ಕಾಂಗ್ರೆಸ್ ಬಣ ಜಗಳ; ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸಭೆಯಿಂದ 15 ನಿಮಿಷದಲ್ಲೇ ಎಕ್ಸಿಟ್ ಆಗಿದ್ದು ಏಕೆ?

ಹೈ ವೋಲ್ಟೇಜ್ ಮೀಟಿಂಗ್ ಎಂದು ಭಾವಿಸಿದ್ದ ಇಂದಿನ ವರ್ಚುವಲ್‌ ಸಭೆ ನಿರೀಕ್ಷಿತ ಚರ್ಚೆ ನಡೆಯಲಿಲ್ಲ. ಬಣ ರಾಜಕೀಯ, ಗುಂಪುಗಾರಿಕೆ, ಮೂಲ ವಲಸಿಗ ಕಿತ್ತಾಟಕ್ಕೆ ಮದ್ದು ನೀಡುತ್ತೆ ಎಂದು ಭಾವಿಸಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್  ಸುರ್ಜೇವಾಲಾ ಅವರು ಕೂಡ ಸಭೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ.

ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಹಾಗೂ ಕೆಪಿಸಿಸಿ ಪದಾಧಿಕಾರಿಗಳು.

ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಹಾಗೂ ಕೆಪಿಸಿಸಿ ಪದಾಧಿಕಾರಿಗಳು.

  • Share this:
ಬೆಂಗಳೂರು: ಕಾಂಗ್ರೆಸ್ ಬಣ ಜಗಳ, ಸಂಭಾವ್ಯ ಸಿಎಂ ಗಾದಿ ಕಿತ್ತಾಟ ನಡೆಯುತ್ತಲೇ ಇದೆ. ಬಹಿರಂಗವಾಗಿರುವ ಈ ಒಳಬೇಗುದಿಗೆ ಮದ್ದು ನೀಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಇಂದು ವರ್ಚುವಲ್ ಸಭೆ ನಡೆಸಿದರು. ಆದರೆ ಸುರ್ಜೇವಾಲಾ ಅವರು ಸಂಪೂರ್ಣವಾಗಿ ಸಭೆಯಲ್ಲಿ ಭಾಗವಹಿಸಲೇ ಇಲ್ಲ. ಹಾಗಾದರೆ ಸಭೆಯಲ್ಲಿ ನಡೆದಿದ್ದೇನು? ಇಲ್ಲಿದೆ ಇನ್‌ಸೈಡ್ ಸ್ಟೋರಿ.

ಹೌದು, ಆಡಳಿತಾರೂಢ ಬಿಜೆಪಿಯಲ್ಲಿ ಇರಬೇಕಿದ್ದ ಸಿಎಂ ಕುರ್ಚಿ ಕಿತ್ತಾಟ, ವಿರೋಧ ಪಕ್ಷದ ಕಾಂಗ್ರೆಸ್ ನಲ್ಲಿ ಜೋರಾಗಿದೆ. ಗುಂಪುಗಾರಿಕೆ, ಬಣ ರಾಜಕೀಯ ಲಾಬಿ ಹೆಚ್ಚಾಗ್ತಿದೆ. ಇದಕ್ಕೆಲ್ಲ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಔಷಧಿ ನೀಡ್ತಾರೆ ಎನ್ನಲಾಗಿತ್ತು. ಆದರೆ ಸುರ್ಜೇವಾಲಾ ಸಭೆಗೆ ಹೀಗೆ ಬಂದು ಹಾಗೆ ಮಾಯವಾದ್ರು. ಹತ್ತದಿನೈದು ನಿಮಿಷ ಮಾತ್ರ ಇದ್ದು ಮೀಟಿಂಗ್‌ನಿಂದ ಎಕ್ಸಿಟ್ ಆದ್ರು. ಅನಿವಾರ್ಯವಾಗಿ ಡಿಕೆಶಿಯೇ ಸಭೆ ಮುಂದುವರೆಸಿದ್ರು.

ಕೈಮುಗಿದು ಮನವಿ ಮಾಡಿದ‌ ಕೋಳಿವಾಡ

315 ಮುಖಂಡರ ಪೈಕಿ ಅನೇಕರು ಮಾತನಾಡಿದರು. ಈ ವೇಳೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮಾತನಾಡಿ, ಇಬ್ಬರು ನಾಯಕರು ಕಚ್ಚಾಟ ಬಿಡಿ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಗ್ಗಟ್ಟಾಗಿ ಚುನಾವಣೆ ಎದುರಿಸಿ. ಇದು ಜಗಳ ಮಾಡುತ್ತ ಕುಳಿತುಕೊಳ್ಳುವ ಸಮಯವಲ್ಲ ಎಂದು ಕೈಮುಗಿದು ಮನವಿ ಮಾಡಿದರು. ಕೋಳಿವಾಡ ಮಾತಿಗೆ ದನಿಗೂಡಿಸಿದ ಮಾಜಿ ಸಚಿವೆ ಮೋಟಮ್ಮ, ಹಿರಿಯ ನಾಯಕರ ಕಚ್ಚಾಟ ಮುಜುಗರ ತರುತ್ತಿದೆ. ಇಬ್ಬರೂ ಹೊಂದಾಣಿಕೆಯಿಂದ ಹೋಗಬೇಕು. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿಕೊಂಡರು. ಆದ್ರೆ ಇವರ ಮಾತಿಗೆ ಸಿದ್ದರಾಮಯ್ಯ ಅಥವಾ ಡಿಕೆಶಿ ಮರುಮಾತನಾಡದೇ ಸೈಲೆಂಟ್ ಆದ್ರು.

ರಾಜ್ಯ ಕಾಂಗ್ರೆಸ್‌ನಲ್ಲಿ ಎದ್ದ ನಾಯಕತ್ವ ಬಿರುಗಾಳಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಸಿದ್ದರಾಮಯ್ಯ ಬೆಂಬಲಿಗರ ಬಾಯಿಗೆ ಬೀಗ ಹಾಕುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಇದೆಲ್ಲದರ ಮಧ್ಯೆ ಮತ್ತೊಮ್ಮೆ ಹೈಕಮಾಂಡ್ ನಿಂದ ಕಾಂಗ್ರೆಸ್ ನಾಯಕರಿಗೆ‌ ಖಡಕ್ ಎಚ್ಚರಿಕೆ ಕೊಡಿಸುವ ಭರದಲ್ಲಿ ಡಿಕೆಶಿಗೆ ನಿರಾಸೆಯಾಗಿದೆ. ಗಂಭೀರವಾದ ಈ ಸಂದರ್ಭದಲ್ಲಿ ಉಸ್ತುವಾರಿ ಸುರ್ಜೇವಾಲಾ ಕಾಟಾಚಾರಕ್ಕೆ ಅಟೆಂಡ್ ಆಗಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಇದನ್ನು ಓದಿ: ಲಾಕ್​ಡೌನ್, ಸಾರಿಗೆ ನೌಕರರ ಪ್ರತಿಭಟನೆಯಿಂದ ಇಲಾಖೆಗೆ 4 ಸಾವಿರ ಕೋಟಿ ರೂ. ನಷ್ಟ: ಡಿಸಿಎಂ ಲಕ್ಷ್ಮಣ ಸವದಿ

ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಕಾಗೋಡು ತಿಮ್ಮಪ್ಪ ಆದಿಯಾಗಿ ಎಲ್ಲರೂ ಕೋವಿಡ್ ವಿಚಾರವನ್ನೇ ಹೆಚ್ಚು ಪ್ರಸ್ತಾಪಿಸಿದರು. ಕೋವಿಡ್ ಕಾರಣ ರಾಜ್ಯ ಸಂಕಷ್ಟದಲ್ಲಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಪರಿಹಾರ ಕೊಡದೆ ಲಾಕ್‌ಡೌನ್ ಘೋಷಣೆ ಮಾಡಿದರು. ಪರಿಹಾರ ಕೊಟ್ಟು ನಂತರ ಲಾಕ್‌ಡೌನ್ ಮಾಡಿ ಎಂದು ಆಗ್ರಹಿಸಿದೆವು. ನಂತರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಪ್ಯಾಕೇಜ್ ಜನರಿಗೆ ತಲುಪಿಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕು. ಮೃತಪಟ್ಟವರಿಗೆ 1ಲಕ್ಷ ರೂ ಮಾತ್ರ ಪರಿಹಾರ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಹೇಗೆ ಪರಿಹಾರ ಕೊಡುತ್ತಾರೆ. ಮೃತಪಟ್ಟ ಎಲ್ಲರಿಗೂ ಪರಿಹಾರ ನೀಡಬೇಕು. ಮೃತರ ಕುಟುಂಬಕ್ಕೆ 5 ಲಕ್ಷ ನೀಡಬೇಕು. ಜನರ ಸಮಸ್ಯೆಗಳನ್ನು ತಿಳಿಯಲು ಜುಲೈ ತಿಂಗಳಲ್ಲಿ ಅಭಿಯಾನ. ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಬೇಕು. ಎಲ್ಲ‌ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಯ್ತು.

ಹೈ ವೋಲ್ಟೇಜ್ ಮೀಟಿಂಗ್ ಎಂದು ಭಾವಿಸಿದ್ದ ಇಂದಿನ ವರ್ಚುವಲ್‌ ಸಭೆ ನಿರೀಕ್ಷಿತ ಚರ್ಚೆ ನಡೆಯಲಿಲ್ಲ. ಬಣ ರಾಜಕೀಯ, ಗುಂಪುಗಾರಿಕೆ, ಮೂಲ ವಲಸಿಗ ಕಿತ್ತಾಟಕ್ಕೆ ಮದ್ದು ನೀಡುತ್ತೆ ಎಂದು ಭಾವಿಸಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್  ಸುರ್ಜೇವಾಲಾ ಅವರು ಕೂಡ ಸಭೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ.

ವರದಿ: ದಶರಥ್ ಸಾವೂರು
Published by:HR Ramesh
First published: