ಜಯನಗರದ ಗೆಲುವಿನೊಂದಿಗೆ ಬೆಂಗಳೂರಿನಲ್ಲಿ ನಂಬರ್​ 1 ಸ್ಥಾನ ಗಳಿಸಿದ ಕಾಂಗ್ರೆಸ್​


Updated:June 13, 2018, 2:15 PM IST
ಜಯನಗರದ ಗೆಲುವಿನೊಂದಿಗೆ ಬೆಂಗಳೂರಿನಲ್ಲಿ ನಂಬರ್​ 1 ಸ್ಥಾನ ಗಳಿಸಿದ ಕಾಂಗ್ರೆಸ್​

Updated: June 13, 2018, 2:15 PM IST- ಡಿ.ಪಿ. ಸತೀಶ್​, ನ್ಯೂಸ್​ 18 ಕನ್ನಡ

ಬೆಂಗಳೂರು, (ಜೂ 13): ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 16ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ​

ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್​. ವಿಜಯಕುಮಾರ್​ ಅಕಾಲಿಕ ಮರಣದ ಹಿನ್ನಲೆಯಲ್ಲಿ ಜಯನಗರ ವಿಧಾನ ಸಭೆ ಚುನಾವಣೆ ಮುಂದೂಡಲ್ಪಟ್ಟಿತ್ತು.

ಹತ್ತು ವರ್ಷಗಳ ನಂತರ ಕಾಂಗ್ರೆಸ್​ ಜಯನಗರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2008ರಿಂದ ಬಿ.ಎನ್​. ವಿಜಯಕುಮಾರ್​ ಸತತವಾಗಿ ಗೆದ್ದಿದ್ದರು. ಅದಕ್ಕೂ ಮುನ್ನ ವಿಜೇತ ಅಭ್ಯರ್ಥಿ ಸೌಮ್ಯಾ ರೆಡ್ಡಿಯವರ ತಂದೆ, ಕಾಂಗ್ರೆಸ್​ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಜಯನಗರ ಕ್ಷೇತ್ರದಲ್ಲಿ 1989ರಿಂದ ಸತತವಾಗಿ ಗೆಲುವು ಸಾಧಿಸಿದ್ದರು. 2008ರ ಚುನಾವಣೆಯಲ್ಲಿ ಕ್ಷೇತ್ರ ಬದಲಾಯಿಸಿ, ಬಿಟಿಎಂ ಲೇಔಟ್​ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರು.

ಟಿಕೆಟ್​ ಹಂಚಿಕೆಯಲ್ಲಿ ಬಿಜೆಪಿ ಮಾಡಿದ್ದ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ವಿಜಯಕುಮಾರ್​ ಅವರ ಸಹೋದರ ಪ್ರಹ್ಲಾದ್​ ಬಾಬು ಅವರನ್ನು ಕಣಕ್ಕಿಳಿಸುವ ಮೂಲಕ, ಅನುಕಂಪದ ಮತಗಳು ಬಿಜೆಪಿಗೆ ಸಿಗಲಿವೆ ಎಂದು ಬಿಜೆಪಿ ಅಂದಾಜಿಸಿತ್ತು. ಆದರೆ ಅನುಕಂಪದ ಅಲೆ ಬಿಜೆಪಿಯ ಪರವಾಗಿ ಕೆಲಸ ಮಾಡಲಿಲ್ಲ. ಈ ಮೂಲಕ ಕೇಸರಿ ಪಡೆಯ ಚುನಾವಣಾ ಲೆಕ್ಕಾಚಾರ ಕೈಗೂಡಲಿಲ್ಲ.
Loading...

ಕಾಂಗ್ರೆಸ್​ - ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆಯ ನಂತರ ನಡೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್​ ಎರಡನ್ನೂ ಗೆದ್ದಿದೆ. ಇದು ಬಿಜೆಪಿಗೆ ತೀವ್ರ ಮುಖಭಂಗ ಉಂಟುಮಾಡಿದ್ದು, ಪಕ್ಷದೊಳಗೆ ಅಸಮಾಧಾನ ಮೂಡಿದೆ.

2008ರಲ್ಲಿ ಕ್ಷೇತ್ರ ಮರು ವಿಗಂಡಣೆಯ ಸಂದರ್ಭದಲ್ಲಿ ಜಯನಗರ ಕ್ಷೇತ್ರ ಕೂಡಾ ವಿಂಗಡಣೆಯಾಗಿತ್ತು. ಈ ಕಾರಣಕ್ಕಾಗಿಯೇ 1989ರಿಂದ ಸತತವಾಗಿ ಗೆದ್ದ ರಾಮಿಲಿಂಗಾರೆಡ್ಡಿ 2008ರಲ್ಲಿ ಬಿಟಿಎಂ ಲೇಔಟ್​ ಕ್ಷೇತ್ರವನ್ನು ಆಯ್ದುಕೊಂಡಿದ್ದರು. ಜಾತಿ ಲೆಕ್ಕಾಚಾರದ ಪ್ರಕಾರ ಬಿಟಿಎಂ ಕ್ಷೇತ್ರ ರೆಡ್ಡಿಯವರಿಗೆ ಸುರಕ್ಷಿತವಾದ ಕ್ಷೇತ್ರವಾಗಿತ್ತು. ಅದಕ್ಕಾಗಿಯೇ ಬಿಟಿಎಂ ಕ್ಷೇತ್ರದಿಂದ ಸತತ 3 ಬಾರಿ ರೆಡ್ಡಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಮರುವಿಂಗಡಣೆ ಬಿಜೆಪಿ ಪಾಲಿಗೆ ವರದಾನವಾಗಿತ್ತು.

ಜಯನಗರ 70% ಮತದಾರರು ಮಧ್ಯಮ ವರ್ಗ ಮತ್ತು ಮೇಲ್ವರ್ಗದವರಾಗಿದ್ದಾರೆ. ಬೆಂಗಳೂರಿನ ಅತ್ಯಂತ ಶ್ರೀಮಂತ ಕ್ಷೇತ್ರಗಳಲ್ಲಿ ಜಯನಗರ ಕೂಡ ಒಂದು. ಜಯನಗರದುದ್ದಕ್ಕೂ ಪಾರ್ಕ್​ಗಳು, ಉತ್ತಮ ರಸ್ತೆ, ಸಕಲ ಸೌಲಭ್ಯಗಳಿವೆ. ಬೆಂಗಳೂರಿನ ಮಾದರಿ ಕ್ಷೇತ್ರಗಳಲ್ಲಿಯೂ ಜಯನಗರ ಸ್ಥಾನ ಪಡೆಯುತ್ತದೆ.

ಈ ಎಲ್ಲಾ ಅಂಶಗಳು ಹಿಂದಿನ ವಿಧಾನಸಭೆ ಮತ್ತು ಲೋಕ ಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭದಾಯಕವಾಗಿತ್ತು. ಕ್ಷೇತ್ರದ ಜನ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರು. ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ನಂದನ್​ ನೀಲೆಕಣಿಯವರಿಗೆ ಒಲಿಯದ ಮತದಾರರು ಬಿಜೆಪಿಯ ಅನಂತ್​ ಕುಮಾರ್​ಗೆ ಒಲಿದಿದ್ದರು.

ಕೆಲ ತಿಂಗಳುಗಳ ಹಿಂದೆ, ಕಾಂಗ್ರೆಸ್​ ಮತ್ತೆ ಜಯನಗರದಲ್ಲಿ ಅಧಿಕಾರಕ್ಕೆ ಬರುವ ಆಸೆಯನ್ನೇ ಬಿಟ್ಟಿತ್ತು. ಜಯನಗರ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು.

ಜಯನಗರ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿದ್ದು ಅನಂತ್​ ಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ. ಕಾಂಗ್ರೆಸ್​ - ಜೆಡಿಎಸ್​ ಅಪವಿತ್ರ ಮೈತ್ರಿಯನ್ನು ಧಿಕ್ಕರಿಸಿ, ಬಿಜೆಪಿಗೆ ಮತ ಹಾಕಿ ಎಂಬುದಾಗಿ ಬಿಜೆಪಿ ನಾಯಕರು ಕರೆ ಕೊಟ್ಟಿದ್ದರು.

ಜಯನಗರ ಗೆಲುವಿನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​ ವಿಧಾನ ಪರಿಷತ್​ ಸದಸ್ಯ, ರಿಜ್ವಾನ್​ ಅರ್ಷದ್​ "ಬೆಂಗಳೂರಿನಲ್ಲಿ ಕಾಂಗ್ರೆಸ್​ ಬಲಶಾಲಿಯಾದ ಪಕ್ಷ. ಜಯನಗರದಲ್ಲಿ ಪಕ್ಷದ ಗೆಲುವು ಚಿಕ್ಕ ಮಾತಲ್ಲ. ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಕೈಲಿದ್ದ ಕ್ಷೇತ್ರವನ್ನು ಗೆದ್ದಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ," ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನ ಐದನೇ ಮಹಿಳಾ ಶಾಸಕರಾಗಿ ಆಯ್ಕೆಯಾದ ಸೌಮ್ಯಾ ರೆಡ್ಡಿ ಕೂಡ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಮತದಾರರಿಗೆ ವಂದನೆ ಸಲ್ಲಿಸಿದ್ದಾರೆ. ಜತೆಗೆ ಜಯನಗರವನ್ನು ವಾಪಸ್​ ಕಾಂಗ್ರೆಸ್​ಗೆ ನೀಡಿದ್ದಕ್ಕೆ ಧನ್ಯವಾದವನ್ನೂ ಹೇಳಿದ್ದಾರೆ.

ಬಿಜೆಪಿ ಅಬ್ಬರದ ಪ್ರಚಾರದ ಮುಂದೆ ಕಾಂಗ್ರೆಸ್​ನ ಪ್ರಚಾರ ಕೊಂಚ ಮಂಕಾಗಿತ್ತು. ಬಿಜೆಪಿಯ ರಾಜ್ಯ ನಾಯಕರ ದಂಡೇ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದರೆ, ಪುತ್ರಿ ಪರವಾಗಿ ರಾಮಲಿಂಗಾರೆಡ್ಡಿ ಒಬ್ಬರೇ ಪ್ರಚಾರಕ್ಕಿಳಿದಿದ್ದರು.

ಚುನಾವಣೆಗೂ ಮುನ್ನ ಬಿಜೆಪಿ 28 ಕ್ಷೇತ್ರಗಳಲ್ಲಿ 20ನ್ನು ಗೆಲ್ಲುವ ಇರಾದೆ ಹೊಂದಿತ್ತು. ಆದರೆ ಅವೆಲ್ಲವೂ ಉಲ್ಟಾ ಆಗಿ, ಕೇವಲ 11 ಕ್ಷೇತ್ರಗಳು ಮಾತ್ರ ಬಿಜೆಪಿಯ ಪಾಲಾಗಿವೆ. ಅದರಲ್ಲಿ ಐದು ಕ್ಷೇತ್ರಗಳಲ್ಲಿ ಬೆರಳೆಣಿಕೆಯ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

"ನಗರ ಪ್ರದೇಶಗಳಲ್ಲಿ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರು. ಆದರೆ ಬೆಂಗಳೂರಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ. ಇದರ ಅರ್ಥವೇನು? ಪ್ರಧಾನಿ ಮೋದಿ ಅಲೆ ಈಗಿಲ್ಲ ಎಂಬುದು ಬೆಂಗಳೂರಿನ ಫಲಿತಾಂಶದಿಂದ ಜಗಜ್ಜಾಹೀರಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಉತ್ತಮ ಪ್ರದರ್ಶನ ನೀಡಲಿದೆ," ಎಂಬ ಪ್ರತಿಕ್ರಿಯೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ನೀಡಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಫಲಿತಾಂಶದಿಂದ ಅಚ್ಚರಿ ಮೂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಬದಲಿಸುವ ಸಾಧ್ಯತೆಯಿದೆ.

First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...