Karnataka By Election: ನಾಳೆ 15 ಕ್ಷೇತ್ರಗಳಲ್ಲಿ ಮತದಾನ, ಅರ್ಹರಾಗ್ತಾರಾ ಅನರ್ಹರು?

ಕರ್ನಾಟಕ ಉಪ ಚುನಾವಣೆ : 2008ರ ಅಪರೇಷನ್​ ಕಮಲದ ವಿರುದ್ಧ ಕೆಂಡಕಾರಿದ್ದ ಮತದಾರ 2013ರಲ್ಲಿ ಬಿಜೆಪಿ ಪಾಳಕ್ಕೆ ತಕ್ಕ ಉತ್ತರ ನೀಡಿದ್ದ. ಈಗಲೂ ರಾಜ್ಯದಲ್ಲಿ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ. ಜೊತೆ ಜೊತೆಗೆ ಅನರ್ಹರ ವಿರುದ್ಧ ಜನಾಕ್ರೋಶವೂ ದಿನೇ ದಿನೇ ಹೆಚ್ಚುತ್ತಿದೆ.

MAshok Kumar | news18-kannada
Updated:December 4, 2019, 9:41 AM IST
Karnataka By Election: ನಾಳೆ 15 ಕ್ಷೇತ್ರಗಳಲ್ಲಿ ಮತದಾನ, ಅರ್ಹರಾಗ್ತಾರಾ ಅನರ್ಹರು?
ಪ್ರಮಾಣ ವಚನ ಸ್ಔಈಕರಿ ನೂತನ ಸಚಿವರು
  • Share this:
ಬಹು ನಿರೀಕ್ಷಿತ ಕರ್ನಾಟಕ ಉಪ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. 15 ಕ್ಷೇತ್ರದಲ್ಲಿ ನಾಳೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದ್ದು ಪಕ್ಷಾಂತರ ಮಾಡುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿದ್ದ ಅನರ್ಹ ಶಾಸಕರು ಮತ್ತೆ ಅರ್ಹರಾಗ್ತಾರ? ಮತದಾರರು ಮತ್ತೊಮ್ಮೆ ಇವರನ್ನು ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸ್ತಾರ? ಅಥವಾ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸ್ತಾರ? ಎಂಬ ಜಿಜ್ಞಾಸೆ ಮತ್ತು ಕುತೂಹಲ ಇದೀಗ ಎಲ್ಲೆಡೆ ಮನೆಮಾಡಿದೆ.

ಕರ್ನಾಟಕ ಈವರೆಗೆ ಹಲವಾರು ಕಾರಣಗಳಿಗಾಗಿ ಉಪ ಚುನಾವಣೆಯನ್ನು ಕಂಡಿದೆ. ಮತದಾರರು ಸಹ ಸಾಲಾಗಿ ನಿಂತು ಮತ್ತೊಮ್ಮೆ ತಮ್ಮ ಅಧಿಕಾರವನ್ನು ಚಲಾಯಿಸಿದ ಉದಾಹರಣೆಗಳು ರಾಜ್ಯ ರಾಜಕೀಯದಲ್ಲಿ ಸಾಕಷ್ಟಿವೆ. ಆದರೆ, ಪಕ್ಷಾಂತರಿಗಳ ಉಪಟಳಕ್ಕೆ ರಾಜ್ಯದ ಜನ ಹೀಗೆ ವರ್ಷಕ್ಕೆರಡು ಚುನಾವಣೆಯನ್ನು ಕಾಣುತ್ತಿರುವುದು ಇದು ಎರಡನೇ ಬಾರಿ.

ಈ ಹಿಂದೆ 2008ರಲ್ಲಿ ಅಂದಿನ ಸಿಎಂ ಬಿ.ಎಸ್.​ ಯಡಿಯೂರಪ್ಪ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಅಪರೇಷನ್​ ಕಮಲಕ್ಕೆ ಮುಂದಾಗಿದ್ದರು. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದರು. ಹೀಗಾಗಿ ಪಕ್ಷಾಂತರಿಗಳ ಕಾರಣಕ್ಕೆ ಮೊದಲ ಬಾರಿಗೆ ರಾಜ್ಯದ ಜನ ಇಂತಹ ಒಂದು ಉಪ ಚುನಾವಣೆಗೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ : ಅನರ್ಹ ಶಾಸಕರಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರ ಮನೆ ಬಾಗಿಲಿಗೆ ಹಾಕಿದ ಕೆ.ಆರ್.ಪೇಟೆಯ ಹೆಮ್ಮನಹಳ್ಳಿ ಗ್ರಾಮಸ್ಥರು

ಆದರೆ, ಸರಿಯಾಗಿ ಒಂದು ದಶಕದ ನಂತರ ಬಿಜೆಪಿ ಮತ್ತು ಬಿ.ಎಸ್​. ಯಡಿಯೂರಪ್ಪ ಮತ್ತೆ ಅಂತಹದ್ದೇ ಪ್ರಸಂಗಕ್ಕೆ ಕೈ ಹಾಕಿದ್ದು ಮಾತ್ರ ದುರಂತ. ಹೀಗಾಗಿ ಪಕ್ಷಾಂತರಿಗಳ ಕಾರಣಕ್ಕೆ ರಾಜ್ಯ ಎರಡನೇ ಬಾರಿಗೆ ಉಪ ಚುನಾವಣೆ ಎದುರಿಸುವಂತಾಗಿದೆ. ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಕಳೆದ ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ 17 ಅನರ್ಹ ಶಾಸಸಕರ ಪೈಕಿ 13 ಜನರ ಹಣೆಬರಹವನ್ನು ನಾಳೆ ಮತದಾರ ಬರೆಯಲಿದ್ದಾನೆ.

ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದಿಂದಲೇ ಅನರ್ಹರು ಎಂದು ಮುದ್ರೆ ಒತ್ತಿಸಿಕೊಂಡಿರುವ ನಾಯಕರ ವಿರುದ್ಧ ನಾಳೆ ಚುನಾವಣೆ ನಡೆಯಲಿರುವ ಎಲ್ಲಾ 15 ಕ್ಷೇತ್ರಗಳಲ್ಲೂ ಜನಾಕ್ರೋಶವಿದೆ. ಹಲವು ಗ್ರಾಮಗಳಲ್ಲಿ ಹಾಗೂ ಮಠ ಮಾನ್ಯಗಳಲ್ಲಿ "ಅನರ್ಹ ಶಾಸಕರಿಗೆ ಇಲ್ಲಿ ಪ್ರವೇಶವಿಲ್ಲ" ಎಂದು ಬರೆದಿರುವುದು ಕಣ್ಣಿಗೆ ರಾಚುವಂತಿದೆ. ಆದರೂ, ಬಿಜೆಪಿ ಮತ್ತು ಅನರ್ಹರ ಪಾಲಿಗೆ ಇದು ಪ್ರತಿಷ್ಠೆಯ ಕಣ.

ಪ್ರಸ್ತುತ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಬೇಕಾದರೆ ಈ ಚುನಾವಣೆಯಲ್ಲಿ ಕನಿಷ್ಠ 9 ಸ್ಥಾನಗಳನ್ನಾದರೂ ಗೆಲ್ಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರೆ. ಅಲ್ಲದೆ, ಮಾಜಿ ಸಿಎಂ ಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಅನರ್ಹ ಶಾಸಕರಿಗೆ ಈ ಚುನಾವಣೆ ರಾಜಕೀಯವಾಗಿ ಮಾಡು ಇಲ್ಲವೇ ಮಡಿ ಎಂಬಂತಹ ಸ್ಥಿತಿಯನ್ನು ನಿರ್ಮಿಸಿದೆ.ಅಕಸ್ಮಾತ್ ಈ ಚುನಾವಣೆಯಲ್ಲಿ ಅನರ್ಹರು ಸೋಲನುಭವಿಸಿದರೆ, ಅವರ ರಾಜಕೀಯ ಜೀವನವೇ ಅಂತ್ಯವಾದಂತೆ ಎಂದೂ ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಅವರಿಗೆ ಇದು ಗೆಲ್ಲಲೇಬೇಕಾದ ಚುನಾವಣೆ.

ಆದರೆ, 2008ರ ಅಪರೇಷನ್​ ಕಮಲದ ವಿರುದ್ಧ ಕೆಂಡಕಾರಿದ್ದ ಮತದಾರ 2013ರಲ್ಲಿ ಬಿಜೆಪಿ ಪಾಳಕ್ಕೆ ತಕ್ಕ ಉತ್ತರ ನೀಡಿದ್ದ. ಈಗಲೂ ರಾಜ್ಯದಲ್ಲಿ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ. ಜೊತೆ ಜೊತೆಗೆ ಅನರ್ಹರ ವಿರುದ್ಧ ಜನಾಕ್ರೋಶವೂ ದಿನೇ ದಿನೇ ಹೆಚ್ಚುತ್ತಿದೆ.

ಹೀಗಾಗಿ ನಾಳಿನ ಚುನಾವಣೆಯಲ್ಲಿ ಅನರ್ಹರು ಅರ್ಹರಾಗ್ತಾರ? ಮೈತ್ರಿ ಪಕ್ಷಗಳಿಗೆ ಟಾಂಗ್ ಕೊಡ್ತಾರ? ಮತ್ತೆ ಗೆದ್ದು ಸದನವನ್ನು ಪ್ರವೇಶಿಸುತ್ತಾರ? ಅಥವಾ ಪಕ್ಷಾಂತರ ಮಾಡಿದವರಿಗೆ ಮತದಾರ ತಕ್ಕ ಪಾಠ ಕಲಿಸ್ತಾನ? ಎಂಬ ಪ್ರಶ್ನೆಗಳು ಇದೀಗ ಸುದ್ದಿಯ ಕೇಂದ್ರದಲ್ಲಿವೆ. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್​ 09 ರ ಫಲಿತಾಂಶದ ದಿನದಂದು ಉತ್ತರ ಸಿಗಲಿದೆ.

ಇದನ್ನೂ ಓದಿ : ರಾಣೆಬೆನ್ನೂರು ಕೈ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ; ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

 
First published: December 4, 2019, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading