‘ಶಾರದೆ’ ಸನ್ನಿಧಿಯಲ್ಲಿ ಕನ್ನಡಕ್ಕೆ ಆದ ಅವಮಾನ ‘ರಾಮ’ನೂರಲ್ಲೂ ಆಗದಿರಲಿ..

ಇದೇ ತಿಂಗಳ 23, 24ರಂದು ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾಗಿದೆ. ವಿಚಾರವಾದಿ ಪ್ರೊ| ಶಿವನಂಜಯ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಹಿಂದೂ ಸಂಪ್ರದಾಯಗಳನ್ನು ಟೀಕೆ ಮಾಡ್ತಾರೆ ಅನ್ನೋ ಕಾರಣಕ್ಕಷ್ಟೇ ಶಿವನಂಜಯ್ಯ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ. ಆದರೆ, ಶಿವನಂಜಯ್ಯನವರ ಕನ್ನಡ ಸೇವೆ ಇವರಿಗೆ ನಗಣ್ಯ ಅನ್ನಿಸಿಬಿಟ್ಟಿದೆ.

news18
Updated:January 18, 2020, 3:04 PM IST
‘ಶಾರದೆ’ ಸನ್ನಿಧಿಯಲ್ಲಿ ಕನ್ನಡಕ್ಕೆ ಆದ ಅವಮಾನ ‘ರಾಮ’ನೂರಲ್ಲೂ ಆಗದಿರಲಿ..
ಶೃಂಗೇರಿಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದ ಒಂದು ದೃಶ್ಯ
  • News18
  • Last Updated: January 18, 2020, 3:04 PM IST
  • Share this:
ಸಾಹಿತ್ಯ ಸಮ್ಮೇಳನ, ನುಡಿಹಬ್ಬ, ಅಕ್ಷರ ಜಾತ್ರೆ, ನುಡಿ ಜಾತ್ರೆ.. ಹೀಗೆಲ್ಲಾ ಕನ್ನಡದ ಆರಾಧನೆ ಆಗೋದು ಸಹಜ. ಕನ್ನಡಮ್ಮನ ತೇರು ಎಳೆಯೋ ದಿನ, ಅಲ್ಲಿ ಜಾತಿ, ಧರ್ಮ, ಗಡಿ ಇದ್ಯಾವುದೂ ಅಡ್ಡಿ ಆಗೋದೇ ಇಲ್ಲ. ನಿಸಾರ್​ ಅಹ್ಮದ್ ಅಧ್ಯಕ್ಷರಾಗಿದ್ದು, ಹೈದರಾಬಾದ್​ನಲ್ಲಿ ಸಮಾವೇಶ ನಡೆದಿದ್ದು ಇದಕ್ಕೆಲ್ಲಾ ಕನ್ನಡಿ. ಹಾಗೆಯೇ, ಸಾಹಿತ್ಯ ಸಮ್ಮೇಳನ ಅಂದಾಕ್ಷಣ ಕನ್ನಡಿಗರ ಎದೆಯಲ್ಲಿ ಕಿಚ್ಚು ಹೊತ್ತಿಕೊಳ್ಳುತ್ತೆ.. ಅಂಥಾ ಸಮ್ಮೇಳನದಲ್ಲೂ ಕೇಸರಿ ಕೇಕೆ ಹಾಕಿದ್ದು ಈಗ ಇತಿಹಾಸ. ಅದೆಷ್ಟೋ ದಶಕ, ಶತಕಗಳಲ್ಲ, ಮೊನ್ನೆ ಶೃಂಗೇರಿಯಲ್ಲಿ ಸಾಹಿತ್ಯ ಜಾತ್ರೆ ಮೊಟಕಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವರ ತವರಲ್ಲೇ ನಾಡದೇವಿಗೆ ಅವಮಾನದ ಕಿರೀಟ ಕೊಟ್ಟರೆಂಬ ಆರೋಪ ಕೇಳಿಬರುತ್ತಿದೆ.

ಅಲ್ಲಿದ್ದ ಸಮಸ್ಯೆಯೇ ಬೇರೆ. ಅಧ್ಯಕ್ಷರಾಗಿದ್ದ ಕಲ್ಕುಳಿ ವಿಠ್ಠಲ ಹೆಗಡೆ ಬಲಪಂಥೀಯರೋ? ನಕ್ಸಲ್ ಪ್ರತಿಪಾದಕರೋ? ಅದು ಎರಡನೇ ವಿಚಾರ. ಅಧ್ಯಕ್ಷರಾದ ಮೇಲೆ ಕನ್ನಡದ ಹಬ್ಬ ಮಾಡಬೇಕಾದ್ದು ಎಲ್ಲರ ಕರ್ತವ್ಯ. ಆದರೆ, ಅದನ್ನೂ ಕೇಸರೀಕರಣ ಮಾಡಿದರಾ ಎಂಬ ಅನುಮಾನ ಹುಟ್ಟಿದೆ.

ಇದನ್ನೂ ಓದಿ: ತಸ್ನಿಮ್ ಹೊಸ ಇತಿಹಾಸ: ಮೈಸೂರು ಮೇಯರ್ ಗದ್ದುಗೆ ಏರಿದ ಮೊದಲ ಮುಸ್ಲಿಮ್ ಮಹಿಳೆ

ಶಾರಾದಾಂಬೆ ಸನ್ನಿಧಾನ ಶೃಂಗೇರಿಯಲ್ಲೇ ಹೀಗೆ ಆಗಿರುವಾಗ ಬೇರೆ ಕಡೆ ಬಿಡ್ತಾರಾ? ಇದೀಗ ರಾಮನ ತವರೂರಿನಲ್ಲಿ ಆಗ್ತಿರೋದೂ ಅದೇ. ರಾಮ ರಾಮ ಅನ್ನೋ ಜನರಿಂದಲೇ ಇಲ್ಲೂ ಕನ್ನಡಮ್ಮನ ಹಬ್ಬಕ್ಕೆ ಅಡ್ಡಗಾಲು. ಸರ್ಕಾರ, ಆಡಳಿತ ವರ್ಗವನ್ನು ಟೀಕಿಸುತ್ತಾರೆ ಅನ್ನೋ ಕಾರಣಕ್ಕೇ ಅಧ್ಯಕ್ಷರ ಆಯ್ಕೆಯನ್ನೇ ದಾಳ ಮಾಡಿಕೊಂಡು ಇಲ್ಲೂ ಕಿಚ್ಚು ಹೊತ್ತಿಸೋ ಕೆಲಸ ಆಗಿದೆ, ಈಗಲೂ ಆಗ್ತಿದೆ.

ಇದೇ ತಿಂಗಳ 23, 24ರಂದು ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾಗಿದೆ. ವಿಚಾರವಾದಿ ಪ್ರೊ| ಶಿವನಂಜಯ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಹಿಂದೂ ಸಂಪ್ರದಾಯಗಳನ್ನು ಟೀಕೆ ಮಾಡ್ತಾರೆ ಅನ್ನೋ ಕಾರಣಕ್ಕಷ್ಟೇ ಶಿವನಂಜಯ್ಯ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ. ಆದರೆ, ಶಿವನಂಜಯ್ಯನವರ ಕನ್ನಡ ಸೇವೆ ಇವರಿಗೆ ನಗಣ್ಯ ಅನ್ನಿಸಿಬಿಟ್ಟಿದೆ. ಕುವೆಂಪು ವಿಚಾರಧಾರೆಗಳ ಲೇಖಕನ ಸಾಹಿತ್ಯ ಬೇಡವಾಗಿದೆ. ರಾಮನಗರ ಜಿಲ್ಲಾಧಿಕಾರಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿಗೆ ಈಗಾಗಲೇ ಹಿಂದೂ ಜಾಗರಣ ವೇದಿಕೆ ಪತ್ರ ಬರೆದಿದೆ... ಮುಂದೇನು ಅನ್ನೋದು ಕುತೂಹಲ...

ಇದನ್ನೂ ಓದಿ: ಅಮಿತ್​ ಶಾ ಗೋ ಬ್ಯಾಕ್​ ಘೋಷಣೆ; ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಪ್ರೊ| ಶಿವನಂಜಯ್ಯ ವಿರೋಧದ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ತಳುಕು ಹಾಕಿಕೊಳ್ಳುತ್ತಿವೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಇಲ್ಲಿನ ಉಸ್ತುವಾರಿ ಸಚಿವ. ನೆಲೆಯೇ ಇಲ್ಲದ ಬಿಜೆಪಿಯ ಸಿದ್ಧಾಂತಗಳನ್ನು ಹೇರೋ ಕೆಲಸ ಆಗ್ತಿದೆ. ಎಲ್ಲಿ ಅವಕಾಶ ಸಿಕ್ಕರೂ ಅಲ್ಲಿ ತಮ್ಮದೇ ಸಿದ್ಧಾಂತಗಳನ್ನು ತಂದು ಎಳೆಯೋ ಕೆಲಸಗಳು ಆಗ್ತಿವೆ. ಕಪಾಲಬೆಟ್ಟದ ಏಸು ಪ್ರತಿಮೆ, ಆರೋಗ್ಯ ವಿವಿ ನೆನೆಗುದಿ, ಜಿಲ್ಲಾ ಕಟ್ಟಡಗಳ ಕಾಮಗಾರಿ ಕುಂಠಿತ, ಕನಕಪುರ ಮೆಡಿಕಲ್ ಕಾಲೇಜಿಗೆ ಬ್ರೇಕ್​, ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಅಡ್ಡಗಾಲು, ಮೆಟ್ರೊ ವಿಸ್ತರಣೆ, ಬಿಡದಿ-ಹಾರೋಹಳ್ಳಿ ಕೈಗಾರಿಗೆ ಅಭಿವೃದ್ಧಿಗೆ ಅನುದಾನ.. ಹೀಗೆ ಎಲ್ಲದರಲ್ಲೂ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ರಾಮನಗರ ಜಿಲ್ಲೆಯಾಗಿದ್ದು ಕುಮಾರಸ್ವಾಮಿ ಸಿಎಂ ಆಗಿದ್ದಾಗ. ಬಳಿಕ ಸಿಎಂ ಆದ ಯಡಿಯೂರಪ್ಪನವೂ ಕೂಡ ಜಿದ್ದಿಗೆ ಬಿದ್ದು, ಶಿಕಾರಿಪುರ ಜಿಲ್ಲೆ ಮಾಡಲು ಕೈ ಹಾಕಿದ್ದರು. ಆದರೆ, ಅದು ಆಗಲಿಲ್ಲ.. ಈಗ ಮಾಡಿದ್ರೂ ಮಾಡಿಯಾರು.. ಹಾಗಾಗೇ ಕ್ಷೇತ್ರ ಅಥವಾ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ... ಬರೀ ಶಿಲಾನ್ಯಾಸ, ಉದ್ಘಾಟನಾ ಫಲಕಗಳಲ್ಲಿ ಹೆಸರು ಹಾಕಿಸಿಕೊಳ್ಳುತ್ತಿದ್ದಾರೆಯೇ ಹೊರತು ಅಭಿವೃದ್ಧಿ ವಿಚಾರದಲ್ಲಿ ಒಬ್ಬರಿಗೂ ಕಿಂಚಿತ್ತೂ ಆಸಕ್ತಿ ಕಾಣುತ್ತಿಲ್ಲ.. ಅಧಿಕಾರಿಗಳದ್ದೂ ಕೂಡ ಧರ್ಮಸಂಕಟ, ಸರ್ಕಾರದ ಮಾತು ಕೇಳಬೇಕಾ, ಜನಪ್ರತಿನಿಧಿಗಳ ಮಾತು ಕೇಳಬೇಕಾ ಅನ್ನೋದರಲ್ಲೇ ಇಡೀ ಅನುದಾನ ಕರಗಿ ನೀರಾಗಿ ಹೋಗ್ತಿದೆ.. ಇಬ್ಬರ ಜಗಳದಲ್ಲಿ ಮೂರನೇಯವ್ರಿಗೆ ಲಾಭ ಅಂತಾ ಅಧಿಕಾರಿಗದ್ದೇ ಕಾರುಬಾರು, ದರ್ಬಾರು, ಆಡಿದ್ದೇ ಆಟ.

ಸರ್ಕಾರಗಳು ಒಂದು ಪಕ್ಷದ್ದಾಗಿರಬಹುದು. ಆದರೆ, ಅಭಿವೃದ್ಧಿ ವಿಚಾರ ಬಂದಾಗ ಜಾತಿ, ಧರ್ಮ, ವೋಟಿನ ಲೆಕ್ಕಾಚಾರ ಇರಬಾರದು ಅನ್ನುತ್ತೆ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ, ಆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನೆಲ್ಲಿದೆ ಉಳಿಗಾಲ....

ವರದಿ: ಬಿ.ಎಸ್.​ ಬೈರ ಹನುಮಯ್ಯ
(ಈ ವರದಿಯಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ