ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರಾ ದೇವೇಗೌಡರು?; ಜೆಡಿಎಸ್​ ರಾಜ್ಯಾಧ್ಯಕ್ಷ ಕೊಟ್ಟ ಸುಳಿವೇನು?

news18
Updated:September 11, 2018, 4:05 PM IST
ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರಾ ದೇವೇಗೌಡರು?; ಜೆಡಿಎಸ್​ ರಾಜ್ಯಾಧ್ಯಕ್ಷ ಕೊಟ್ಟ ಸುಳಿವೇನು?
  • Advertorial
  • Last Updated: September 11, 2018, 4:05 PM IST
  • Share this:
-ಅಶೋಕ್​, ನ್ಯೂಸ್ 18 ಕನ್ನಡ

ಹಾಸನ,(ಸೆ.11): ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಜೀವನಾಧಾರಿತ 'ನಮ್ಮೂರ ದ್ವಾವಪ್ಪ' ಎಂಬ ಪುಸ್ತಕವನ್ನು ಹಾಸನದ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು.

ಮಾಜಿ ಪ್ರಧಾನಿ ಎಚ್​​.ಡಿ.ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಸಮ್ಮುಖದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಉಪನ್ಯಾಸಕ ಹಾಗೂ ಲೇಖಕರೂ ಆದ ಫೈಯಜ್ ಫಾಷ ಎಂಬುವವರು ಬರೆದಿರುವ ಪುಸ್ತಕ ಇದಾಗಿದ್ದು, ದೇವೇಗೌಡರ ಹುಟ್ಟೂರಾದ ಹರದನಹಳ್ಳಿಯಿಂದ ದಿಲ್ಲಿಯವರೆಗೆ ಮಣ್ಣಿನ ಮಗ ಮಾಡಿರುವ ಸಾಧನೆ ಬಗ್ಗೆ ಪುಸ್ತಕದಲ್ಲಿ ಅನಾವರಣ ಮಾಡಲಾಗಿದೆ.ಇದೇ ವೇಳೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ತಮ್ಮ ಬದುಕಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಕೆಲವು ನನ್ನ ಸ್ನೇಹಿತರು ನನ್ನನ್ನು ಅಗಲಿದ್ದಾರೆ. ಮತ್ತೆ ಕೆಲವರು ನನ್ನ ಶ್ರೇಯಸ್ಸಿಗೆ ದುಡಿದಿದ್ದಾರೆ. ನಮಗೆ ಚಿಕ್ಕಂದಿನಲ್ಲಿ ಬಡತನವಿದ್ದು ತುಂಬಾ ಕಷ್ಟವಿತ್ತು. ಜಗತ್ತಿನಲ್ಲಿ ಕೆಟ್ಟವರು, ಒಳ್ಳೆಯವರು ಇದ್ದೇ ಇರುತ್ತಾರೆ ಇದು ಸೃಷ್ಟಿಯ ನಿಯಮ. ಜೀವನದಲ್ಲಿ ಎಲ್ಲವನ್ನೂ ನಾನು ನಿಭಾಯಿಸಿದ್ದೇನೆ. ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ ನಾನು ಕೆಲವರಿಂದ 1200 ರೂ ಸಾಲ ಪಡೆದಿದ್ದೆ. ಆಗ ಕೆಲವರು ನಾನು ಶಾಸಕನಾಗಿ ಲಂಚ ಪಡೆದಿದ್ದೇನೆ ಎಂದು ತನಿಖೆ ಮಾಡಿಸಿದ್ದರು. ನಮ್ಮೂರಿನವರೇ ಕೆಲವರು ಇಂತಹ ಕೆಲಸ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಮಾತನ್ನು ನಾನು ಬಹಳ ನೋವಿನಿಂದ ಹೇಳುತ್ತಿದ್ದೇನೆಂದು ಭಾವುಕರಾದರು.

ತಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುತ್ತಾ ದೇವೇಗೌಡರು ತಮ್ಮ ಮಾತು ಮುಂದುವರೆಸಿದರು. ನಮ್ಮೂರಿನ ಈಶ್ವರ ದೇವರ ಪೂಜಾ ಫಲವೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ. ನಾನು ಸೋತಾಗ ಹಿಂದೆ ಸರಿಯಲಿಲ್ಲ ಜನರ ಮಧ್ಯಯೇ ಇದ್ದೆನು. ನನ್ನ ಜನರೇ ನನ್ನನ್ನು ರಾಜಕೀಯವಾಗಿ ಮೇಲೆತ್ತಿದರು. ಕೆಲವು ಕಾರ್ಯಕರ್ತರು ನನ್ನ ಮನೆಗೆ ಬಂದರು. ಅವರು ನಮ್ಮ ಮನೆಯಲ್ಲೇ ಮೂತ್ರ ವಿಸರ್ಜಿಸಿದರು. ಆಗ ನನ್ನ ಹೆಂಡತಿ ಚೆನ್ನಮ್ಮ ಬೂದಿ ಹಾಕಿ ಎಲ್ಲವನ್ನೂ ಸ್ವಚ್ಛಗೊಳಿಸಿದರು. ಒಬ್ಬ ಹೆಣ್ಣುಮಗಳು ತನ್ನ ಗಂಡನ ಶ್ರೇಯಸ್ಸಿಗೆ ಎಷ್ಟು ಕೆಲಸ ಮಾಡಿದ್ದಾರೆ ಎಂಬುವನ್ನು ನಾವು ಗಮನಿಸಿಬೇಕು. ಹೊಳೆನರಸೀಪುರದಲ್ಲಿನ ಮುಸ್ಲಿಮರು ನಾನು ಅಭ್ಯರ್ಥಿಯಾದಾಗ ಕಾಂಗ್ರೆಸ್​ಗೆ ವಿರುದ್ದವಾಗಿ ನನಗೆ ಆರತಿ ಬೆಳಗಿದರು ಎಂದು ಭಾಷಣದುದ್ದಕ್ಕೂ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ರಾಜ್ಯದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಬಂಧ ನಿನ್ನೆ ಪ್ರಧಾನಿ ಭೇಟಿ ಹಿನ್ನೆಲೆ, ಎಲ್ಲಾ ವಸ್ತು ಸ್ಥಿತಿಯನ್ನು ಅಂಕಿ ಅಂಶ ಸಹಿತ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು. ನಾಳೆ ಕೇಂದ್ರದಿಂದ 2 ಅಧ್ಯಯನ ತಂಡ ರಾಜ್ಯಕ್ಕೆ ಬರಲಿದೆ. 2 ತಂಡ ವರದಿ ಸಲ್ಲಿಸಿದ ನಂತರ ಸೂಕ್ತ ಪರಿಹಾರ ನೀಡುವ ವಿಶ್ವಾಸ ಇದೆ ಎಂದರು.ರಾಜ್ಯ ಸರಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನದ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮ ಸೇರಿ ನಾನು ಯಾರನ್ನೂ‌ ದೂಷಿಸಲು ಹೋಗುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ದೇವೇಗೌಡರ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದರು. ಹರದನಹಳ್ಳಿಯನ್ನು ನೋಡಲೇಬೇಕೆಂದು ನಾನು ಒಮ್ಮೆ ಭೇಟಿ ನೀಡಿದ್ದೆ. ಹರದನಹಳ್ಳಿಯಲ್ಲಿ ನಾನು ಮಣ್ಣಿಗೆ ತಲೆ ಇಟ್ಟು ಶಿರಭಾಗಿ ನಮಸ್ಕರಿಸಿದೆ. ಹರದನಹಳ್ಳಿಯ ಈ ಮಣ್ಣು ದೇಶಕ್ಕೆ ಒಬ್ಬ ಪ್ರಧಾನಿಯನ್ನು ಕೊಟ್ಟಿರುವುದು ವಿಸ್ಮಯ. ಗೌಡರು ಹಿಂದೆ ಪ್ರಧಾನಿಯಾಗಿದ್ದಾರೆ, ಮುಂದೆಯೂ ಪ್ರಧಾನಿಯಾಗುವ ಯೋಗ್ಯತೆ ಇರುವುದು ದೇವೇಗೌಡರಿಗೆ ಮಾತ್ರ ಎಂದು ಹೇಳಿದರು.

ಕಾಶ್ಮೀರದ ಸಮಸ್ಯೆ ಬಗೆಹರಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ದೇಶದಲ್ಲಿ ಪ್ರಧಾನಿಯಾಗಲು ಇನ್ಯಾರು ನಾಯಕರಿಲ್ಲ ಎಂದು ಮೋದಿ ಹೇಳುತ್ತಾರೆ. ಮೋದಿಯವರೇ ಉತ್ತರ ಭಾರತವನ್ನೇ ನೋಡಬೇಡಿ. ದಕ್ಷಿಣ ಭಾರತವನ್ನು ನೋಡಿ ದೇವೇಗೌಡ, ದೇವರಾಜ ಅರಸುರಂತಹ ಮಹಾನ್ ನಾಯಕರಿದ್ದಾರೆ. ಜಾತ್ಯಾತೀತ ಪಕ್ಷಗಳ ನಾಯಕತ್ವವನ್ನು ದೆಹಲಿಯಲ್ಲಿ ದೇವೇಗೌಡರು ವಹಿಸಿಕೊಂಡಿದ್ದಾರೆ. 130 ಕೋಟಿ ಜನರಿಗೆ ಸ್ಪಂದಿಸುವ ಜನರ ನೋವನ್ನು ಅರಿತಿರುವ ಏಕೈಕ ವ್ಯಕ್ತಿ ದೇವೇಗೌಡರು ಎಂದು ಹೇಳಿದರು.

ಈ ಮೂಲಕ ಲೋಕಸಭಾ ಚುನಾವಣೆಗೆ ಮುಂದಿನ ತೃತೀಯ ರಂಗದ ನಾಯಕತ್ವವನ್ನು ದೇವೇಗೌಡರು ವಹಿಸುತ್ತಾರೆ ಎಂಬ ಮುನ್ಸೂಚನೆ ನೀಡಿದರು. ಜೆಡಿಎಸ್​ ರಾಜ್ಯಾಧ್ಯಕ್ಷ ಕೊಟ್ಟ ಈ ಸುಳಿವು, ತೃತೀಯ ರಂಗ ಅಧಿಕಾರಕ್ಕೆ ಬಂದರೆ ದೇವೇಗೌಡರೇ, ಮಣ್ಣಿನ ಮಗನೇ ಪ್ರಧಾನಿಯಾಗುತ್ತಾರಾ.? ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ದೇಶದಲ್ಲೇ ಮಹತ್ವದ ಪಾತ್ರ ವಹಿಸಲಿದ್ದಾರಾ.? ಎಂಬ ಕುತೂಹಲ ಮೂಡಿಸಿದೆ.
First published:September 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ