ಚಾಮರಾಜನಗರ(ಜ.02): ಆನೆ ದಾಳಿಯಿಂದ ಬೇಸತ್ತ ಗ್ರಾಮಸ್ಥರು ಇಲ್ಲಿನ ಆರ್ಎಫ್ಓಗೇ ದಿಗ್ಭಂಧನ ಹಾಕಿರುವ ಘಟನೆ ಬಂಡೀಪುರದ ಮದ್ದೂರು ವಲಯದ ಹೊಂಗಹಳ್ಳಿಯಲ್ಲಿ ನಡೆದಿದೆ. ಹೌದು ಗ್ರಾಮದ ಜಮೀನುಗಳಿಗೆ ಕಾಡಾನೆಗಳು ಆಗಾಗ್ಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿವೆ. ಇಂದೂ ಸಹ ಮೂರ್ತಿ ಎಂಬ ರೈತನ ಜಮೀನಿಗೆ ಕಾಡಾನೆ ದಾಳಿ ಇಟ್ಟು ಬೆಳೆ ಹಾನಿ ಮಾಡಿದೆ. ಇದರಿಂದ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಆನೆಗಳು ದಾಳಿ ಇಡುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ನಡುವೆ ಆರ್ಎಫ್ಓ ಮೂರ್ತಿ ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆರಳಿದ ರೈತರು ಮಲ್ಲೇಶ್ಗೆ ದಿಗ್ಬಂಧನ ಹೇರಿದ್ದಾರೆ.
ಅತ್ತ ಕನಕಪುರ ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲೂ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಕುಪಿತಗೊಂಡ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಕನಕಪುರ ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕನಕಪುರ - ಕೋಡಿಹಳ್ಳಿ ರಸ್ತೆ ಸಂಪೂರ್ಣ ಬಂದ್ ಮಾಡಿ ರೈತರು ಪ್ರತಿಭಟಿಸಿದ್ದಾರೆ.
ಇಲ್ಲಿನ ಗ್ರಾಮಸ್ಥರು ಕಾಡಾನೆ ಹಾವಳಿ ತಪ್ಪಿಸುವಂತೆ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈವರೆಗೂ ಶ್ರೀನಿವಾಸನಹಳ್ಳಿ ಗ್ರಾಮದ ಕಡೆ ಅರಣ್ಯಾಧಿಕಾರಿಗಳು ತಲೆ ಹಾಕಿಲ್ಲ. ಹೀಗಾಗಿ ಇಂದು ಬೆಳ್ಳಗೆ 7 ಗಂಟೆಯಿಂದ ರಸ್ತೆ ತಡೆದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸುತ್ತಿದ್ದಾರೆ. ಸಮಸ್ಯೆ ಬಗೆಯರಿಯುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದೂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ