು ಎರಡು ಮೂರ್ತಿ ಭಗ್ನಗೊಂಡಿದೆ.
ರಕ್ಷಣೆಯೂ ಇಲ್ಲ, ಸಿಸಿಟಿವಿಯೂ ಇಲ್ಲ!
ರಾಕ್ ಗಾರ್ಡನ್ ನ ಸಿಸಿಟಿವಿ ಹಾಳಾಗಿದೆ. ಪೂರ್ತಿ ಉದ್ಯಾನ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆ.ಇಂತಹ ದುಸ್ಥಿತಿ ಇದ್ದರೂ, ಈಗಲೂ ಪ್ರತಿ ದಿನ ನೂರಾರು ಜನರು ರಾಕ್ ಗಾರ್ಡನ್‌ಗೆ ಭೇಟಿ ನೀಡುತ್ತಿದ್ದು, ಪ್ರತಿ ದಿನ ಸುಮಾರು 3 ರಿಂದ 4 ಸಾವಿರ ರು. ಆದಾಯ ಬರುತ್ತಿದೆ. ಸೀಸನ್‌ನಲ್ಲಿ ವಾರಾಂತ್ಯದಲ್ಲಿ 15ರಿಂದ 18 ಸಾವಿರ ರು. ಆದಾಯ ಬರುತ್ತಿದೆ.
ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!
ಇಂತಹ ರಾಕ್ ಗಾರ್ಡನ್ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದರೆ, ಈಗಲೂ ಕೂಡ ಕಾರವಾರದ ಪ್ರಮುಖ ಪ್ರವಾಸಿ ತಾಣವಾಗುವ ಆಕರ್ಷಣೆ, ಸೌಂದರ್ಯ ಈ ರಾಕ್ ಗಾರ್ಡನ್ ಹೊಂದಿದೆ.ಆರಂಭದಲ್ಲಿ ರಾಕ್ ಗಾರ್ಡನ್‌ನಲ್ಲಿ ನಿರ್ವಹಣೆಗೆ 14 ಸಿಬ್ಬಂದಿಗಳಿದ್ದರೆ, ಈಗ ಕೇವಲ 7 ಸಿಬ್ಬಂದಿಗಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ