ಕೋಲಾರ(ಡಿ.20): ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗೆ ಆ್ಯಪಲ್ ಸಂಸ್ಥೆ ಬೇಸರವನ್ನು ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂದಲೆ ಪ್ರಕರಣವನ್ನ ತನಿಖೆ ನಡೆಸಲು ಆ್ಯಪಲ್ ಸಂಸ್ಥೆ ಒಂದು ವಿಶೇಷ ತಂಡವನ್ನ ಕಳಿಸಿತ್ತು. ಆ ತಂಡ ನೀಡಿದ ಮೊದಲ ವರದಿಯನ್ನು ಆಧರಿಸಿಯೇ, ಆ್ಯಪಲ್ ಸಂಸ್ಥೆ ಇದೀಗ ಕಾರ್ಮಿಕರ ಪ್ರಗತಿಗೆ ತಾವು ಬದ್ದರಿರುವುದಾಗಿ ತಿಳಿಸಿದೆ. ಈ ಕುರಿತು ಅಧಿಕೃತವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆ್ಯಪಲ್ ಸಂಸ್ಥೆ, ವಿಸ್ಟ್ರಾನ್ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕರಿಂದ, ಹೆಚ್ಚುವರಿ ಕೆಲಸ ಮಾಡಿಸಿಕೊಂಡು, ವೇತನ ನೀಡುವಲ್ಲಿ ಏರುಪೇರು ಉಂಟಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ವೇತನ ಸಮಸ್ಯೆ ಆಗಿರೋದು ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ 24 ಗಂಟೆ ಸಹಾಯವಾಣಿ ತೆರೆಯುತ್ತೇವೆ. ಇಂಗ್ಲೀಷ್, ಸೇರಿದಂತೆ ಕನ್ನಡ ಹಾಗೂ ಸ್ಥಳೀಯ ಭಾಷೆಗಳನ್ನು ಒಳಗೊಂಡಂತೆ ಸಹಾಯವಾಣಿ ತೆರೆಯುವುದಾಗಿ ತಿಳಿಸಿದೆ. ವಿಸ್ಟ್ರಾನ್ ಕಂಪನಿ ನಿಗದಿತ ಕ್ರಮ ಜರುಗಿಸುವವರೆಗೂ, ಆ್ಯಪಲ್ ಸಂಸ್ಥೆಯಿಂದ ವಿಸ್ಟ್ರಾನ್ ಕಂಪನಿ ಜೊತೆಗೆ ಯಾವುದೇ ನೂತನ ವ್ಯವಹಾರವನ್ನ ಮಾಡದಿರಲು ನಾವು ತೀರ್ಮಾನಿಸಿದ್ದೇವೆ ಎಂದು ಆ್ಯಪಲ್ ತಿಳಿಸಿದೆ. ಇನ್ನು ಆ್ಯಪಲ್ ಸಂಸ್ಥೆಯ ಈ ಹೇಳಿಕೆಯಿಂದ, ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರರು ನೌಕರ ಭವಿಷ್ಯಕ್ಕೂ ಕುತ್ತು ಬರಲಿದೆಯಾ ಎನ್ನುವ ಆತಂಕ ಎದುರಾಗಿದ್ದು, ಈ ಬಗ್ಗೆ ಇನ್ನು ಸ್ಪಷ್ಟನೆ ಸಿಗಬೇಕಿದೆ.
10 ವರ್ಷದ ಬಳಿಕ ಸತ್ತ ವ್ಯಕ್ತಿಗೆ ಪುನರ್ಜನ್ಮ: ಹೇರ್ಸ್ಟೈಲ್ ಬದುಕಿಸಿದ ಕುತೂಹಲಕಾರಿ ಕಥೆ!
ವಿಸ್ಟ್ರಾನ್ ಇಂಡಿಯಾ ವೈಸ್ ಪ್ರೆಸಿಡೆಂಟ್ ವಿನ್ಸೆಂಟ್ ಲೀ ಎತ್ತಂಗಡಿ
ಆ್ಯಪಲ್ ಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ವಿಸ್ಟ್ರಾನ್ ಕಂಪನಿಯು ಅಧಿಕೃತ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದೆ. ಕಾರ್ಮಿಕರ ದಾಂದಲೆ ಪ್ರಕರಣದಲ್ಲಿ ಕೆಲ ಲೋಪದೋಷಗಳು ಕಂಡುಬಂದಿದೆ. ಹಾಗಾಗಿ ವಿಸ್ಟ್ರಾನ್ ಕಂಪನಿ ಇಂಡಿಯಾದ ಬೆಂಗಳೂರಿನ ವೈಸ್ ಪ್ರೆಸಿಡೆಂಟ್ ವಿನ್ಸೆಂಟ್ ಲೀ ರನ್ನ ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೇ ನೌಕರರ ವೇತನದಲ್ಲಿ ವ್ಯತ್ಯಯ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ, ಆಗಿರುವ ಅಡಚಣೆಗೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ. ಗುತ್ತಿಗೆ ಪಡೆದಿರುವ ಏಜೆನ್ಸಿಗಳ ವಿರುದ್ದವೂ ಕೆಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ತಪ್ಪು ಖಾತರಿಯಾದರೆ ಕಠಿಣವಾಗಿ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ನಾವು ಮುಂದೆ ಹೊಸ ತಂಡಗಳನ್ನ ರಚಿಸಿಕೊಂಡು, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದೆ.
ವಿಸ್ಟ್ರಾನ್ ಕಂಪನಿ ಜೊತೆಗೆ ಆ್ಯಪಲ್ ಸಂಸ್ಥೆ ಹೊಸ ವ್ಯವಹಾರವನ್ನ ಮಾಡದಿರಲು ನಿರ್ಧರಿಸಿದಂತೆ ಹೇಳಿದೆ. ಆದರೆ ಇದು ತಾತ್ಕಾಲಿಕ ನಿರ್ಧಾರ ಎಂತಲೂ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಗ್ರಾಮ ಪಂಚಾಯಿತಿ ಚುನಾವಣೆ ನಂತರ ಕಂಪನಿ ಜೊತೆಗೆ ಡಿಸಿಎಂ ಅಶ್ವಥ್ ನಾರಾಯಣ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ