ನಾಥೂರಾಮ ಗೋಡ್ಸೆ ಯಾರು? ಈತ ನಿಜಕ್ಕೂ ಮತಾಂಧನೆ ಅಥವಾ ದೇಶಭಕ್ತನೆ? ಇಲ್ಲಿದೆ ಡೀಟೈಲ್!

ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಕೋಮು ದಳ್ಳುರಿಯ ಮಾರಣ ಹೋಮದಲ್ಲಿ ಗಾಂಧಿ ಪಾಲ್ಗೊಳ್ಳಲಿಲ್ಲ. ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಆತ ಕತ್ತಿ ಎತ್ತಿ ನಿಂತಿದ್ದ ಗಾಂಧಿಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು. ಎಲ್ಲರೂ ನಮ್ಮವರೇ ಎಂಬ ಗಾಂಧಿಯ ತತ್ವದ ಅಗಾಧತೆಯನ್ನು ಅದರ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳುವಲ್ಲಿ ಗೋಡ್ಸೆ ವಿಫಲನಾಗಿದ್ದ.

MAshok Kumar | news18
Updated:June 22, 2020, 11:53 AM IST
ನಾಥೂರಾಮ ಗೋಡ್ಸೆ ಯಾರು? ಈತ ನಿಜಕ್ಕೂ ಮತಾಂಧನೆ ಅಥವಾ ದೇಶಭಕ್ತನೆ? ಇಲ್ಲಿದೆ ಡೀಟೈಲ್!
ನಾಥೂರಾಮ ಗೋಡ್ಸೆ.
 • News18
 • Last Updated: June 22, 2020, 11:53 AM IST
 • Share this:
ಅಶೋಕ್​ ಎಂ ಭದ್ರಾವತಿ

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಳೆದ 7 ದಶಕಗಳಿಂದ ನಿರಂತರವಾಗಿ ಚರ್ಚೆಗೆ ಒಳಗಾಗುತ್ತಿರುವ ಏಕೈಕ ಹೆಸರು ಎಂದರೆ 'ನಾಥೂರಾಮ್​ ವಿನಾಯಕ್ ಗೋಡ್ಸೆ' ಅಥವಾ ಗಾಂಧಿ ಹಂತಕ ಗೋಡ್ಸೆ.

ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಾಲದಿಂದ ಕಾಲಕ್ಕೆ ಬಹು ಚರ್ಚಿತ ವ್ಯಕ್ತಿತ್ವವಾಗಿದ್ದ ನಾಥೂರಾಮ್​ ಗೋಡ್ಸೆ ಕುರಿತು ವಿರೋಧ ಅಭಿಪ್ರಾಯ ಮಂಡಿಸುವವರ ಸಂಖ್ಯೆಯಷ್ಟೇ ಆತನ ಪರ ವಹಿಸುವವರ ಸಂಖ್ಯೆಯೂ ದೇಶದಲ್ಲಿ ಕಡಿಮೆ ಏನಿಲ್ಲ. ಆದರೆ, ಈ ಕುರಿತ ಚರ್ಚೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗುತ್ತಿದೆ. ಚರ್ಚಾಸ್ಪದ ವಿಚಾರವಾಗುತ್ತಿದೆ. ಇದಕ್ಕೆ ಕಾರಣ ಲೋಕಸಭೆ ಚುನಾವಣೆ 2019 ಎಂಬುದು ಉಲ್ಲೇಖಾರ್ಹ

ಮಹಾತ್ಮಾ ಗಾಂಧಿ ಇಡೀ ವಿಶ್ವಕ್ಕೆ ಶಾಂತಿಯ ಮಾದರಿಯಾದವರು. ಭಾರತದ ಸ್ವಾತಂತ್ರ್ಯ ಚಳುವಳಿಯ ರುವಾರಿ. ದೇಶಕ್ಕೆ ಅವರು ನೀಡಿದ ಕೊಡುಗೆ ಹಾಗೂ ತ್ಯಾಗಗಳನ್ನು ಪರಿಗಣಿಸಿಯೇ ಅವರಿಗೆ ರಾಷ್ಟ್ರಪಿತ ಸ್ಥಾನಮಾನ ನೀಡಲಾಗಿದೆ. ಅವರು ದೇಶ ಕಂಡ ಅತ್ಯುತ್ತಮ ನಾಯಕ, ರಾಜಕೀಯ ನೇತಾರ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಇಂತಹ ವ್ಯಕ್ತಿತ್ವವನ್ನು 1948 ಜನವರಿ 30 ರಂದು ಓರ್ವ ಹಿಂದೂ ಮತಾಂಧ ಗುಂಡಿಟ್ಟು ಕೊಂದಿದ್ದ. ಆತನ ಹೆಸರೇ ನಾಥೂರಾಮ್​ ಗೋಡ್ಸೆ. ಈತನನ್ನು ಕೆಲವರು ಹಿಂದೂ ಉಗ್ರಗಾಮಿ ಎಂದರೆ ಮತ್ತೆ ಕೆಲವರು ಅಪ್ರತಿಮ ದೇಶಭಕ್ತ ಎಂದು ಕೊಂಡಾಡುತ್ತಾರೆ.

ಅಸಲಿಗೆ ಯಾರೀ ನಾಥೂರಾಮ ಗೋಡ್ಸೆ? ಈತನ ಇತಿಹಾಸವೇನು? ಈತ ಗಾಂಧಿಯನ್ನು ಕೊಲ್ಲಲು ಕಾರಣವೇನು.? ದಶಕಗಳೇ ಕಳೆದರೂ ಈಗಲೂ ಈತ ಬಹು ಚರ್ಚಿತ ವಿಷಯವಾಗಿ ಉಳಿಯಲು ಕಾರಣವೇನು? ಇಲ್ಲಿದೆ ಈ ಕುರಿತ ಕಂಪ್ಲೀಟ್​ ಡೀಟೈಲ್.

ಕೋರ್ಟ್​ ಕಟಕಟೆಯಲ್ಲಿ ಗೋಡ್ಸೆ ಮತ್ತು ಸಾವರ್ಕರ್.


 ನಾಥೂರಾಮ್ ವಿನಾಯಕ್ ಗೋಡ್ಸೆ: ಪುಣೆ ಜಿಲ್ಲೆಯ ಚಿತ್ಪಾವನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅಂಚೆ ಇಲಾಖೆ ಉದ್ಯೋಗಿ ವಿನಾಯಕ ವಾಮನರಾವ್ ಗೋಡ್ಸೆ ಹಾಗೂ ತಾಯಿ ಲಕ್ಷ್ಮೀ ಎಂಬುವವರ ಐದನೇ ಮಗನಾಗಿ ಮೇ.19 1910 ರಲ್ಲಿ ಜನಿಸಿದವರೇ ನಾಥೂರಾಮ್​ ವಿನಾಯಕ್ ಗೋಡ್ಸೆ.ನಾಥೂರಾಮ್ ಗೋಡ್ಸೆಗಿಂತ ಮೊದಲು ಹುಟ್ಟಿದ ಮೂರೂ ಗಂಡು ಮಕ್ಕಳು ಕಿರಿ ವಯಸ್ಸಿನಲ್ಲಿಯೇ ತೀರಿಹೋದರು. ಬದುಕುಳಿದದ್ದು ಒಬ್ಬ ಸೋದರಿ ಮಾತ್ರ. ತಮ್ಮ ಕುಟುಂಬದ ಮೇಲೆ ಯಾವುದೋ ಶಾಪವಿದೆ ಎಂದುಕೊಂಡ ಪೋಷಕರು ಬಾಲಕ ರಾಮಚಂದ್ರನಿಗೆ ಬಾಲ್ಯದಲ್ಲೇ ಮೂಗು ಚುಚ್ಚಿಸಿ ಹುಡುಗಿಯರ ರೀತಿಯಲ್ಲಿ ಬೆಳೆಸಲು ಆರಂಭಿಸಿದ್ದರು. ಇದೇ ಕಾರಣಕ್ಕೆ ಆತನಿಗೆ ನಾಥೂರಾಮ(ಮೂಗು ಚುಚ್ಚಿಸಿಕೊಂಡ ರಾಮ) ಎಂಬ ಹೆಸರು ಬಂದಿತ್ತು.

ಬಾಲ್ಯದಿಂದಲೇ ಹಿಂದುತ್ವದ ಕುರಿತು ಅಪಾರ ಪ್ರೇಮವನ್ನು ಬೆಳೆಸಿಕೊಂಡಿದ್ದ ಗೋಡ್ಸೆ ಪ್ರೌಢಶಾಲೆಯಲ್ಲಿದ್ದಾಗಲೇ ಶಿಕ್ಷಣ ನಿಲ್ಲಿಸಿ ಹಿಂದೂ ಮಹಾಸಭಾದ ಕಾರ್ಯಕರ್ತನಾಗಿದ್ದ. ಅಲ್ಲದೆ ಹಿಂದೂ ಮಹಾಸಭಾ ಪರವಾಗಿ 'ಅಗ್ರಣಿ' ಎಂಬ ಮರಾಠಿ ಪತ್ರಿಕೆಯನ್ನೂ ಆರಂಭಿಸಿದ್ದ. ಮುಂದೆ ಅದರ ಹೆಸರನ್ನು 'ಹಿಂದೂ ರಾಷ್ಟ್ರ' ಎಂದು ಬದಲಾಯಿಸಲಾಗಿತ್ತು. ಹಿಂದೂ ಮಹಾಸಭಾ ಆರಂಭದಲ್ಲಿ ಬ್ರಿಟೀಷರ ವಿರುದ್ಧದ ಗಾಂಧಿ ಚಳುವಳಿಯನ್ನು ಬೆಂಬಲಿಸಿತ್ತು. ಈ ಸಂದರ್ಭದಲ್ಲಿ ಗೋಡ್ಸೆ ಸಹ ಗಾಂಧಿಯ ಅನುಯಾಯಿಯೇ ಆಗಿದ್ದ ಎನ್ನುತ್ತದೆ ಇತಿಹಾಸದ ಉಲ್ಲೇಖಗಳು.

ಇದನ್ನೂ ಓದಿ : 'ದೇಶದ ಮೊದಲ ಹಿಂದೂ ಉಗ್ರ ನಾಥೂರಾಮ್ ಗೋಡ್ಸೆ' ಎಂಬ ತನ್ನ ಹೇಳಿಕೆಗೆ ಬದ್ಧ; ನಟ ಕಮಲ್ ಹಾಸನ್

ಆದರೆ, 1942ರ ನಂತರ ಗಾಂಧಿ ಕುರಿತ ಗೋಡ್ಸೆಯ ಅಭಿಪ್ರಾಯ ಬದಲಾಗಿತ್ತು. ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿ ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆ ಎಂಬ ಆಭಿಪ್ರಾಯಗಳು ಗೋಡ್ಸೆಯಲ್ಲಿ ಮೂಡಲಾರಂಭಿಸಿದವು. ಅಲ್ಲದೆ ದೇಶ ವಿಭಜನೆಗೆ ಹಾಗೂ ಈಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಗಡಿ ಭಾಗಗಳು, ಬಂಗಾಳದಲ್ಲಿ ಉಂಟಾದ ಕೋಮುಗಲಭೆಗಳಿಗೆ ಗಾಂಧಿಯೇ ನೇರ ಕಾರಣ ಎಂಬುದು ಆತನ ಆರೋಪವಾಗಿತ್ತು.

ಈ ನಡುವೆ ವಿಭಜಿತ ಪಾಕಿಸ್ತಾನಕ್ಕೆ ಭಾರತ 55 ಕೋಟಿ ಹಣ ನೀಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುವ ಮಹಾತ್ಮ ಗಾಂಧಿಜಿ ತೀರ್ಮಾನವನ್ನು ಟೆಲಿಪ್ರಿಂಟರ್​ನಲ್ಲಿ ನೋಡಿದ ತಕ್ಷಣವೇ ಆ ಇಬ್ಬರೂ ದೊಡ್ಡ ನಿರ್ಣಯವೊಂದಕ್ಕೆ ಮುಂದಾಗಿದ್ದರು. ಮುಂದೆ ಈ ನಿರ್ಣಯವೇ ದೊಡ್ಡ ಅನಾಹುತಕ್ಕೆ ಕಾರಣವಾಗಿತ್ತು. ಅವರೇ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ.

ನಾಥೂರಾಮ ಗೋಡ್ಸೆ, ನಾರಾಯಣ ಆಪ್ಟೆ ಹಾಗೂ ಇತರರು.


ಗೋಡ್ಸೆ ಮತ್ತು ಆಪ್ಟೆ ಎಂಬ ತದ್ವಿರುದ್ಧ ವ್ಯಕ್ತಿತ್ವ: ನಾಥೂರಾಮ ಗೋಡ್ಸೆ ಮೂಲತಃ ಮೌನಿ, ಸರಳ ವ್ಯಕ್ತಿತ್ವ. ಹೆಂಗಸರು, ಮದ್ಯಪಾನ ಹಾಗೂ ಧೂಮಪಾನದಿಂದ ಮಾರು ದೂರ ಇದ್ದ ವ್ಯಕ್ತಿ. ಆತನ ಹೆಗ್ಗಳಿಕೆ ಎಂದರೆ ತನ್ನ ಮೊನಚು ಭಾಷಣದ ಮೂಲಕ ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯಬಲ್ಲ ಶಕ್ತಿ ಆತನಲ್ಲಿತ್ತು. ಆದರೆ ನಾರಾಯಣ ಆಪ್ಟೆಯದ್ದು ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವ. ದುಬಾರಿ ಉಡುಗೆ ಶೋಕಿ ಜೀವನವನ್ನು ಯಾವಾಗಲೂ ಇಷ್ಟಪಡುತ್ತಿದ್ದ ಆತನಿಗೆ ಎಲ್ಲಾ ಚಟಗಳು ಮೈಗೂಡಿದ್ದವು. ಇಷ್ಟೊಂದು ತದ್ವಿರುದ್ಧ ಗುಣಗಳಿರುವ ಇಬ್ಬರೂ ಒಟ್ಟಾಗಿ ಆತ್ಮೀಯರಾಗಿದ್ದೇ ಒಂದು ಅಸಹಜ ಬೆಳವಣಿಗೆಯಾಗಿತ್ತು.

ಇನ್ನೂ ಈ ಇಬ್ಬರೂ ಹಿಂದೂ ಮಹಾಸಭಾ ಸ್ಥಾಪಕ ವಿ.ಡಿ. ಸಾವರ್ಕರ್​ ಅವರನ್ನು ಭೆಟಿಯಾಗುತ್ತಿದ್ದಂತೆ ಗೋಡ್ಸೆ ತೀರಾ ಬದಲಾಗಿದ್ದ. ಅವರು ಯಾವುದಕ್ಕಾಗಿ ಹೋರಾಡುತ್ತಿದ್ದರೋ ಅದನ್ನೇ ತನ್ನ ಧ್ಯೇಯವಾಗಿಸಿಕೊಂಡಿದ್ದ. ಈ ಇಬ್ಬರ ಜೊತೆಗೆ ಪಾಕಿಸ್ತಾನದ ನಿರಾಶ್ರಿತ ಮದನ್​ಲಾಲ್​ ಪವಾಹ, ವಿಷ್ಣು ಕರ್ಕಾರೆ, ದಿಗಂಬರ ಬಾಡ್ಗೆ ಹಾಗೂ ಗೋಡ್ಸೆಯ ಖಾಸಾ ತಮ್ಮ ನಾಥೂರಾಮ ಗೋಪಾಲ್​ ಗೋಡ್ಸೆ ಜೊತೆಯಾಗುತ್ತಿದ್ದಂತೆ ಗಾಂಧಿ ಹತ್ಯೆಗೆ ರೂಪರೇಷೆ ಸಿದ್ದವಾಗಿತ್ತು.

ಇದನ್ನೂ ಓದಿ : ಗೋಡ್ಸೆ ದೇಶಭಕ್ತ ಎಂದ ಪ್ರಗ್ಯಾ ಠಾಕೂರ್; ಸಿಡಿದೆದ್ದ ವಿಪಕ್ಷಗಳು; ಬಿಜೆಪಿಯಿಂದಲೂ ಖಂಡನೆ; ಪಕ್ಷದ ಅಭಿಪ್ರಾಯಕ್ಕೆ ಬದ್ಧ ಎಂದು ಥೇಪೆ ಹಚ್ಚಿದ ಸಾಧ್ವಿ

ಗಾಂಧಿ ಹತ್ಯೆ ಮತ್ತು ಕಾರಣ: ಭಾರತದ ಇತಿಹಾಸದಲ್ಲಿ 1945 ರಿಂದ 1948 ರಾಜಕೀಯ ಸಂದಿಗ್ಧತೆಯ ಕಾಲ. ಹಿಂದೂಗಳ ಪರವಾಗಿ ಹಿಂದೂ ಮಹಾಸಭಾ ಹಾಗೂ ಗೋಡ್ಸೆಯಂತವರು ಬಯಸಿದ್ದನ್ನೆ, ಮುಸ್ಲೀಮರ ಪರ ಮಹಮ್ಮದ್ ಅಲಿ ಜಿನ್ನಾ ಬಯಸಿದ್ದ ಹಾಗೂ ಅದನ್ನು ಪಡೆಯುವಲ್ಲೂ ಸಫಲವಾಗಿದ್ದ. ಇದಕ್ಕೆ ಬ್ರಿಟೀಷ್ ಆಳರಸರ ತೆರೆಮರೆಯ ಬೆಂಬಲವೂ ಇತ್ತು. ಕೊನೆಗೂ 1947 ಆಗಸ್ಟ್​ 14 ನಡುರಾತ್ರಿ ದೇಶದ ಸ್ವಾತಂತ್ರ್ಯದ ಜೊತೆಗೆ ಜಿನ್ನಾ ಕಟುಕನ ಕತ್ತಿಯಿಂದ ದೇಶವನ್ನು ಇಬ್ಭಾಗ ಮಾಡಿದ್ದ. ಪರಿಣಾಮ ಎರಡೂ ದೇಶಗಳಲ್ಲೂ ಕೋಮು ಗಲಭೆಯ ಕಿಚ್ಚು ಹೊತ್ತಿಕೊಂಡಿತ್ತು.

ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಹಾಗೂ ಮುಸ್ಲೀಮರ ಹೆಣ ಬಿದ್ದವು. ಭಾರತ ಇಬ್ಭಾಗವಾಗುವುದನ್ನು ತಡೆಯಲು ಗಾಂಧಿ ಪಣತೊಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಕೋಮು ಗಲಭೆಯಿಂದ ನಲುಗಿದ್ದ ಪೂರ್ವ ಬಂಗಾಲದ ನವಾಖಲಿಗೆ ತೆರಳಿ ಹಿಂದೂಗಳ ರಕ್ಷಣೆಗಾಗಿ ಸತ್ಯಾಗ್ರಹ ಮಾಡಿದರು. ಬಿಹಾರದ ಮುಸಲ್ಮಾನರ ರಕ್ಷಣೆಗಾಗಿ ವಕಾಲತ್ತು ವಹಿಸಿದ್ದರು. ಕಲ್ಕತ್ತೆಯಲ್ಲಿ ಉಪವಾಸ ಮಾಡಿ ಹಿಂದೂ ಹಾಗೂ ಮುಸ್ಲಿಮರು ಶಸ್ತ್ರತ್ಯಾಗ ಮಾಡುವಂತೆ ಪ್ರೆರೇಪಿಸಿದ್ದರು. ತಮ್ಮಿಂದ ಸಾಧ್ಯವಾದಷ್ಟು ಶಾಂತಿ ಸ್ಥಾಪನೆಗೆ ಮುಂದಾಗಿದ್ದರು. ಏನಾದರೇನು.? ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದ ಮತೀಯ ಬೆಂಕಿಯನ್ನು ತನ್ನ ಶಾಂತಿಯ ಮಂತ್ರದಿಂದ ನಂದಿಸಲು ಪ್ರಯತ್ನಿಸಿದ ಗಾಂಧಿ ಕೊನೆಗೂ ಸೋತಿದ್ದರು. ದೇಶದ ವಿಭಜನೆ ಆಗಿಯೇ ಹೋಯಿತು. ತಾನೇ ಕಟ್ಟಿ ಬೆಳೆಸಿದ ಕಾಂಗ್ರೆಸ್ ಮತೀಯ ಗಲಭೆಗೆ ಹೆದರಿ ವಿಭಜನೆಗೆ ಸಹಿ ಹಾಕಿತ್ತು. ಜೊತೆಗೆ ಗಾಂಧಿಯ ಸಾವಿಗೂ ಷರ ಬರೆದಿತ್ತು.

ಇದನ್ನೂ ಓದಿ : ಗಾಂಧಿ-ಗೋಡ್ಸೆ ವಿವಾದಕ್ಕೆ ಕಿಡಿ ಹೊತ್ತಿಸಿದ ಅನಂತ್ ಕುಮಾರ್ ಟ್ವೀಟ್​ ಡಿಲೀಟ್; ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಗಾಂಧಿಯನ್ನು ಕೊಲ್ಲಲು ನಿರ್ಧಾರ ಮಾಡಿದ ಬಳಿಕ ಆಪ್ಟೆ ಹಾಗೂ ಗೋಡ್ಸೆ ಜನವರಿ.20ಕ್ಕೆ ದಿನಾಂಕ ನಿಗದಿ ಮಾಡಿದ್ದರು. ಬಳಿಕ ಯೋಜನೆ ಬದಲಿಸಿ ಜನವರಿ.30ಕ್ಕೆ ನಿಗದಿಪಡಿಸಲಾಯಿತು. ಅಂದು ಬೂದು ಬಣ್ಣದ ಅಂಗಿ ಧರಿಸಿದ ವ್ಯಕ್ತಿಯೊಬ್ಬ ಬಿರ್ಲಾ ಗೇಟ್ ಮೂಲಕ ಪ್ರವೇಶಿಸಿದಾಗ ಯಾರೂ ಆತನನ್ನು ತಪಾಸಣೆ ಮಾಡಲಿಲ್ಲ. ಗಾಂಧೀಜಿ ಜನತೆಯತ್ತ ಕೈಬೀಸುತ್ತಾ ಪ್ರಾರ್ಥನೆಗೆ ತೆರಳುವ ಹೊತ್ತಿಗೆ ಕೇವಲ ಕೆಲವೇ ಅಡಿಗಳ ಮುಂದೆ ನಿಂತಿದ್ದ ಗೋಡ್ಸೆ ನೋಡನೋಡುತ್ತಿದ್ದಂತೆ ಅವರ ಎದೆಗೆ ನಾಲ್ಕು ಗುಂಡುಗಳನ್ನು ಹೊಕ್ಕಿಸಿದ್ದ. ತನ್ನ ಜೀವಮಾನವಿಡೀ ಶಾಂತಿ ಸ್ಥಾಪನೆಗಾಗಿ ಹೋರಾಡಿದ್ದ ಬಾಪು ಕೊನೆಗೂ ರಕ್ತದೋಕುಳಿಯಲ್ಲಿ ಕೊನೆಯುಸಿರೆಳೆದಿದ್ದರು. ಸ್ವಾತಂತ್ರ್ಯ ಭಾರತದ ಮೊದಲ ರಾಜಹತ್ಯೆ ಹೀಗೆ ನಡೆದುಹೋಗಿತ್ತು.

ಗಾಂಧಿ ಮತ್ತು ಗೋಡ್ಸೆ.


ಹತ್ಯೆಗೆ ಗೋಡ್ಸೆಯ ಸಮರ್ಥನೆ ಏನು..?

ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್​ ವಿಚಾರಣೆಯಲ್ಲಿ ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ ಎಂದು ಗೋಡ್ಸೆ ತನ್ನ ಪರ ವಾದವನ್ನು ಸವಿವರವಾಗಿ ಮಂಡಿಸಿದ್ದ, ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಗಾಂಧೀಜಿ ವಿರುದ್ಧ ಆತನ ತಕರಾರೆಂದರೆ?

 1. . ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು..!

 2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ..!

 3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು ಇದು ಸರಿಯಲ್ಲ..!

 4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು..!

 5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿ ಮೌನ ವಹಿಸಿದ್ದರು..!

 6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು..!

 7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು..!

 8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೊರಲಿಲ್ಲ..!

 9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ..!

 10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ..!


ಇವು ಗಾಂಧಿ ಹತ್ಯೆಗೆ ಗೋಡ್ಸೆ ನೀಡಿದ ಸಮರ್ಥನೆ. ಆದರೆ, ನಿಜದಲ್ಲಿ ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಕೋಮು ದಳ್ಳುರಿಯ ಮಾರಣ ಹೋಮದಲ್ಲಿ ಗಾಂಧಿ ಪಾಲ್ಗೊಳ್ಳಲಿಲ್ಲ. ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಆತ ಕತ್ತಿ ಎತ್ತಿ ನಿಂತಿದ್ದ ಗಾಂಧಿಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು. ಎಲ್ಲರೂ ನಮ್ಮವರೇ ಎಂಬ ಗಾಂಧಿಯ ತತ್ವದ ಅಗಾಧತೆಯನ್ನು ಅದರ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳುವಲ್ಲಿ ಗೋಡ್ಸೆ ವಿಫಲನಾಗಿದ್ದ. ಈ ನಡುವೆ ಗೋಡ್ಸೆ ಹಿಂದೂ ಧರ್ಮದ ಕಾರಣಕ್ಕೆ ಗಾಂಧಿಯನ್ನು ಕೊಂದ ಎನ್ನುತ್ತಿದೆ ಇತಿಹಾಸ. ಹಾಗಾದರೆ ನಿಜಕ್ಕೂ ನಾಥೂರಾಮ ಗೋಡ್ಸೆ ದೇಶಭಕ್ತನ..? ಅಥವಾ ದೇಶದ ಮೊದಲ ಹಿಂದೂ ಉಗ್ರಗಾಮಿಯಾ..? ಇದು ಪ್ರಸ್ತುತ ಮಿಲಿಯನ್ ಡಾಲರ್ ಪ್ರಶ್ನೆ
First published: May 18, 2019, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading