ಗಣಿನಾಡಿನಲ್ಲಿನೊಬ್ಬ ಷಾಜಹಾನ್...! ಮಡದಿ ಕಷ್ಟನೋಡಿ ಪ್ರಯಾಣಿಕರ ತಂಗುದಾಣವನ್ನೇ ನಿರ್ಮಿಸಿದ!

news18
Updated:July 2, 2018, 12:37 PM IST
ಗಣಿನಾಡಿನಲ್ಲಿನೊಬ್ಬ ಷಾಜಹಾನ್...! ಮಡದಿ ಕಷ್ಟನೋಡಿ ಪ್ರಯಾಣಿಕರ ತಂಗುದಾಣವನ್ನೇ ನಿರ್ಮಿಸಿದ!
news18
Updated: July 2, 2018, 12:37 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಜುಲೈ 02) :  ತನ್ನ ಪತ್ನಿ ನೆನಪಿಗಾಗಿ ಷಾಜಹಾನ್ ತಾಜಮಹಲ್ ನಿರ್ಮಿಸಿರುವುದು ಎಲ್ಲರಿಗೆ ಗೊತ್ತಿದೆ. ತಾಯಿಯ ನೆನಪಿಗಾಗಿ ಮಕ್ಕಳು ಶಾಲೆ ಕಟ್ಟಿಸಿದ ಉದಾಹರಣೆಗಳಿವೆ.  ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯ ನೆನಪಿಗಾಗಿ ಪುಟ್ಟ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದಾರೆ. ಬಸ್ ಗಾಗಿ ಕಾಯುವಾಗ ತನ್ನ ಪತ್ನಿ ಅನುಭವಿಸುತಿದ್ದ ಯಾತನೆಯನ್ನು ಯಾವೊಬ್ಬ ಪ್ರಯಾಣಿಕರು ಕಷ್ಟಪಡಬಾರದು ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವ ಸತ್ಕಾರ್ಯವನ್ನು ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಅನಕೃ ವೃತ್ತದ ಹತ್ತಿರ ಇರುವ ಬಸ್ ನಿಲ್ದಾಣ ಹತ್ತಿರ ಹೋದ್ರೆ ನಿಮಗೆ ಮಿನಿ ಬಸ್ ನಿಲ್ದಾಣ ಕಾಣಸಿಗುತ್ತೆ. ಇದನ್ನು ಸರ್ಕಾರವಾಗಲಿ, ಇಲ್ಲವೇ ಶಾಸಕರ ಅನುದಾನದಲ್ಲಾಗಲಿ ನಿರ್ಮಿಸಿಲ್ಲ. ಬದಲಾಗಿ ಪತ್ನಿಯ ನೆನಪಿಗಾಗಿ ಬಸ್ ಶೆಲ್ಟರ್ ನಿರ್ಮಿಸಿ ಪ್ರಯಾಣಿಕರಿಗೆ ಅನೂಕೂಲ ಕಲ್ಪಿಸಿದ್ದಾರೆ. ಜೊತೆಗೆ ತಾಯಿ ಸ್ಮರಣಾರ್ಥ ಸಾರ್ವಜನಿಕರ ತಂಗುದಾಣ ನಿರ್ಮಿಸಲು ಪುತ್ರರು ಸಹಕಾರವನ್ನೂ ಮಾಡಿದ್ದಾರೆ.  ಕಂಪ್ಲಿ ಪಟ್ಟಣದ ನಿವಾಸಿ, ಬಿಡಿಸಿಸಿ ಬ್ಯಾಂಕನ ನಿವೃತ್ತ ವ್ಯವಸ್ಥಾಪಕರಾದ ಗಜ್ಜಲ ಭಕ್ತವತ್ಸಲಂ ತಮ್ಮ ಪತ್ನಿ ದಿನಮಣಿ ಹೆಸರಿನಲ್ಲಿ ಈ ಮಿನಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ. ಇದಕ್ಕಾಗಿ ದಿನಮಣಿಯ ಪುತ್ರರು ಬರೋಬ್ಬರಿ ಆರು ಲಕ್ಷ ರೂಪಾಯಿ ವೆಚ್ಚ ಮಾಡಿ ತಾಯಿಯ ಸ್ಮರಣಾರ್ಥ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ನೆರಳು ಕಲ್ಪಿಸಿದ್ದಾರೆ.

ಕಂಪ್ಲಿ ಪಟ್ಟಣದಲ್ಲಿ ಸರ್ಕಾರ ನಿರ್ಮಿಸಿರುವ ಬಸ್ ನಿಲ್ದಾಣ ಸಹ ಇದೆ. ಆದ್ರೆ ಹಳೆಯ ಬಸ್ ನಿಲ್ದಾಣದಿಂದ ಬಳ್ಳಾರಿ ಕಡೆ ತೆರಳುವ ಪ್ರಯಾಣಿಕರು ಅನಕೃ ವೃತ್ತದ ಬಳಿಯೇ ರಸ್ತೆ ಮಧ್ಯೆ ಸಾರಿಗೆ ವಾಹನಗಳಿಗಾಗಿ ಕಾಯಬೇಕಾಗಿತ್ತು. ಈ ಹಿಂದೆ ಪತಿ ಭಕ್ತವತ್ಸಲಂ ಪತ್ನಿ ದಿವಂಗತ ದಿನಮಣಿ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆತರುವ ವೇಳೆ ಎಲ್ಲ ಪ್ರಯಾಣಿಕರಂತೆ ಬಿಸಿಲಿನಲ್ಲಿ ಬಸ್ಗಾಗಿ ಕಾಯ್ದು ಸುಸ್ತಾಗಿದ್ದರು. ಮಳೆ ಚಳಿ, ಬಿಸಿಲು, ಬಿರುಗಾಳಿ ಎದುರಿಸಿ ಬಸ್ ಕಾಯಬೇಕಾಗಿತ್ತು. ಇದನ್ನು ಅನುಭವಿಸಿದ ಪತಿ ಭಕ್ತವತ್ಸಲಂ ಹಾಗೂ ಅವರ ಮೂವರು ಮಕ್ಕಳು ಮಿನಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ. ಸಾರ್ವಜನಿಕರಿಗೆ ನೆರವಾಗಿದ್ದಾರೆ. ಜೊತೆಗೆ ಚಿಕ್ಕದಾದ್ರೂ ಈ ಬಸ್ ಶೆಲ್ಟರ್​ನಲ್ಲಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸೀಟ್ ಕಲ್ಪಿಸಿ ಎನ್ನುವ ಸೂಚನಾ ಫಲಕ ಹಾಕಿರುವುದು ಮತ್ತೊಂದು ವಿಶೇಷ.

ಪತ್ನಿ ಮತ್ತು ತಾಯಿಯ ನೆನಪಿಗಾಗಿ ಕಂಪ್ಲಿಯ ಗಜ್ಜಲ್ ಕುಟುಂಬ ಕೇವಲ ಪ್ರಯಾಣಿಕರ ಶೆಲ್ಟರ್ ನಿರ್ಮಿಸಿ ಕೈತೊಳೆದುಕೊಂಡಿಲ್ಲ. ಬದಲಾಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಸಹ ಅಳವಡಿಸಿದ್ದಾರೆ. ಕಳೆದೊಂದು ವರುಷದಿಂದ ತಂಗುದಾಣದ ದೇಖರಿಕೆಯನ್ನು ಈ ಕುಟುಂಬದ ಸದಸ್ಯರೇ ನೋಡಿಕೊಳ್ಳುತ್ತಿದ್ದಾರೆ. ತನ್ನ ಪತ್ನಿ ನೆನಪಿಗಾಗಿ ಪತಿ ಹಾಗೂ ಮಕ್ಕಳು ಮಾಡಿದ ಈ ಸತ್ಕಾರ್ಯವನ್ನು ತಂಗುದಾಣದಲ್ಲಿದ್ದವರು ಪ್ರೀತಿಯಿಂದ ಧನ್ಯವಾದ ಅರ್ಪಿಸುತ್ತಾರೆ.

 
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...