ಬೆಂಗಳೂರು: ನಾನು ಕನ್ನಡ (Kannada) ಮಾತನಾಡಲ್ಲ, ನೀವೇ ಹಿಂದಿ (Hindi) ಮಾತನಾಡಿ ಅಂತ ಹೇಳಿದ ಯುವತಿಗೆ (Women) ಆಟೋ ಚಾಲಕನೋರ್ವ (Auto Driver) ಚಳಿ ಬಿಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಇದು ನಮ್ಮ ಭೂಮಿ ನಾವು ಏಕೆ ಹಿಂದಿ ಮಾತನಾಡಬೇಕು ಅಂತ ತಿರುಗೇಟು ಕೊಟ್ಟ ಆಟೋ ಚಾಲಕನ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ (Praise) ವ್ಯಕ್ತವಾಗುತ್ತಿದೆ. ಹೌದು, ಹಿಂದಿ ಮಾತನಾಡಿ ಎಂದ ಯುವತಿ ವಿರುದ್ಧ ಸಿಟ್ಟಿಗೆದ್ದ ಆಟೋ ಚಾಲಕ, ಆಕೆಯೊಂದಿಗೆ ವಾದ ಮಾಡಿ ತಿರುಗೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದುವರೆಗೂ ಸುಮಾರು 13 ಲಕ್ಷ ವಿವ್ಸ್ ವಿಡಿಯೋ ಪಡೆದುಕೊಂಡಿದೆ. ಅಲ್ಲದೆ, ಯುವತಿಯ ಮಾತಿಗೆ ತಲೆಬಾಗದೆ ಹಿಂದಿಯಲ್ಲಿ ಮಾತನಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ ಆಟೋ ಡ್ರೈವರ್ಗೆ ಹಲವರು ಪ್ರಶಂಸಿದ್ದಾರೆ.
ಆದರೆ, ಯುವತಿ ಹಾಗೂ ಆಟೋ ಚಾಲಕನ ನಡುವಿನ ಜಗಳಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೋದಲ್ಲಿ ಯುವತಿ, ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಡಿಮ್ಯಾಂಡ್ ಮಾಡುವುದರಿಂದ ವಾದ ಆರಂಭವಾಗುತ್ತದೆ. ಆದರೆ ಈ ಮಾತಿಗೆ ತಿರುಗೇಟು ನೀಡಿರುವ ಆಟೋ ಚಾಲಕ, ಇದು ಕರ್ನಾಟಕ, ನೀವು ಕನ್ನಡದಲ್ಲಿ ಮಾತನಾಡಬೇಕು. ಉತ್ತರ ಭಾರತದಿಂದ ಬಂದಿರುವ ನೀವು ಭಿಕ್ಷುಕರು. ನೀವು ಏಕೆ ಕರ್ನಾಟಕಕ್ಕೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಆಟೋ ಚಾಲಕ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಕ್ಕೆ ನಿರಾಕರಿಸಿರುವ ಯುವತಿ, ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ. ನಾವು ಏಕೆ ಕನ್ನಡದಲ್ಲಿ ಮಾತನಾಡಬೇಕು ಎಂದು ವಾದ ಮಾಡಿದ್ದಾರೆ.
ಇದರಿಂದ ತಾಳ್ಮೆ ಕಳೆದುಕೊಳ್ಳುವ ಆಟೋ ಚಾಲಕ ರಸ್ತೆ ಪಕ್ಕ ಆಟೋ ನಿಲ್ಲಿಸುತ್ತಾರೆ. ಇದು ನಮ್ಮ ನೆಲ, ನಿಮ್ಮ ಸ್ಥಳವಲ್ಲ. ನಾನು ಏಕೆ ಹಿಂದಿ ಮಾತನಾಡಬೇಕು ಎಂದು ಪ್ರಶ್ನಿಸಿದ್ದಾರೆ. ಆಟೋ ಚಾಲಕನ ಮಾತಿಗೆ ಉತ್ತರಿಸಲು ಆಗದೆ ಆಟೋದಿಂದ ಇಳಿಯುವ ಯುವತಿ, ಸರಿ ಆಯ್ತು ಎಂದು ಹೇಳಿದ್ದಾರೆ. ಅಲ್ಲಿಗೆ ವಿಡಿಯೋ ಕೊನೆಯಾಗಿದೆ.
ಇತ್ತೀಚೆಗಷ್ಟೇ ಬಹುಭಾಷಾ ನಟ ಪ್ರಕಾಶ್ ರಾಜ್, ನನಗೆ ಹಿಂದಿ ಬರಲ್ಲ, ಹೋಗಪ್ಪ ಎಂಬ ಬರಹ ಇರುವ ಟಿ-ಶರ್ಟ್ ಧರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ, ನಟರ ವಿರುದ್ಧ ಹಲವರು ಆಕ್ರೋಶ ಹೊರ ಹಾಕಿದ್ದರು.
ಈ ಬಗ್ಗೆ ಫೋಟೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ನನ್ನ ಬೇರು, ನನ್ನ ಮೂಲ ನನ್ನ ಕನ್ನಡ. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರೊಲ್ಲ ಅಷ್ಟೇ ಎಂದು ಬರೆದುಕೊಂಡಿದ್ದರು.
ನಾನು 7 ಭಾಷೆಗಳನ್ನು ಮಾತನಾಡುತ್ತೇನೆ. ಭಾಷೆಯನ್ನು ಕಲಿಯುವುದು ಮತ್ತು ಮಾತನಾಡುವುದು ಎಂದರೆ ಆ ಭಾಷೆ ಮಾತನಾಡುವ ಜನರನ್ನು ಗೌರವಿಸುವುದು. ನಾನು ಕೆಲಸ ಮಾಡುವ ಜನರ ಪ್ರತಿಯೊಂದು ಭಾಷೆಯನ್ನು ಕಲಿತಿದ್ದೇನೆ. ನಾನು ನನ್ನ ಭಾಷೆಯನ್ನು ಮಾತನಾಡುವಂತೆ ಒತ್ತಾಯಿಸುವುದಿಲ್ಲ. ಆದರೆ ನೀವು ನಮ್ಮನ್ನು ಅಗೌರವದಿಂದ ನೋಡಿದರೆ ಮತ್ತು ನಿಮ್ಮ ಭಾಷೆ ಮಾತನಾಡುವಂತೆ ಒತ್ತಾಯಿಸಿದರೆ ನಾನು ಎದ್ದುನಿಂತು ಪ್ರತಿಭಟಿಸುತ್ತೇನೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ