ಸೂಕ್ತ ಸಂದರ್ಭದಲ್ಲಿ ನಿರಾಣಿ ಅಂಥವರ ಜಾತಕ ಬಿಚ್ಚಿಡುತ್ತೇನೆ; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಯತ್ನಾಳ್

ವಚನಾನಂದ ಶ್ರೀಗಳ ಕುರಿತು ಮಾತನಾಡಿದ ಯತ್ನಾಳ, ಯೋಗ ಮಾಡುವವರ ಬುದ್ದಿ ಸ್ಥಿಮಿತವಾಗಿರುತ್ತೆ ಅಂತ ಕೇಳಿದ್ದೆ. ನಾನಂತೂ ಯೋಗ ಮಾಡದಿದ್ದರೂ ಬೆಳಿಗ್ಗೆ ಒಂದು, ಮಧ್ಯಾಹ್ನ ಇನ್ನೊಂದು ಹೇಳಿಕೆ ನೀಡುವುದಿಲ್ಲ ಎಂದು ಹೇಳುವ ಮೂಲಕ ವಚನಾನಂದ ಸ್ವಾಮೀಜಿಗೆ ಯತ್ನಾಳ ಟಾಂಗ್ ನೀಡಿದರು.

news18-kannada
Updated:January 16, 2020, 3:28 PM IST
ಸೂಕ್ತ ಸಂದರ್ಭದಲ್ಲಿ ನಿರಾಣಿ ಅಂಥವರ ಜಾತಕ ಬಿಚ್ಚಿಡುತ್ತೇನೆ; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಯತ್ನಾಳ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್.
  • Share this:
ವಿಜಯಪುರ: ಸ್ವಾಮೀಜಿಗಳು ಜಾತಿ ರಾಜಕಾರಣ ಮಾಡಿದರೆ ಭಾರತ ಮುಂಬರುವ ದಿನಗಳಲ್ಲಿ ಇಸ್ಲಾಂ ರಾಷ್ಟ್ರವಾಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಹರಿಹರದ ವಚನಾನಂದ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ವಚನಾನಂದ ಸ್ವಾಮೀಜಿಗಳ ಹೇಳಿಕೆಗೆ ಬೇರೆ ಬೇರೆ ಸ್ವಾಮೀಜಿಗಳು ಕ್ಷಮೆ ಕೇಳುತ್ತಿದ್ದಾರೆ. ನಾನು ಹರಿಹರ ಸ್ವಾಮೀಜಿಗಳಿಗೆ ಹೇಳಿದ ಕಿವಿಮಾತನ್ನು ಬಹುತೇಕ ಸ್ವಾಮೀಜಿಗಳು ಸ್ವಾಗತಿಸಿದ್ದಾರೆ. ಕಾಶಿ ಶ್ರೀಗಳು, ಕೂಡಲ ಸಂಗಮ ಸ್ವಾಮೀಜಿಗಳು ನನ್ನ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ಸ್ವಾಮೀಜಿಯಾದವರು ಓರ್ವ ವ್ಯಕ್ತಿಯ ಪರವಾಗಿ, ಸಮಾಜ ನಿಮ್ಮನ್ನು ಕೈ ಬಿಡುವುದಾಗಿ ಹೇಳುವುದು ಆ ಸ್ವಾಮೀಜಿಗಳಿಗೆ ಶೋಭೆ ತರುವುದಲ್ಲ ಎಂದು ಹೇಳಿದರು.

ಸ್ವಾಮೀಜಿಗಳಾದವರು ಆ ಸಮುದಾಯದ ಬಡವರ ಬಗ್ಗೆ ಕಾಳಜಿ ವಹಿಸಬೇಕು.  ಜನಪ್ರತಿನಿಧಿಗಳು ತಪ್ಪಿದಾಗ ತಿದ್ದಿ ಹೇಳುವ ಕೆಲಸ ಮಾಡಬೇಕು. ಈಗ ಸ್ವಾಮೀಜಿಗಳು ಒಂದು ಪಕ್ಷದ ಬ್ರ್ಯಾಂಡ್ ಆಗಿ ಬಿಟ್ಟಿದ್ದಾರೆ. ಇದರಿಂದ ಭಕ್ತರಿಗೆ ಗೊಂದಲ ಉಂಟಾಗುತ್ತಿದೆ.  ತುಮಕೂರು ಸಿದ್ಧಗಂಗಾ ಶ್ರೀಗಳ ಆದರ್ಶವನ್ನು ಈಗಿನ ಸ್ವಾಮೀಜಿಗಳು ಪಾಲಿಸಬೇಕು.  ಅದನ್ನು ಬಿಟ್ಟು, ಹಣ ಕೇಳುವುದು, ಜಾತಿಯ ಹೆಸರಿನಲ್ಲಿ ಸ್ಪರ್ಧೆ ಮಾಡಬಾರದು ಎಂದು ಯತ್ನಾಳ ಕಿವಿಮಾತು ಹೇಳಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯಂತೆ ಎಲ್ಲರನ್ನೂ ಒಂದಾಗಿ ನೋಡುವಂತಾಗಬೇಕು. ಕಾವಿ ನೋಡಿದರೆ ಎಲ್ಲರೂ ಕಾಲು ಮುಗಿಯುತ್ತಾರೆ. ಅವರು ಧರಿಸಿರುವ ವಸ್ತ್ರಕ್ಕೆ ಗೌರವವಿದೆ. ಆ ಗೌರವವನ್ನು ಕಾಪಾಡುವ ಗುಣವೂ ಸ್ವಾಮೀಜಿಗಳಲ್ಲಿರಬೇಕು ಎಂದು ಹೇಳಿದರು.

ಸಂಗಮೇಶ ನಿರಾಣಿಯಂಥವರ ಹೇಳಿಕೆಗೆಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇದರಿಂದ ನಮ್ಮ ಗೌರವ ಕಡಿಮೆಯಾಗುತ್ತದೆ. 40 ವರ್ಷದಿಂದ ಇಂಥ ಗೂಂಡಾಗಿರಿಯನ್ನು ನೋಡಿದ್ದೇನೆ.  ರಾಜಕಾರಣ ಮಾಡಿದ್ದೇನೆ. ಯಾವಾಗ ಏನು ಮಾಡಬೇಕು ಎಂಬುದು ಗೊತ್ತಿದೆ. ನನ್ನ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಪ್ರತಿಕ್ರಿಯೆ ನೋಡಿ ಇವರು ತಿಳಿದುಕೊಳ್ಳಲಿ. ಸಚಿವ ಸಂಪುಟ ವಿಸ್ತರಣೆ ಬಳಿಕ ನನ್ನ ವಿರುದ್ಧ ಮಾತನಾಡುವವರ ಜಾತಕ ಬಿಚ್ಚಿಡುತ್ತೇನೆ. ಸೂಕ್ತ ಸಂದರ್ಭದಲ್ಲಿ ನಿರಾಣಿ ಅಂಥವರ ಜಾತಕ ಬಿಚ್ಚಿಡುತ್ತೇನೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.

ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ಡಿಕೆಶಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಂಕಿ ಹತ್ತಿದ್ದಲ್ಲಿ ಬಂದು ಕಾಯಿಸಿಕೊಳ್ಳಲು ಭೇಟಿ ನೀಡಿದ್ದಾರೆ. ಈಗ ಚಳಿ ಜಾಸ್ತಿ ಇದೆ. ಎಲ್ಲರೂ ಕಾಯಿಸಿಕೊಳ್ಳಲು ಬರುತ್ತಿದ್ದಾರೆ. ಇಂಥವರನ್ನು ಕರೆಸಿ ಭಾಷಣ ಮಾಡಿಸಿದರೆ ಹೇಗೆ? ಅದಕ್ಕೆ ನಾವು ಮೂರ್ಖರಾಗಬಾರದು. ಡಿಕೆಶಿ ಬಂದು ಯಾರಿಗೆ ಅವಮಾನ ಮಾಡಿದ್ದಾರೆ? ವೀರಶೈವ ನಾಯಕರಿಗೆ ಅವಮಾನ ಮಾಡಿದ್ದಾರೆ. ಇದು ಸಮಾಜದವರಿಗೆ ಗೊತ್ತಾಗುತ್ತದೆ. ಬಹಳ ಜಾತಿ ಮಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ.  ಯಾರಿಗಾದರೂ ಧೈರ್ಯವಿದ್ದರೆ ನಾನು ಆ ಜಾತಿಯಿಂದ ನಿಂತಿದ್ದೇನೆ ಎಂದು ಹೇಳಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಹಿಂದೂಗಳು ಒಂದಾಗದೇ ಜಾತಿ ಜಾತಿ ರಾಜಕಾರಣ ಮಾಡಿದರೆ ಭಾರತ ಇಸ್ಲಾಂ ರಾಷ್ಟ್ರವಾಗಲಿದೆ. ಮುಸ್ಲಿಮರಿಗೆ ಇಂಥ ಸ್ವಾಮೀಜಿಗಳೇ ಆಹಾರ ನೀಡುತ್ತಿದ್ದಾರೆ. ಇದೇ ರೀತಿ ಮಠಾಧೀಶರು ಧರ್ಮ ರಕ್ಷಣೆ ಮಾಡದೇ ನಮ್ಮ ಧರ್ಮವನ್ನೇ ಬೈದರೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ. ಕಾವಿ ಹಿಂದೂ ಧರ್ಮದ ಪ್ರತೀಕ. ಕಾವಿ ಹಾಕಿಕೊಂಡು ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸಿದರೆ ಹೇಗೆ? ಕಾವಿಧಾರಿಗಳು ಜಾತಿ ರಾಜಕಾರಣ ಮಾಡಿದರೆ ದೇಶಕ್ಕೆ ಧಕ್ಕೆ ಎದುರಾಗಲಿದೆ ಎಂದರು.

ಇದನ್ನು ಓದಿ: ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆಇದಕ್ಕೂ ಮುಂಚೆ ಮಾತನಾಡಿದ ಅವರು, ತಮ್ಮ ವಿರುದ್ಧ ಟೀಕೆ ಮಾಡಿರುವ ಸಂಗಮೇಶ ನಿರಾಣಿ ಅವರಂಥ ರೋಡ್ ಚಾಪ್​ಗಳಿಗೆ ಉತ್ತರ ಕೊಡುವುದಿಲ್ಲ ಎಂದು ಹೇಳಿದ ಯತ್ನಾಳ ಅವರು, ನಿನ್ನೆ ಸಂಗಮೇಶ ನಿರಾಣಿ ನೀಡಿದ್ದ ಮಾತುಕತೆ ಆಹ್ವಾನಕ್ಕೆ ಆಕ್ರೋಶ ಹೊರಹಾಕಿದರು. ಅವರಿವರ ಆಹ್ವಾನ ಸ್ವೀಕರಿಸಲು ನಾನೇನು ರೋಡ್ ಚಾಪ್ ಲೀಡರ್ ಅಲ್ಲ. ಬೀದಿ ನಾಯಿಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಹಿಂದೆಯೇ ಹೇಳಿದ್ದೆ.  ರೋಡ್ ಚಾಪ್​ಗಳಿಗೆಲ್ಲ ಯತ್ನಾಳ್ ಉತ್ತರ ಕೊಡುತ್ತಾ ಹೋಗಬೇಕಾ?  ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಉತ್ತರ ನೀಡಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ವಚನಾನಂದ ಶ್ರೀಗಳ ಕುರಿತು ಮಾತನಾಡಿದ ಯತ್ನಾಳ, ಯೋಗ ಮಾಡುವವರ ಬುದ್ದಿ ಸ್ಥಿಮಿತವಾಗಿರುತ್ತೆ ಅಂತ ಕೇಳಿದ್ದೆ. ನಾನಂತೂ ಯೋಗ ಮಾಡದಿದ್ದರೂ ಬೆಳಿಗ್ಗೆ ಒಂದು, ಮಧ್ಯಾಹ್ನ ಇನ್ನೊಂದು ಹೇಳಿಕೆ ನೀಡುವುದಿಲ್ಲ ಎಂದು ಹೇಳುವ ಮೂಲಕ ವಚನಾನಂದ ಸ್ವಾಮೀಜಿಗೆ ಯತ್ನಾಳ ಟಾಂಗ್ ನೀಡಿದರು. ಜೊತೆಗೆ  ವಚನಾನಂದ ಸ್ವಾಮೀಜಿ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅವರು ಆ ಸ್ಥಾನದಲ್ಲಿ ಎಷ್ಟು ದಿನ ಮುಂದುವರೆಯುತ್ತಾರೆ ಗೊತ್ತಿಲ್ಲ ಎಂದು ಯತ್ನಾಳ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading