Missing Story: ಹೆಂಡತಿಗೆ 7 ವರ್ಷಗಳ ಬಳಿಕ ಎಲ್ಲವೂ ನೆನಪಾಯ್ತು.. ಸಿನಿಮೀಯವಾಗಿ ಒಂದಾದ ದಂಪತಿ!

2017 ರಲ್ಲಿ ಮಹಿಳೆಯನ್ನು ರಕ್ಷಿಸಿದ ಸಂಸ್ಥೆಯು ಕೇರಳದಲ್ಲಿರುವ ಕೇಂದ್ರ ಶಾಖೆಗೆ ಕಳುಹಿಸಿ ಕೊಳೆತಿದ್ದ ಕಾಲು ಮತ್ತು ಮಾನಸಿಕ ರೋಗಕ್ಕೆ ಚಿಕಿತ್ಸೆ ಕೊಡಿಸಿದೆ. ಏಳು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕಾಲು ಸಂಪೂರ್ಣ ಗುಣವಾಗಿದ್ದರೆ, ಮಾನಸಿಕ ಆರೋಗ್ಯ ಕೂಡ ಶೇ 90 ರಷ್ಟು ಸರಿಹೋಗಿದೆ.

ಒಟ್ಟಿಗೆ ಹೆಜ್ಜೆ ಹಾಕಿದ ಜೋಡಿ

ಒಟ್ಟಿಗೆ ಹೆಜ್ಜೆ ಹಾಕಿದ ಜೋಡಿ

  • Share this:
ಕೊಡಗು : ಚಿಕಿತ್ಸೆಗೆಂದು ಆಸ್ಪತ್ರೆಗೆ (Hospital) ದಾಖಲಾಗಿ ಅಲ್ಲಿಂದ ನಾಪತ್ತೆಯಾಗಿದ್ದ ಮಹಿಳೆ, 7 ವರ್ಷದ ಬಳಿಕ ತನ್ನ ಗಂಡನ (Husband) ಸೇರಿದ ಅಪರೂಪದ ಘಟನೆಗೆ ಮಡಿಕೇರಿಯ (Madikeri) ತನಲ್ ಸಂಸ್ಥೆ ಸಾಕ್ಷಿಯಾಗಿದೆ. ಏಳು ವರ್ಷಗಳ ಬಳಿಕ ತನ್ನ ಪತ್ನಿಯನ್ನು(Wife) ಕಂಡ ಪತಿಗೆ ದುಃಖ ಹುಮ್ಮಳಿಸಿ ಬಂದಿತ್ತು. ಏನು ಮಾತನಾಡದೆ ಪತ್ನಿಯ ತಲೆಯನ್ನು ಸವರಿ ಕಣ್ತುಂಬಿ ಬಂದ ನೀರನ್ನು ಕಣ್ಣಂಚಿನಲ್ಲೆ ತಡೆಹಿಡಿದು ಪತ್ನಿಯ ಮುದ್ದಿಸಿದ ಆ ಕ್ಷಣ ಎಂತ ಕಲ್ಲು ಹೃದಯದವನ್ನಾದರೂ ಕರಗಿಸುವಂತಿತ್ತು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಮತ್ತವರ ಪತ್ನಿ ಮುತ್ತಮ್ಮ ಏಳು ವರ್ಷದ ಬಳಿಕ ಒಂದಾಗಿದ್ದಾರೆ.

2014 ರಲ್ಲಿ ಆಸ್ಪತ್ರೆಯಿಂದ ಕಾಣೆಯಾಗಿದ್ದರು

ಸಂಬಂಧ ಎನ್ನೋದು ಎಷ್ಟು ಗಟ್ಟಿಯಾದದ್ದು ಎನ್ನೋದಕ್ಕೆ ಈ ಘಟನೆ ಸಾಕ್ಷಿ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಮ್ಮನನ್ನು 2014 ರಲ್ಲಿ ಬೆಂಗಳೂರಿಗೆ ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳು ಕಾಲ ಮುತ್ತಮ್ಮನಿಗೆ ಚಿಕಿತ್ಸೆ ಕೊಡಲಾಗಿತ್ತು. ಆದರೆ ಮುತ್ತಮ್ಮ ಇದ್ದಕ್ಕಿದ್ದಂತೆ ಒಂದು ದಿನ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದರು. ಅಂದಿನಿಂದ ಪತಿ ರಾಜಪ್ಪ, ಅಳಿಯಂದಿರಾದ ದೊರೆ, ನಾಗರಾಜ್ ಸೇರಿದಂತೆ ಇಡೀ ಕುಟುಂಬ ಮುತ್ತಮ್ಮನಿಗಾಗಿ ಹುಡುಕದ ಊರಿಲ್ಲ, ಸುತ್ತದ ಜಿಲ್ಲೆಯಿಲ್ಲ. ಕೊನೆಗೆ ತನ್ನ ಹೆಂಡತಿ ನಾಪತ್ತೆ ಎಂದು ರಾಜಪ್ಪ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಲ್ಕೈದು ವರ್ಷಗಳ ಕಾಲ ನಿತ್ಯವೂ ಹುಡುಕಾಡಿದ ರಾಜಪ್ಪ ಮತ್ತು ಕುಟುಂಬದವರು ಇನ್ನು ನಮ್ಮ ಪಾಲಿಗೆ ಅವರಿಲ್ಲ ಎಂದು ಸುಮ್ಮನಾಗಿ ಬಿಟ್ಟಿದ್ದರು.

ಮುತ್ತಮ್ಮ ಕುಟುಂಬದೊಂದಿಗಿರುವ ಫೋಟೋ


ಕಸದ ತೊಟ್ಟಿಯ ಬಳಿ ಸಿಕ್ಕಿದ್ದರು 

ಆದರೆ 2017 ರಲ್ಲಿ ಇತ್ತ ಮಡಿಕೇರಿಯ ಹೊಟೇಲ್ ಒಂದರ ಮುಂದೆ ಕಸದ ತೊಟ್ಟಿಯ ಬಳಿ ಮುತ್ತಮ್ಮ ನಡೆಯಲಾರದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೌದು ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಮುತ್ತಮ್ಮ ಅವರ ಎಡಗಾಲಿಗೆ ಏನೋ ಪೆಟ್ಟು ಬಿದ್ದಿತ್ತು. ಪರಿಣಾಮ ಕಾಲು ಗ್ಯಾಂಗ್ರಿನ್ ಗೆ ತಿರುಗಿ ಪಾದದ ಭಾಗ ಕೊಳೆತು ಉಳು ಬಿದ್ದಿತ್ತು. ಆ ಸ್ಥಿತಿಯನ್ನು ಕಂಡು ಅಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಅಂತಹ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಮುಂದಾಗಿದ್ದು ಮಡಿಕೇರಿಯ ತನಲ್ ಎಂಬ ಅನಾಥಾಶ್ರಮ. 2017 ರಲ್ಲಿ ಮಹಿಳೆಯನ್ನು ರಕ್ಷಿಸಿದ ಸಂಸ್ಥೆಯು ಕೇರಳದಲ್ಲಿರುವ ಕೇಂದ್ರ ಶಾಖೆಗೆ ಕಳುಹಿಸಿ ಕೊಳೆತಿದ್ದ ಕಾಲು ಮತ್ತು ಮಾನಸಿಕ ರೋಗಕ್ಕೆ ಚಿಕಿತ್ಸೆ ಕೊಡಿಸಿದೆ. ಏಳು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕಾಲು ಸಂಪೂರ್ಣ ಗುಣವಾಗಿದ್ದರೆ, ಮಾನಸಿಕ ಆರೋಗ್ಯ ಕೂಡ ಶೇ 90 ರಷ್ಟು ಸರಿಹೋಗಿದೆ.

ಹೆಂಡತಿ ಇದ್ದಾಳೆ ಎಂದು ತಿಳಿದು ಕಣ್ಣೀರು 

ಕೇರಳದಿಂದ ಮುತ್ತಮ್ಮ ಅವರನ್ನು ವಾಪಸ್ ಕರೆತಂದ ಬಳಿಕ ಅವರ ವಿಳಾಸ ಕೇಳಿದಾಗ ಮಹಿಳೆಯದ್ಧು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಎಂಬುವರ ಪತ್ನಿ ಎನ್ನೋದು ಗೊತ್ತಾಗಿದೆ. ಆದರೆ ಅವರನ್ನು ಪತ್ತೆಹಚ್ಚಲು ತನಲ್ ಸಂಸ್ಥೆಯ ಕೊಡಗು ಶಾಖೆಯ ವ್ಯವಸ್ಥಾಪಕ ಮಹಮ್ಮದ್ ಸಾಕಷ್ಟು ಪ್ರಯತ್ನಿಸಿದ್ದರು. ನಂತರ ಕೊಡಗು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಅವರು ಮುತ್ತಮ್ಮ ಅವರ ವಿಳಾಸ ಹುಡುಕಿಸುವುದರಲ್ಲಿ ಯಶಸ್ವಿಯಾಗಿದ್ದರು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿಗೆ ಹೋದ ಪೊಲೀಸರು ಕಟ್ಟಡ ಕಾರ್ಮಿಕರಾಗಿರುವ ರಾಜಪ್ಪ ಅವರನ್ನು ಭೇಟಿಯಾಗಿ ನಿಮ್ಮ ಪತ್ನಿ ಇದ್ದಾರೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ರಾಜಪ್ಪಗೆ ಇನ್ನಿಲ್ಲದ ಸಂತೋಷ, ದುಃಖ ಮತ್ತು ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ. ಕೂಡಲೆ ತಮ್ಮ ಅಳಿಯ ದೊರೆ ಮತ್ತು ನಾಗರಾಜು ಅವರನ್ನು ಕರೆದುಕೊಂಡು ಭಾನುವಾರ ತಡರಾತ್ರಿ ಮಡಿಕೇರಿ ತಲುಪಿದ್ದಾರೆ. ರಾತ್ರಿ ತಡವಾಗಿದ್ದರಿಂದ ರಾಜಪ್ಪ ಮತ್ತು ಅಳಿಯಂದಿರಿಗೆ ಮುತ್ತಮ್ಮನನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿಸಿದ್ದಾರೆ.

ಇದನ್ನೂ ಓದಿ: ಭಾನುವಾರದ ತಣ್ಣನೆಯ ಮಧ್ಯಾಹ್ನ ಮನೆಯಲ್ಲೇ ಗುಂಡು ಹಾರಿಸಿಕೊಂಡು BEO Suicide.. ಕಾರಣವೇನು?

ಕೊನೆಗೂ ಒಂದಾದ ದಂಪತಿ 

ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು ಏಳು ವರ್ಷಗಳ ಬಳಿಕ ಕಂಡ ಪತಿ ರಾಜಪ್ಪಗೆ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡಲಾರದೆ ಕೇವಲ ತನ್ನ ಪತಿಯ ತಲೆಯನ್ನು ಸವರಿ ಮುದ್ದು ಮಾಡಿದರು. ಈ ದೃಶ್ಯ ಎಂಥವರ ಕಣ್ಣಾಲಿಗಳು ಹೊದ್ದೆಯಾಗುವಂತೆ ಮಾಡಿದ್ದವು. ತನ್ನ ಪತಿಯನ್ನು ಕಂಡ ಮುತ್ತಮ್ಮ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ಮುತ್ತಮ್ಮಗೆ ಕೈಬಿಸಿ ಹೋಗಿ ಬಾ ಮುತ್ತಮ್ಮ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶೀಯಾಗಿತ್ತು.
Published by:Kavya V
First published: