ಬೆಂಗಳೂರು (ಡಿ.18): ಇಂದಿನಿಂದ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಇಡೀ ರಾಜ್ಯಾಡಳಿತವೇ ಬೆಳಗಾವಿಗೆ ಶಿಫ್ಟ್ ಆಗಿದೆ. ಚಳಿಗಾಲದ ಅಧಿವೇಶನ ರಂಗೇರಲಿದ್ದು, ಹೊರಗಡೆ ಚಳಿಯಿದ್ದರೆ, ಸದನದ ಒಳಗೆ ಬಿಸಿ ಹೆಚ್ಚಾಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ (Assembly Election) ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಈ ಹೊತ್ತಲ್ಲೇ ಗಡಿ ವಿವಾದದ (Border Dispute) ಕಾವು ಬೆಳಗಾವಿಯನ್ನು ಸುಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ (Winter Session) ಗಡಿ ವಿವಾದದ ಕಾವು ಮತ್ತಷ್ಟು ಹೆಚ್ಚಲಿದೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರಕ್ಕೆ (BJP Government) ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ.
10 ದಿನಗಳ ಕಾಲ ನಡೆಯಲಿದೆ ಅಧಿವೇಶ
ಇಂದಿನಿಂದ ಅಧಿವೇಶನ ಡಿಸೆಂಬರ್ 30 ರವರೆಗೆ ನಡೆಯಲಿದೆ. 10 ದಿನಗಳ ಕಾಲ ಸುವರ್ಣಸೌಧದಲ್ಲಿ ರಾಜಕೀಯ ರಂಗೇರಲಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ.
ಇದು ರಾಜಕೀಯ ಪಕ್ಷಗಳಿಗೆ ಮಹತ್ವದ ಅಧಿವೇಶನ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಈ ಬಾರಿಯ ಚಳಿಗಾಲದ ಅಧಿವೇಶನ ಭಾರೀ ಮಹತ್ವ ಪಡೆದುಕೊಂಡಿದೆ. ಮುಂದಿನ ಬಜೆಟ್ ಅಧಿವೇಶನ ಕೇವಲ ನೆಪ ಮಾತ್ರಕ್ಕೆ ನಡೆಯಲಿದ್ದು, ಈ ಅಧಿವೇಶನ ರಾಜಕೀಯ ಚಟುವಟಿಕೆಗಳಿಂದಾಗಿ ಮಹತ್ವ ಪಡೆದುಕೊಳ್ಳಲಿದೆ.
ಕಾಂಗ್ರೆಸ್ ಕೈಯಲ್ಲಿದೆ ವಿವಿಧ ಅಸ್ತ್ರ
ಇನ್ನು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಈಗಾಗಲೇ ಸಜ್ಜಾಗಿದೆ. ಮತದಾರರ ಮಾಹಿತಿ ಕಳ್ಳತನ, ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಹಗರಣಗಳು, ಗಡಿ ವಿವಾದ ಮತ್ತು ಸರ್ಕಾರದ ವೈಫಲ್ಯಗಳು, ಕೋಮು ಗಲಭೆ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ರೈತರ ಬೇಡಿಕೆಗಳು ಮುಂತಾದ ವಿಷಯಗಳನ್ನು ಹಿಡಿದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ಮಾಡಿಕೊಂಡಿದೆ.
ಸರ್ಕಾರದ ವಿರುದ್ಧ ಹರಿಹಾಯಲು ವಿಪಕ್ಷಗಳು ರೆಡಿ
ಚುನಾವಣೆ ಸಮೀಪಿಸುತ್ತಿರುವ ಕಾರಣ, ವಿರೋಧ ಪಕ್ಷಗಳು ಸರ್ಕಾರ ಯೋಜನೆಗಳು ಭರವಸೆಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. 2018 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೇ ಕಿಡಿಕಾರಿದ್ಧಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಸರ್ಕಾರದಿಂದ ಸೂಕ್ತ ಉತ್ತರಕ್ಕೆ ವಿರೋಧ ಪಕ್ಷ ಆಗ್ರಹಿಸಲಿದೆ.
ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ ಮೀಸಲಾತಿ ಕೂಗು
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ ಬೆನ್ನಲ್ಲೇ, ಪಂಚಮಸಾಲಿಗಳು ಮತ್ತು ಒಕ್ಕಲಿಗರಂತಹ ವಿವಿಧ ಸಮುದಾಯಗಳು ಮೀಸಲಾತಿ ಸಂಬಂಧಿತ ಬೇಡಿಕೆಯನ್ನು ಮುಂದಿಟ್ಟಿದೆ. ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯವೂ ಈ ಬಾರಿ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಸದನವನ್ನು ಸುಡಲಿದ್ಯಾ ಗಡಿ ವಿವಾದ ಕಿಚ್ಚು?
ಗಡಿ ವಿವಾದದಿಂದ ಬೆಳಗಾವಿ ಹೊತ್ತಿ ಉರಿದಿತ್ತು. ಇದೀಗ ವಿವಾದ ತಣ್ಣಗಾದ್ರೂ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಅಧಿವೇಶನದಲ್ಲಿ ಗಡಿ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: D K Shivakumar: ನನಗೆ ಅಮಾಯಕ ಪ್ರಶಸ್ತಿ ಕೊಡ್ಬೇಕು ಎಂದ R ಅಶೋಕ್ ಡೇಟು, ಟೈಮ್ ಫಿಕ್ಸ್ ಮಾಡಲಿ; ಡಿಕೆಶಿ ಸವಾಲು
ವಿಪಕ್ಷಗಳನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್
ಇನ್ನು ಅಧಿವೇಶದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಬಿಜೆಪಿ ಸರ್ಕಾರ ಕೂಡ ನಾನಾ ರಣತಂತ್ರ ರೂಪಿಸಿದೆ. ಮಂಗಳೂರು ಬಾಂಬ್ ಸ್ಫೋಟ ಕುರಿತು ವಿಪಕ್ಷಗಳ ನಾಯಕರು ನೀಡಿದ್ದ ಹೇಳಿಕೆಯನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ