ಹಾಸನ: ಜಿಲ್ಲೆಯ ಮಲೆನಾಡು (Malenadu) ಭಾಗದಲ್ಲಿ ಕಾಡಾನೆಗಳ (Wild Elephant) ಉಪಟಳ ತೀವ್ರಗೊಂಡಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಗ್ರಾಮದಲ್ಲಿ ಗಜಪಡೆ ದಾಂಧಲೆ ನಡೆಸುತ್ತಿದ್ದು ಬೆಳೆ ನಷ್ಟದಿಂದ ರೈತರು (Farmers) ಹಾಗೂ ಕಾಫಿ ಬೆಳೆಗಾರರು (Coffee Planters) ಕಂಗಾಲಾಗಿ ಹೋಗಿದ್ದಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರದ (Karnataka Government) ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಿ ಇಲ್ಲಾ ದಯಾಮರಣಕ್ಕೆ (Euthanasia) ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾಡಾನೆಗಳ ಸಂತತಿ ಮಿತಿಮೀರಿದ್ದು ಗ್ರಾಮ, ರಸ್ತೆ, ಕೆರೆ, ನದಿಗಳಲ್ಲಿ ಕಾಣಸಿಕೊಳ್ಳುತ್ತಿದ್ದು, ಜನರು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ರೈತರಿಂದ ನೂರಾರು ಬಾರಿ ಹೋರಾಟ, ಕೇವಲ ಭರವಸೆಯಷ್ಟೇ
ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಗಜಪಡೆ ಗಲಾಟೆ ವಿಪರೀತವಾಗಿದೆ. ಕಾಡಾನೆ ಸಮಸ್ಯೆಗೆ ಬ್ರೇಕ್ ಹಾಕುವಂತೆ ನೂರಾರು ಬಾರಿ ಪ್ರತಿಭಟನೆ, ಹೋರಾಟ ನಡೆಸಿದರು ಆಡಳಿತ ನಡೆಸಿದ ಸರ್ಕಾರಗಳು ಭರವಸೆ ನೀಡಿವೆ ಹೊರತು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಂತತಿ ದುಪ್ಪಟ್ಟಾಗಿದ್ದು, ಆಹಾರ ಅರಸಿ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಕಾಡಾನೆಗಳು ಓಡಾಡುತ್ತಿವೆ. ಇದರಿಂದಾಗಿ ಪ್ರತಿನಿತ್ಯ ಮಲೆನಾಡು ಭಾಗದ ಜನರು, ವಿದ್ಯಾರ್ಥಿಗಳು ಪ್ರತಿನಿತ್ಯ ಹಗಲು, ರಾತ್ರಿ ವೇಳೆ ಜೀವ ಭಯದಲ್ಲೇ ಓಡಾಡಬೇಕಿದೆ. ಸಾವು, ನೋವಾದಾಗ ಬರುವ ಜನಪ್ರತಿನಿಧಿಗಳು ಪರಿಹಾರ ಹಾಗೂ ಭರವಸೆ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ.
ದಯಾಮರಣ ನೀಡುವಂತೆ ಸರ್ಕಾರಕ್ಕೆ ರೈತರ ಮನವಿ
ಸಕಲೇಶಪುರ ತಾಲ್ಲೂಕಿನ, ಕೆಸಲಗುಲಿ ಗ್ರಾಮದಲ್ಲಿ ಗಜಪಡೆ ದಾಳಿಯಿಂದ ಅಪಾರ ಪ್ರಮಾಣದ ಕಾಫಿ, ಭತ್ತ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಕಾಡಾನೆಗಳ ಹಿಂಡಿನ ದಾಳಿಯಿಂದ ಕಂಗಾಲಾಗಿ ಹೋಗಿರುವ ರೈತರು ದಯಾಮರಣ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Elephant Balarama: ದಸರಾ ಆನೆ ಬಲರಾಮನಿಗೆ ಗುಂಡೇಟು ಹೊಡೆದವನ ಬಂಧನ
ಇಪ್ಪತ್ತು, ಮೂವತ್ತು ವರ್ಷ ಬೇಕು ಕಾಫಿ ಗಿಡ ಬೆಳೆಯಲು, ಇದನ್ನು ನೋಡಿ ತುಂಬಾ ಬೇಜಾರಾಗುತ್ತಿದೆ. ಕಣ್ಣೀರು ಕೂಳು ಒಟ್ಟಿಗೆ ತಿನ್ಕಂಡು ಬದುಕುತ್ತಿದ್ದೇವೆ. ಒಂದೊಂದು ದಿನ ಕಳೆಯುವುದು ನಮಗೆ ದುಸ್ಸಾಹಸವಾಗಿದೆ. ಇದನ್ನೆಲ್ಲ ನೋಡಿದ್ರೆ ಜೀವಂತವಾಗಿ ಇರಬೇಕಾ? ಘನಸರ್ಕಾರ ನಮಗೆ ದಯಮಾರಣ ನೀಡಲಿ, ನಾವೆಲ್ಲಾ ಸತ್ತು ಹೋಗುತ್ತೇವೆ. ಎಲ್ಲರೂ ಸಾಯ್ತಿವಿ ಸರ್ಕಾರದವರು ಮಾತ್ರ ಇರಲಿ. ದಯಾಮರಣ ಕೊಟ್ಬಿಡಿ ನಾವೆಲ್ಲ ಮೃತ್ಯು ಪಂಜರಕ್ಕೆ ಹೋಗ್ತಿವಿ, ಅಷ್ಟು ಬೇಜಾರಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಇದು ಕೇವಲ ಒಂದು ಗ್ರಾಮದ ಕಥೆಯಲ್ಲ
ಬೆಳಿಗ್ಗೆ, ಸಂಜೆ ಯಾವ ರೀತಿ ಬದುಕಬೇಕೆಂಬುದೆ ತೋಚುತ್ತಿಲ್ಲ. ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೀರಿ. ಬರ್ತಾರೆ, ಜೀಪ್ನಲ್ಲಿ ತಿರುಗ್ತರೆ, ಅದರಿಂದ ರೈತರಿಗೆ ಒಂದು ಪೈಸದ ಉಪಕಾರ ಆಗ್ತಿಲ್ಲ. ಈಗಲಾದರೂ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದು ಒಂದು ಗ್ರಾಮದ ಕಥೆಯಲ್ಲ. ಸಕಲೇಶಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರತಿನಿತ್ಯವು ಗಜಪಡೆ ಹಾವಳಿಯಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಸಕಲೇಶಪುರ ತಾಲ್ಲೂಕಿನ, ಶಿಡಿಗಳಲೆ ಗ್ರಾಮದಲ್ಲಿ ಜಗದೀಶ್, ಮಲ್ಲಣ್ಣ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ಕುಯ್ಲಿಗೆ ಬಂದಿದ್ದ ಭತ್ತವನ್ನು ಇಪ್ಪತ್ತಕ್ಕು ಹೆಚ್ಚು ಕಾಡಾನೆಗಳು ನಾಶಪಡಿಸಿವೆ. ಇಷ್ಟೆಲ್ಲಾ ರೈತರು ಕಷ್ಟ ಅನುಭವಿಸುತ್ತಿದ್ದರು ಜನಪ್ರತಿನಿಧಿಗಳು ರೈತರ ಬಳಿ ಬಂದು ಸಮಸ್ಯೆ ಆಲಿಸಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಡುವ ಅರ್ಧ ಸಂಬಳ ನಮಗೆ ಕೊಡಲಿ
ಕಾಡಾನೆ ಸಮಸ್ಯಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯವರು ಬಂದು ಗೂಡಂಗಡಿಲಿ ಟೀ ಕುಡ್ಕಂಡು ವಾಪಾಸ್ ಹೋಗ್ತಾ ಇದ್ದಾರೆ ಹೊರತು ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ, ಅವರಿಗೆ ಕೊಡುವ ಅರ್ಧ ಸಂಬಳ ನಮಗೆ ಕೊಡಿ, ನಾವು ಕಾದು ಕಾಡಾನೆಗಳನ್ನು ದೂರ ಓಡಿಸಿ ಬೆಳೆ ಕಾಪಾಡ್ಕೊತಿವಿ.
ಎಂಎಲ್ಎ ಅವರು ಅಲ್ಲಿ, ಇಲ್ಲಿ ಗುದ್ದಲಿ ಪೂಜೆ ಮಾಡ್ಕಂಡು ಇದ್ದಾರೆ. ಅವರ ಹೆಂಡತಿ ಜಿ.ಪಂ. ಮೆಂಬರ್, ಮಗನನ್ನು ತಾ.ಪಂ. ಮೆಂಬರ್ ಮಾಡಿಕೊಳ್ಳಲಿ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ನಮ್ಮ ಊರಿನವರೇ, ಇವತ್ತಿನವರೆಗೂ ಬಂದು ನೋಡಿಲ್ಲ. ಎಲೆಕ್ಷನ್ ಹತ್ತಿರ ಬರ್ತಿದೆ ಅಂತ ಸರ್ಕಾರದವರು ಬೆಂಗಳೂರು, ಬಳ್ಳಾರಿ ಸಮಾವೇಶ ಮಾಡ್ತಿದ್ದು, ಇಲ್ಲಿನ ಸಣ್ಣ ರೈತರ ಪಾಡು ಏನಾಗಬೇಕು ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Elephant Fine: ಆನೆಗೆ ಕಬ್ಬು ನೀಡಿದ್ದಕ್ಕೆ ಈ ಲಾರಿ ಚಾಲಕ ಬರೋಬ್ಬರಿ 75 ಸಾವಿರ ದಂಡ ತೆತ್ತ!
ಟಾಸ್ಕ್ ಪೋರ್ಸ್ ರಚನೆ ಮಾಡಿದ್ರು ಫಲವಿಲ್ಲ
ಕಾಡಾನೆಗಳ ಸಮಸ್ಯೆ ಉಲ್ಬಣಗೊಂಡಿರುವುದರಿಂದ ಶಾಶ್ವತ ಪರಿಹಾರ ರೂಪಿಸುವಂತೆ ಹೋರಾಟಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಪರಿಹಾರ, ಚಿಕಿತ್ಸಾ ವೆಚ್ಚ, ಬೆಳೆ ನಷ್ಟದ ಪರಿಹಾರವನ್ನು ದುಪ್ಪಟ್ಟು ಮಾಡಿದೆ ಹಾಗೂ ಕಾಡಾನೆಗಳಿಂದ ಯಾವುದೇ ಅನಾಹುತ ಆಗದಂತೆ ಅವುಗಳ ಚಲವಲನದ ಬಗ್ಗೆ ಮಾಹಿತಿ ನೀಡಲು ಟಾಸ್ಕ್ ಪೋರ್ಸ್ ರಚನೆ ಮಾಡಿದೆ.
ಆದರೆ ಇದ್ಯಾವುದು ಇಲ್ಲಿನ ಸುದೀರ್ಘ ಸಮಸ್ಯೆಗೆ ಪರಿಹಾರವಲ್ಲ. ಇಲ್ಲಿರುವ ಎಲ್ಲಾ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವುದೊಂದೆ ಶಾಶ್ವತ ಪರಿಹಾರವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೆಕೆಂದು ಎಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
(ವರದಿ: ಕೃಷ್ಣಮೂರ್ತಿ ಐ ಕೆ, ಹಾಸನ, ನ್ಯೂಸ್18 ಕನ್ನಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ